ಮಂಗಳವಾರ, ಆಗಸ್ಟ್ 20, 2019
25 °C

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಂಡಳಿಯ ಎಡವಟ್ಟು; ಪ್ರಥಮ ದರ್ಜೆಯಲ್ಲಿ ಪಾಸಾದರೂ ಫೇಲ್!

Published:
Updated:

ಜನವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೂ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದಾಗಿ ಫೇಲ್ ಆಗಿರುವುದು ಬೆಳಕಿಗೆ ಬಂದಿದೆ. 

ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದ ಶ್ರಮಜೀವಿ ಆಂಗ್ಲಮಾಧ್ಯಮ ವಸತಿ ಪ್ರೌಢಶಾಲೆಯ ವಿದ್ಯಾರ್ಥಿ ಮುಕ್ತಾರ್ ಅಲಿ ಮುಗ್ದುಮ್, ಐದು ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೂ, ಆನ್‌ಲೈನ್‌ ಅಂಕಪಟ್ಟಿಯಲ್ಲಿ ಕನ್ನಡದಲ್ಲಿ ಫೇಲ್ ಎಂದು ನಮೂದಿಸಲಾಗಿದೆ.

ಮುಕ್ತಾರ್ ಅಲಿ, ಇಂಗ್ಲಿಷ್‌ನಲ್ಲಿ 85, ಹಿಂದಿ 80, ಗಣಿತ 66, ಸಮಾಜ ವಿಜ್ಞಾನ 53 ಮತ್ತು ವಿಜ್ಞಾನದಲ್ಲಿ 51 ಅಂಕಗಳನ್ನು ಪಡೆದಿದ್ದರು. ಆದರೆ, ಅವರಿಗೆ ಕನ್ನಡದಲ್ಲಿ ಕೇವಲ 15 ಅಂಕಗಳು ಬಂದಿದ್ದವು.

ಇದರಿಂದ ಆಘಾತಕ್ಕೆ ಒಳಗಾದ ವಿದ್ಯಾರ್ಥಿ, ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿಕೊಳ್ಳಲು ಮುಂದಾದರು. ₹ 405 ಶುಲ್ಕ ಕಟ್ಟಿ ನಕಲು ಪ್ರತಿಗೆ ಅರ್ಜಿ ಕೂಡ ಸಲ್ಲಿಸಿದರು. ನಕಲು ಪ್ರತಿ ಬಂದಾಗ ಅವರಿಗೆ ಅಚ್ಚರಿ ಕಾದಿತ್ತು. ಅದರಲ್ಲಿ ಕನ್ನಡದಲ್ಲಿ ಅವರಿಗೆ 32 ಅಂಕಗಳು ಬಂದಿದ್ದವು. ಆನ್‌ಲೈನ್‌ನಲ್ಲಿ ಅಂಕಗಳನ್ನು ತಪ್ಪಾಗಿ ನಮೂದಿಸಿದ್ದರಿಂದ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರೂ, ಅವರು ಫೇಲ್ ಆಗುವಂತಾಗಿತ್ತು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ಲಕ್ಷ್ಯದಿಂದಾಗಿ ವೇದನೆ ಅನುಭವಿಸುವಂತಾಗಿತ್ತು.

ವಿದ್ಯಾರ್ಥಿ ಶೇ 62 ರಷ್ಟು ಅಂಕಗಳನ್ನು ಪಡೆದಿದ್ದರೂ ಒಂದು ವಿಷಯದಲ್ಲಿ ಫೇಲ್‌ ಎಂದು ನಮೂದಿಸಿರುವುದು ಬೇಸರ ಉಂಟು ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾಲ್ಯಮಾಪನ, ಅಂಕಗಳ ನಮೂದಿಸುವಿಕೆಯನ್ನು ಸೂಕ್ಷ್ಮವಾಗಿ ಮಾಡಬೇಕು. ಮುಂದೆ ಯಾವುದೇ ಅವಾಂತರಗಳಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸುತ್ತಾರೆ ಶ್ರಮಜೀವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶರಾವ್ ಮಾಯಿಂದೆ.

Post Comments (+)