ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮ ಜ್ಞಾನ ಧಾರೆ ಎರೆಯುವ ವಚನಗಳು

ಶ್ರಾವಣ ವಚನ ಪಠಣ ಅಭಿಯಾನ ಸಮಾರೋಪದಲ್ಲಿ ಅಕ್ಕ ಅನ್ನಪೂರ್ಣ ಅಭಿಮತ
Last Updated 21 ಆಗಸ್ಟ್ 2020, 10:27 IST
ಅಕ್ಷರ ಗಾತ್ರ

ಬೀದರ್: ‘ಶರಣರ ದೃಷ್ಟಿಯಲ್ಲಿ ಭೌತಿಕವಾದ ಭೂಮಿ-ಹೇಮಗಳು ಸಂಪತ್ತಲ್ಲ. ಪರಮ ಜ್ಞಾನವೇ ನಿಜವಾದ ಸಂಪತ್ತು. ಅದನ್ನು ಧಾರೆಯೆರೆಯುವ ವಚನಗಳು ಶರಣರು ಈ ಲೋಕಕ್ಕೆ ನೀಡಿದ ಸವೆಯದ ಸಂಪತ್ತು’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ನಗರದ ಬಸವಗಿರಿಯಲ್ಲಿ ಆಯೋಜಿಸಿದ್ದ ಮನೆ-ಮನೆಯಲ್ಲಿ ನಡೆದ ವಚನ ಪಠಣ ಅಭಿಯಾನದ ಸಮಾರೋಪವನ್ನು ಸಾಮೂಹಿಕವಾಗಿ ವಚನ ಪಠಣ ಮಾಡಿಸುವುದರ ಮೂಲಕ ನೆರವೇರಿಸಿ ಅವರು ಮಾತನಾಡಿದರು.

‘ವಚನಗಳು ಶ್ರೇಷ್ಠ ಮಂತ್ರಗಳು. ಸುಖ-ಶಾಂತಿ-ನೆಮ್ಮದಿಯ ಬದುಕಿನ ಅಮೂಲ್ಯ ಸೂತ್ರಗಳಾಗಿವೆ. ವಚನಗಳಲ್ಲಿ ಶರಣ ದರ್ಶನವಿದೆ. ವಚನ ಸಾಹಿತ್ಯ ಇದ್ದ ಮನೆ ಮಹಾಮನೆ. ಆದ್ದರಿಂದ ಮನೆ-ಮನೆಗಳಲ್ಲಿ ವಚನ ಸಾಹಿತ್ಯದ ಸೌರಭ ಹರಡಲಿ, ಸದ್ಭಾವ ಸಂಪದ ತುಂಬಲಿ ಎನ್ನುವ ಸದುದ್ದೇಶದಿಂದ ವಚನ ಪಠಣ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ಸ್ಪಂದಿಸಿ ಸಾವಿರಾರು ಮನೆಗಳಲ್ಲಿ ವಚನ ಪಠಣ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ತಿಳಿಸಿದರು.

‘ಲೋಕದ ಸರ್ವ ಸಮಸ್ಯೆಗಳಿಗೆ ಪರಿಹಾರವಿರುವ ವಚನ ಸಾಹಿತ್ಯ ಅಧ್ಯಯನದಿಂದ ಉತ್ತಮ ಸಂಸ್ಕೃತಿಯ ಗುಣಗಳಾದ ಭಕ್ತಿ, ಶ್ರದ್ಧೆ, ಜ್ಞಾನ, ವಿನಯ, ಧೈರ್ಯ ಮತ್ತು ಆತ್ಮವಿಶ್ವಾಸ ಗುಣಗಳು ಮೈಗೂಡಿ ಸಶಕ್ತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಶ್ರಾವಣ ಮಾಸದ ಅಭಿಯಾನ ಸಮಾರೋಪಗೊಂಡರೂ ಪ್ರತಿಯೊಬ್ಬರೂ ಪ್ರತಿದಿನ ಕಡ್ಡಾಯವಾಗಿ ಕನಿಷ್ಠ 5 ವಚನಗಳನ್ನಾದರೂ ಓದಬೇಕು’ ಎಂದು ಹೇಳಿದರು.

