ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ಮಾಡಿದ ಕೇಂದ್ರ ಸಚಿವ ಖೂಬಾ

ಸೌರ ನಗರ ಯೋಜನೆ: ಬೀದರ್ ಆಯ್ಕೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸೌರ ನಗರ ಯೋಜನೆಗೆ ಬೀದರ್ ನಗರವನ್ನು ಆಯ್ಕೆ ಮಾಡಬೇಕು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅವರು, ಯೋಜನೆಗೆ ಬೀದರ್ ಸೂಕ್ತವಾಗಿದೆ. ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದಲ್ಲಿ ಜಿಲ್ಲೆಯ ರೈತರು ಹಾಗೂ ಯುವಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬೀದರ್‌ನ ಗುರುದ್ವಾರ, ಪಾಪನಾಶ ಮಂದಿರ, ನರಸಿಂಹ ಝರಣಾ ದೇವಸ್ಥಾನ, ಸಿದ್ಧಾರೂಢ ಮಠ, ಮಾಣಿಪ್ರಭು ದೇವಸ್ಥಾನ ಹಾಗೂ ಜಾನಾ ಮಸೀದಿಗಳನ್ನು ಪ್ರಸಾದ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಕೇಂದ್ರದಿಂದ ಜಿಲ್ಲೆಯಲ್ಲಿ ಸಿಪೆಟ್ ಸ್ಥಾಪನೆಗೆ 10 ಎಕರೆ ಜಮೀನು ಹಾಗೂ ನಿರ್ಮಾಣ ವೆಚ್ಚದ ಶೇ 50 ಅನುದಾನ ಒದಗಿಸಬೇಕು ಎಂದು ಕೋರಿದರು.

ಜಿಲ್ಲೆಯಲ್ಲಿ ಖೆಲೋ ಇಂಡಿಯಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವಾಲಯಕ್ಕೆ ಡಿಪಿಆರ್ ಕಳುಹಿಸಬೇಕು. ಬಿದ್ರಿ ಕಲೆಗೆ ಪ್ರೋತ್ಸಾಹ ನೀಡಲು ಕೇಂದ್ರದ ಸಮಗ್ರ ಕರಕುಶಲ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಅನುದಾನ ಕಲ್ಪಿಸಲಾಗುತ್ತಿದೆ. ಕಾರಣ, ಬೀದರ್‍ನಲ್ಲಿ ಬಿದ್ರಿ ಕಲೆಯ ಮಳಿಗೆ ಆರಂಭಿಸಬೇಕು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ದೆಹಲಿಯ ಎಐಸಿಟಿಇ ಮಾನ್ಯತೆ ದೊರಕಿಸಿ ಕೊಡಬೇಕು ಎಂದು ಬೇಡಿಕೆ ಇಟ್ಟರು.

ಬೀದರ್‍ನಲ್ಲಿ ರೈತರ ಅನುಕೂಲಕ್ಕಾಗಿ ಇನ್‍ಸ್ಟಿಟ್ಯೂಟ್ ಆಫ್ ಪೆಸ್ಟಿಸೈಡ್ಸ್ ಫಾರ್ಮುಲೇಷನ್ ಟೆಕ್ನಾಲಜಿ (ಐಪಿಎಫ್‍ಟಿ) ಹಾಗೂ ಯುವಕರಿಗೆ ನೆರವಾಗಲು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫಾರೇನ್ ಟ್ರೇಡ್ (ಐಐಎಫ್‍ಟಿ) ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ವಿನಂತಿಸಿದರು.

ಎಲ್ಲ ಬೇಡಿಕೆಗಳ ಸಂಬಂಧ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಖೂಬಾ ತಿಳಿಸಿದ್ದಾರೆ. ರಾಜ್ಯದ ಸಚಿವರಾದ ಬಿ.ಸಿ. ಪಾಟೀಲ, ವಿ. ಸುನೀಲಕುಮಾರ, ಪ್ರಭು ಚವಾಣ್ ಇದ್ದರು.

ನಿರಾಣಿ ಭೇಟಿ: ಖೂಬಾ ಅವರು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರನ್ನೂ ಭೇಟಿ ಮಾಡಿ, ಸಿಪೆಟ್, ಐಐಎಫ್‍ಟಿ ಬಗ್ಗೆ ಚರ್ಚೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು