ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಬಂಪರ್ ಎಳ್ಳು ಬೆಳೆ: 3 ತಿಂಗಳಲ್ಲೇ ₹5 ಲಕ್ಷ ಆದಾಯ ನಿರೀಕ್ಷೆ

Published 20 ಏಪ್ರಿಲ್ 2024, 6:23 IST
Last Updated 20 ಏಪ್ರಿಲ್ 2024, 6:23 IST
ಅಕ್ಷರ ಗಾತ್ರ

ಗುಮ್ಮಾ (ಜನವಾಡ): ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆ ಹೊರತುಪಡಿಸಿ ಬೇರಾವ ಬೆಳೆಯೂ ಬರುವುದಿಲ್ಲ. ಹೀಗಾಗಿ ಬಹುತೇಕ ಹೊಲಗಳು ಖಾಲಿ ಇರುತ್ತವೆ. ಆದರೆ, ಇಲ್ಲೊಬ್ಬರು ಯುವ ರೈತ ಬೇಸಿಗೆಯಲ್ಲೇ ಬಿಳಿ ಎಳ್ಳು ಬೆಳೆಯ ಬಂಪರ್ ಇಳುವರಿ ಪಡೆದು ಗಮನ ಸೆಳೆದಿದ್ದಾರೆ.

ಗುಮ್ಮಾ ಗ್ರಾಮದ ಪ್ರಶಾಂತ ಶಶಿಕಾಂತ ಪಾಟೀಲ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಬೇಸಿಗೆಯಲ್ಲಿ ಬಿಳಿ ಎಳ್ಳು ಕೃಷಿಯಲ್ಲಿ ಯಶ ಕಂಡಿದ್ದಾರೆ.

ತಮ್ಮ 19 ಎಕರೆ ಪೈಕಿ 10 ಎಕರೆಯಲ್ಲಿ ಶ್ವೇತಾ ತಳಿಯ ಬಿಳಿ ಎಳ್ಳು ಬೆಳೆದಿದ್ದಾರೆ. ಈಗಾಗಲೇ 9 ಎಕರೆ ಬೆಳೆ ಕಟಾವು ಮಾಡಿದ್ದಾರೆ. ಎಕರೆಗೆ 4 ಕ್ವಿಂಟಲ್‍ನಂತೆ 36 ಕ್ವಿಂಟಲ್ ಇಳುವರಿ ಬಂದಿದೆ. ಇನ್ನೂ 1 ಎಕರೆ ಕಟಾವು ಬಾಕಿ ಇದೆ.

ಬೇಸಿಗೆಯಲ್ಲಿ ಹೊಲ ಖಾಲಿ ಇಡದೆ ಎಳ್ಳು ಬೆಳೆಯುವಂತೆ ಕೃಷಿ ಸಂಶೋಧನಾ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಆರ್.ಎಲ್.ಜಾಧವ ಸಲಹೆ ನೀಡಿದ್ದರು. ಅವರ ಮಾರ್ಗದರ್ಶನದಂತೆ 10 ಎಕರೆಯಲ್ಲಿ ಬೀಜ ಊರುವಿಕೆ ಹಾಗೂ ಬಿತ್ತನೆ ಪದ್ಧತಿಯಲ್ಲಿ ಶ್ವೇತಾ ತಳಿಯ ಬಿಳಿ ಎಳ್ಳು ಬೆಳೆದಿದ್ದೇನೆ ಎಂದು ತಿಳಿಸುತ್ತಾರೆ 32 ವರ್ಷದ ಪ್ರಶಾಂತ ಪಾಟೀಲ.

ಹೊಲದಲ್ಲಿ ಎರಡು ಕೊಳವೆ ಬಾವಿಗಳಿದ್ದು, ಯಥೇಚ್ಛ ನೀರಿದೆ. ಸ್ಪಿಂಕ್ಲರ್ ಮೂಲಕ ಬೆಳೆಗೆ ನೀರುಣಿಸಿದ್ದೇನೆ. 90 ದಿನಗಳಲ್ಲೇ ಸಮೃದ್ಧ ಬೆಳೆ ಬಂದಿದೆ ಎಂದು ಹೇಳುತ್ತಾರೆ.

ಬೀಜ, ಗೊಬ್ಬರ, ಔಷಧಿ, ಕಳೆ ಕೀಳುವುದು, ರಾಶಿ ಮಾಡುವುದು ಸೇರಿದಂತೆ ಪ್ರತಿ ಎಕರೆಗೆ ₹8 ಸಾವಿರದಿಂದ ₹10 ಸಾವಿರ ಖರ್ಚಾಗಿದೆ ಎಂದು ತಿಳಿಸುತ್ತಾರೆ.