ರಮೇಶ ಮಠಪತಿ ಮಾತನಾಡಿ, ‘1998 ರಲ್ಲಿ ಅನುಭವ ಮಂಟಪದಲ್ಲಿಯ ಬಸವಾದಿ ಪ್ರಮಥರ ಅನುಭಾವ ಮಂಥನದಿಂದ ಉದಯಿಸಿದ ವಚನಗಳ ಜಾಗೃತಿ ಉದ್ದೇಶದಿಂದ ವಚನ ಪಠಣ ಅಭಿಯಾನವನ್ನು ಅಕ್ಕ ಅವರು ಘೋಷಿಸಿದ್ದರು. ಇದೇ ಮೊದಲ ಬಾರಿಗೆ ಅಂತರ್ಜಾಲದಲ್ಲಿ ಹೆಸರು ನೋಂದಾಯಿಸಿ ವಚನ ಪಠಣಕ್ಕೆ ಅವಕಾಶ ನೀಡಲಾಗಿತ್ತು. ಇದಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದೆ’ ಎಂದು ನುಡಿದರು.

‘ನೂರಾರು ಜನ ಹೆಸರು ನೋಂದಾಯಿಸಿ ವಚನ ಪಠಣಗೈದರೆ, ಸಾವಿರಾರು ಮನೆಗಳಲ್ಲಿ ಶ್ರಾವಣ ಮಾಸದಾದ್ಯಂತ ಪ್ರತಿಯೊಬ್ಬರೂ ಪ್ರತಿದಿನ 108 ವಚನ ಪಠಣ ಮಾಡಿದ್ದಾರೆ. ಒಟ್ಟಾರೆ ಶ್ರಾವಣ ಮಾಸದಲ್ಲಿ ಸುಮಾರು 35 ಲಕ್ಷಕ್ಕೂ ಅಧಿಕ ವಚನಗಳು ಓದಲ್ಪಟ್ಟಿವೆ’ ಎಂದು ಮಾಹಿತಿ ನೀಡಿದರು.

‘ಅಕ್ಕ ಅವರ ಬಾವನ್ನ ಬಸವಣ್ಣ ವಿಷಯ ಕುರಿತು ಜರುಗುತ್ತಿರುವ ಪ್ರವಚನವು ಕೋವಿಡ್-19 ಮಹಾಮಾರಿಯ ಈ ದುರ್ಧರ ಪ್ರಸಂಗದಲ್ಲಿ ಭಕ್ತಾದಿಗಳಿಗೆ ಸಾಂತ್ವನ ನೀಡುತ್ತಿರುವುದರಿಂದ, ಪ್ರವಚನವನ್ನು ನೂರೆಂಟು ದಿನಗಳಿಗೆ ವಿಸ್ತರಿಸಲಾಗಿದೆ. ಭಕ್ತರು ಇದರ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.

ಬಸವಗಿರಿಯ ಪ್ರಭುದೇವರು, ಮಾಣಿಕಪ್ಪ ಗೋರನಾಳೆ, ನೀಲಮ್ಮನ ಬಳಗದ ಜೈಶ್ರೀ ಪ್ರಕಾಶ ಮಠಪತಿ, ನೀಲಾಂಬಿಕೆ ಮಠಪತಿ, ಪರುಷಕಟ್ಟೆಯ ಚನ್ನಬಸವಣ್ಣ, ಬಸವಜ್ಯೋತಿ ಸಮ್ಮುಖ ವಹಿಸಿದ್ದರು. ಸಿ.ಎಸ್. ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಸಾಧಕ ಅಜಗಣ್ಣ ನಿರೂಪಿಸಿದರು. ರಾಜಕುಮಾರ ಹಿರೇಮಠ ವಚನ ಭಜನೆ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT