ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೈರಾದ ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಟಿ.ಎಸ್‌. ನಾಗಾಭರಣ ಸೂಚನೆ
Last Updated 4 ಜನವರಿ 2021, 13:44 IST
ಅಕ್ಷರ ಗಾತ್ರ

ಬೀದರ್: ‘ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಗೆ ಗೈರಾದ ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.

ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರ ಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

‘ಜಿಲ್ಲೆಯಲ್ಲಿ ಕನ್ನಡದ ಪರಿಸ್ಥಿತಿ ಹಾಗೂ ಭೌಗೋಳಿಕ ಸ್ಥಿತಿಗಳ ಮಾಹಿತಿ ಪಡೆಯಲಾಗಿದೆ. ಗಡಿ ಶಾಲೆಗಳ ಕನ್ನಡ ಶಿಕ್ಷಕರು ನಿಯೋಜನೆಯ ಮೇಲೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಕನ್ನಡ ಶಿಕ್ಷಕರೇ ಇಲ್ಲ ಎನ್ನುವ ದೂರುಗಳು ಬಂದಿವೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ ವಿವರವಾದ ಮಾಹಿತಿ ಕೇಳಲಾಗಿದೆ’ ಎಂದು ತಿಳಿಸಿದರು.

‘ಬ್ಯಾಂಕ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆಯಾಗಬೇಕು. ಅರ್ಜಿಗಳು, ಸ್ಲಿಪ್‌ಗಳು ಹಾಗೂ ಸಂದೇಶಗಳು ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ರಾಜ್ಯದ ಸಿಬ್ಬಂದಿ ಕನ್ನಡ ಕಲಿಯಬೇಕು. ಕೆಲಸಕ್ಕೆ ಸೇರಿ ಹಲವು ವರ್ಷ ಕಳೆದರೂ ಕನ್ನಡ ಕಲಿಯದ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿ ಸದಸ್ಯರ ನೇಮಕವಾದರೂ ತಾಲ್ಲೂಕು ಮಟ್ಟದಲ್ಲಿ ಆಗಿಲ್ಲ. ತಾಲ್ಲೂಕು ಮಟ್ಟದಲ್ಲಿ ಸದಸ್ಯರ ನೇಮಕ ಆಗಬೇಕು. ಕನ್ನಡ ಅನುಷ್ಠಾನದಲ್ಲಿ ಬೀದರ್‌ ರಾಜ್ಯಕ್ಕೆ ಮಾದರಿಯಾಗಬೇಕು. ವಿಚಿತ್ರ ಪರಿಸ್ಥಿತಿ ಯಲ್ಲೂ ಅದ್ಭುತವಾಗಿ ಕನ್ನಡ ಕಟ್ಟುವ ಕೆಲಸ ಆಗಬೇಕಿದೆ’ ಎಂದು ತಿಳಿಸಿದರು.

‘ಹೊಸ ಸಮಸ್ಯೆಗಳು ಎದುರಾಗಿಲ್ಲ. ಹಳೆಯ ಸಮಸ್ಯೆಗಳೇ ಈಗಲೂ ಮುಂದುವರಿದಿವೆ. ಅವುಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಿದೆ. ಎಲ್ಲವನ್ನೂ ಕಾನೂನಿನ ಪ್ರಕಾರ ಮಾಡಲಾಗದು. ಪ್ರೀತಿ, ವಿಶ್ವಾಸದ ಮೂಲಕ ಕನ್ನಡ ಉಳಿ ಸಿಕೊಳ್ಳಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT