ಗುರುವಾರ , ಸೆಪ್ಟೆಂಬರ್ 23, 2021
26 °C
ಪ್ರಾರ್ಥನಾ ಮಂದಿರಗಳಲ್ಲಿ ಕೋವಿಡ್‌ ನಿಯಮ ಪಾಲಿಸದ ಜನ

ಶ್ರಾವಣ ಸೋಮವಾರ: ದೇವಸ್ಥಾನಗಳಲ್ಲಿ ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಶ್ರಾವಣ ಮಾಸದ ಕೊನೆಯ ಸೋಮವಾರ ಪ್ರಯುಕ್ತ ಜಿಲ್ಲೆಯ ವಿವಿಧ ಮಂದಿರಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ತೆಲಂಗಾಣ ಹಾಗೂ ಮಹಾರಾಷ್ಟ್ರದ ನೂರಾರು ಭಕ್ತರು ನಗರದ ಹೊರ ವಲಯದಲ್ಲಿರುವ ನರಸಿಂಹ ಝರಣಾ ಗುಹಾದೇವಾಲಯಕ್ಕೆ ಬಂದು ನರಸಿಂಹ ದೇವರ ದರ್ಶನ ಪಡೆದರು. ವಿಶೇಷ ಅಭಿಷೇಕ ನೆರವೇರಿಸಿ ತೆಂಗಿನಕಾಯಿ ಒಡೆದು ಕರ್ಪೂರ ಹಚ್ಚಿ ಭಕ್ತಿಭಾವ ತೋರಿದರು.

ಮಂದಿರದ ಆವರಣದಲ್ಲಿ ಭಕ್ತರ ಉದ್ದನೆಯ ಸಾಲು ಕಂಡು ಬಂದಿತು. ದೇವಸ್ಥಾನ ಆಡಳಿತ ಮಂಡಳಿಯವರು ಮಾಸ್ಕ್‌ ಧರಿಸಿ ಅಂತರ ಕಾಯ್ದುಕೊಂಡು ನಿಲ್ಲುವಂತೆ ಪದೇ ಪದೇ ಮನವಿ ಮಾಡುತ್ತಿದ್ದರೂ ಭಕ್ತರು ಗಂಭೀರವಾಗಿ ಪರಿಗಣಿಸಲಿಲ್ಲ. ಅನೇಕರು ಮಾಸ್ಕ್‌ ಸಹ ಧರಿಸಿರಲಿಲ್ಲ.

ತೆಲಂಗಾಣದಿಂದ ಬಂದಿದ್ದ ಭಕ್ತರು ದೇವಸ್ಥಾನದ ಆವರಣದಲ್ಲೇ ನೈವೇದ್ಯ ಸಿದ್ಧಪಡಿಸಿ ದೇವರಿಗೆ ಸಮರ್ಪಿಸಿದರು. ಕೆಲವರು ದೇವಸ್ಥಾನದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದರು. ದೇವರ ದರ್ಶನ ಪಡೆದ ನಂತರ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ಖರೀದಿಸಿ ಮನೆಗಳಿಗೆ ತೆರಳಿದರು.

ನಗರದ ಕೇಂದ್ರ ಸ್ಥಾನದಲ್ಲಿರುವ ಪಾಪನಾಶ ದೇವಸ್ಥಾನದಲ್ಲಿ ಸಹ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರಿಗೆ ತೆಂಗಿನಕಾಯಿ ಒಡೆದು, ಬಿಲ್ವಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು.

ಬೀದರ್‌ ತಾಲ್ಲೂಕಿನ ಹೊನ್ನಿಕೇರಿ ದೇವಸ್ಥಾನದಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದರು. ಬೆಳಿಗ್ಗೆಯಿಂದ ಸಂಜೆಯ ವರೆಗೂ ದೇವರ ದರ್ಶನಕ್ಕೆ ಉದ್ದನೆಯ ಸಾಲು ಕಂಡು ಬಂದಿತು.

ಹರಕೆ ಹೊತ್ತ ಭಕ್ತರು ದೇವಸ್ಥಾನದ ಆವರಣದಲ್ಲಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಿದರು. ನಂತರ ತೆಂಗಿನಕಾಯಿ ಒಡೆದು ಅಗರಬತ್ತಿ ಹಾಗೂ ಕರ್ಪೂರ ಬೆಳಗಿ ಕೃತಾರ್ಥರಾದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.