ಸದ್ಯ 9 ಎಕರೆಯಲ್ಲಿ 36 ಕ್ವಿಂಟಲ್ ಎಳ್ಳು ಇಳುವರಿ ಬಂದಿದೆ. ಇನ್ನೊಂದು ಎಕರೆಯಲ್ಲಿ 4 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಳ್ಳಿನ ಬೆಲೆ ಕ್ವಿಂಟಲ್‍ಗೆ ₹15 ಸಾವಿರದಿಂದ ₹17 ಸಾವಿರದವರೆಗೆ ಇದೆ. ₹15 ಸಾವಿರದಂತೆ ಮಾರಾಟವಾದರೂ ₹6 ಲಕ್ಷ ಬರಲಿದೆ. ₹1 ಲಕ್ಷ ಖರ್ಚು ತೆಗೆದರೂ ₹5 ಲಕ್ಷ ಆದಾಯ ದೊರೆಯಲಿದೆ ಎಂದು ಹೇಳುತ್ತಾರೆ.

ಶ್ವೇತಾ ತಳಿಯ ಎಳ್ಳು ಬೆಳೆಯಿಂದ ಶೀಘ್ರದಲ್ಲೇ ಬರಲಿರುವ ಆದಾಯ ತಮಗೆ ಬೇಸಿಗೆಯ ಬೋನಸ್ ಆಗಲಿದೆ. ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ಪ್ರೇರಣೆಯೂ ಆಗಲಿದೆ
- ಪ್ರಶಾಂತ ಪಾಟೀಲ ರೈತ
ಜಿಲ್ಲೆಯ ಅನೇಕ ರೈತರು ಬೇಸಿಗೆಯಲ್ಲಿ ಶ್ವೇತಾ ತಳಿಯ ಎಳ್ಳು ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಕೆಲವರು ಅಂತರ ಬೆಳೆಯಾಗಿಯೂ ಬೆಳೆಯುತ್ತಿದ್ದಾರೆ
-ಆರ್.ಎಲ್.ಜಾಧವ ಬೇಸಾಯಶಾಸ್ತ್ರ ವಿಜ್ಞಾನಿ
‘ಬೇಸಿಗೆಯಲ್ಲಷ್ಟೇ ಬೆಳೆಯುವ ಶ್ವೇತಾ ತಳಿಯ ಎಳ್ಳು’
ಶ್ವೇತಾ ತಳಿಯ ಎಳ್ಳು ಬೇಸಿಗೆಯಲ್ಲಿ ಮಾತ್ರ ಬೆಳೆಯುತ್ತದೆ. ಮುಂಗಾರಿನಲ್ಲಿ ಬೆಳೆದರೆ ಕಾಯಿಗಟ್ಟುವುದಿಲ್ಲ. ಇದು ಕೇವಲ 90 ದಿನಗಳ ಬೆಳೆಯಾಗಿದೆ. ರೈತರ ಆದಾಯ ಹೆಚ್ಚಳಕ್ಕೆ ಉತ್ತಮ ಆಯ್ಕೆ ಇದಾಗಿದೆ ಎಂದು ಬೇಸಾಯಶಾಸ್ತ್ರ ವಿಜ್ಞಾನಿ ಆರ್.ಎಲ್.ಜಾಧವ ಹೇಳುತ್ತಾರೆ. ನೀರಾವರಿ ಸೌಲಭ್ಯ ಹೊಂದಿದವರು ಮುಂಗಾರು ಹಾಗೂ ಹಿಂಗಾರು ಬೆಳೆ ತೆಗೆದ ನಂತರ ಜನವರಿಯಿಂದ ಫೆಬ್ರುವರಿ ಅಂತ್ಯದವರೆಗೆ ಎಳ್ಳು ಬಿತ್ತನೆ ಮಾಡಬಹುದು ಎಂದು ತಿಳಿಸುತ್ತಾರೆ. ಕಾಡು ಪ್ರಾಣಿಗಳು ಈ ಬೆಳೆಯನ್ನು ತಿನ್ನುವುದಿಲ್ಲ. ಹೀಗಾಗಿ ಅವುಗಳಿಂದ ಯಾವುದೇ ಹಾನಿ ಆಗುವುದಿಲ್ಲ. ಬೇಸಾಯದ ಖರ್ಚು ಕೂಡ ಕಡಿಮೆ ಇದೆ. ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ಬರುತ್ತದೆ ಎಂದು ಹೇಳುತ್ತಾರೆ. ಎಣ್ಣೆ ಕಾಳು ಬೆಳೆಗಳ ಕ್ಷೇತ್ರ ಕಡಿಮೆ ಆಗಿರುವ ಕಾರಣ ರಾಜ್ಯ ಹಾಗೂ ದೇಶದಲ್ಲಿ ಎಣ್ಣೆ ಕಾಳು ಬೆಳೆಗಳಿಗೆ ಬೇಡಿಕೆ ಹೆಚ್ಚಿದೆ. ಉತ್ತಮ ಬೆಲೆಯೂ ಇದೆ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT