ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಗಡಿಯಲ್ಲಿ ಕನ್ನಡ ಕಲಿಕೆಗೆ ವಿಶೇಷ ಯೋಜನೆ

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ ವಸಂತಕುಮಾರ ಹೇಳಿಕೆ
Last Updated 18 ಫೆಬ್ರುವರಿ 2022, 13:01 IST
ಅಕ್ಷರ ಗಾತ್ರ

ಬೀದರ್‌: ಸಾಹಿತ್ಯ ಅಕಾಡೆಮಿಯಿಂದ ರಾಜ್ಯದ ಗಡಿಪ್ರದೇಶದಲ್ಲಿ ಕನ್ನಡ ಭಾಷೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಾಯೋಗಿಕ ಯೋಜನೆಯಾಗಿ ಬೀದರ್‌ನಲ್ಲಿ ‘ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕೆ’ ಎನ್ನುವ ಯೋಜನೆ ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ ವಸಂತಕುಮಾರ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಶುಕ್ರವಾರ ಸಾಂಸ್ಕೃತಿಕ ಚಟುವಟಿಕೆ ಮೂಲಕ ‘ಕನ್ನಡ ಕಲಿಕೆ ಕನ್ನಡ ಸ್ವಯಂ ಶಿಕ್ಷಕ ಯೋಜನೆ‘ ಹತ್ತು ದಿನಗಳ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಮಾದರಿಯಲ್ಲಿ ಕನ್ನಡ ಸ್ವಯಂ ಶಿಕ್ಷಕರ ಮುಖಾಂತರ ಕನ್ನಡ ಕಲಿಸುವ ಉದ್ದೇಶ ಹೊಂದಲಾಗಿದೆ. ಕಾರ್ಯಾಗಾರದಲ್ಲಿ ಸ್ವಯಂ ಶಿಕ್ಷಕರಿಗೆ ತರಬೇತಿ ನೀಡಿ ಮುಂದಿನ 9 ತಿಂಗಳವರೆಗೆ ಗಡಿಯಲ್ಲಿರುವ ಗ್ರಾಮಗಳಲ್ಲಿನ ಮಕ್ಕಳಿಗೆ ಕನ್ನಡವನ್ನು ಕಲಿಸಲು ಅಣಿಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಕನ್ನಡ ಬೆಳವಣಿಗೆಗೆ ವಿಶೇಷ ಒತ್ತು ಕೊಟ್ಟಿದೆ. ಕನ್ನಡ ಕೆಲಸಗಳಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕನ್ನಡ ಕಲಿಕೆ ಕಾರ್ಯಕ್ರಮಕ್ಕೆ ಬೀದರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಕನ್ನಡ ಭಾಷೆಯೊಂದು ಉಳಿದರೆ ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಎಲ್ಲವನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಗುರುನಾಥ ರಾಜಗೀರಾ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿ ಭಾಗದ ಕೆಲವು ಗ್ರಾಮಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದುನ್ನು ಮನಗಂಡು ಕನ್ನಡ ಕಲಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಕಮ್ಮಟ ನಿರ್ದೇಶಕ ಡಾ.ಎಚ್.ಎಸ್ ಸತ್ಯನಾರಾಯಣ, ಶಂಭಯ್ಯ ಹಿರೇಮಠ, ರಂಗ ನಿರ್ದೇಶಕಿ ದಾಕ್ಷಾಯಿಣಿ ಭಟ್ ಮಾತನಾಡಿದರು.

ರಂಗ ನಿರ್ದೇಶಕ ಗುರುರಾಜ ಎಲ್, ನಟರಾಜ್.ಕೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ, ಕನ್ನಡ ಸ್ವಯಂ ಶಿಕ್ಷಕರು, ತಾಲ್ಲೂಕು ಪದಾಧಿಕಾರಿಗಳು ಇದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಛಾಯಾ ಭಗವತಿ ನಿರೂಪಿಸಿದರು. ಕನ್ನಡ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ಸ್ವಾಗತಿಸಿದರು. ಈಶ್ವರ ರುಮ್ಮಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT