ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೆಯಲ್ಲಿ ಐವರು ಮಕ್ಕಳನ್ನು ಹೂತ ಪಾಲಕರು

Last Updated 27 ಡಿಸೆಂಬರ್ 2019, 10:57 IST
ಅಕ್ಷರ ಗಾತ್ರ

ಚಿಟಗುಪ್ಪ (ಬೀದರ್‌ ಜಿಲ್ಲೆ): ಕಂಕಣ ಸೂರ್ಯಗ್ರಹಣದ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ಶಕ್ತಿ ಬರಲಿದೆ ಎನ್ನುವ ಮೂಢನಂಬಿಕೆಯಿಂದ ಪಟ್ಟಣದ ವಾರ್ಡ್ ಸಂಖ್ಯೆ 23ರ ವ್ಯಾಪ್ತಿಯ ಫಾತ್ಮಾಪುರದಲ್ಲಿ ಸೂರ್ಯಗ್ರಹಣ ಪೂರ್ಣಗೊಳ್ಳುವವರೆಗೂ ದೈಹಿಕ ಅಂಗವಿಕಲ ಮಕ್ಕಳನ್ನು ಕುರಿ ಹಿಕ್ಕೆಯ ತಿಪ್ಪೆಯಲ್ಲಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.

ರಾಮಯ್ಯ ಸ್ವಾಮಿಯ ಪುತ್ರಿ ಖುಷಿ(9), ಬಸಯ್ಯ ಸ್ವಾಮಿಯ ಪುತ್ರಿ ದೇವಿಕಾ(10), ಪಂಡಿತರಾವ್‌ ಅವರ ಪುತ್ರ ಅಖಿಲೇಶ(10), ಜಗಯ್ಯ ಸ್ವಾಮಿ ಅವರ ಪುತ್ರ ಈಶ್ವರ(10) ಹಾಗೂ ಕುಪೇಂದ್ರ ಅವರ ಪುತ್ರ ಅಭಿಷೇಕ(8) ಎನ್ನುವವರನ್ನು ಮೂರು ತಾಸು ತಿಪ್ಪೆಯಲ್ಲಿ ಕುತ್ತಿಗೆವರೆಗೂ ಹೂಳಲಾಗಿತ್ತು.‌

ಪಂಡಿತರಾವ್‌ ಕಲ್ಲು ಗಣಿಗಾರಿಕೆಯ ಕೆಲಸ ಮಾಡುತ್ತಾರೆ. ಉಳಿದ ಪಾಲಕರೆಲ್ಲರೂ ಕೃಷಿ ಕಾರ್ಮಿಕರಾಗಿದ್ದಾರೆ. ಗ್ರಹಣ ಕಾಲದಲ್ಲಿ ಮೇಕೆ ಅಥವಾ ಕುರಿ ಹಿಕ್ಕೆಯಲ್ಲಿ ಹೂಳುವುದರಿಂದ ಚೈತನ್ಯ ಬರುತ್ತದೆ ಎನ್ನುವ ಮೂಢನಂಬಿಕೆಯಿಂದ ಈ ರೀತಿ ಮಾಡಲಾಗಿದೆ ಎಂದು ಗೊತ್ತಾಗಿದೆ.

20 ವರ್ಷಗಳ ಹಿಂದೆ ಸೂರ್ಯಗ್ರಹಣದ ಸಂದರ್ಭದಲ್ಲಿ ಕೈಕಾಲುಗಳಲ್ಲಿನ ಚೈತನ್ಯ ಕಳೆದುಕೊಂಡಿದ್ದ ಇಬ್ಬರು ಬಾಲಕರನ್ನು ಕುರಿ ಹಿಕ್ಕೆಯಲ್ಲಿ ಹೂಳಲಾಗಿತ್ತು. ಕ್ರಮೇಣ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಅವರಿಗೆ ಮದುವೆಯೂ ಆಗಿದೆ ಎಂದು ಗ್ರಾಮಸ್ಥರಿಂದ ಕೇಳಿಯೇ ಪಾಲಕರು ಮಕ್ಕಳನ್ನು ತಿಪ್ಪೆಗುಂಡಿಯಲ್ಲಿ ಹೂತಿದ್ದರು.

ಈ ದೃಶ್ಯವನ್ನು ನೋಡಲು ಗ್ರಾಮಸ್ಥರು ನೆರೆದಿದ್ದರು. ಮೊಬೈಲ್‌ನಲ್ಲಿ ಚಿತ್ರ ಹಾಗೂ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲು ಕೆಲವರು ಆಕ್ಷೇಪ ಒಡ್ಡಿದ್ದರು. ಹೀಗಾಗಿ ಸಂಜೆಯವರೆಗೆ ತಾಲ್ಲೂಕು ಆಡಳಿತಕ್ಕೂ ಇದರ ಮಾಹಿತಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT