ಎಸ್ಸೆಸ್ಸೆಲ್ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಿ

ಭಾಲ್ಕಿ: ತಾಲ್ಲೂಕಿನಾದ್ಯಂತ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎಸ್.ಒ.ಪಿ ನಿಯಮದ ಪ್ರಕಾರ ವ್ಯವಸ್ಥಿತವಾಗಿ ನಡೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಯ ಹರನಾಳ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಮುಖ್ಯ ಅಧೀಕ್ಷಕರ ವಿಡಿಯೊ ಕಾನ್ಫರೆನ್ಸ್ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಈ ವರ್ಷ ಕೋವಿಡ್ 2ನೇ ಅಲೆಯ ಪ್ರಯುಕ್ತ ಪರೀಕ್ಷೆಯನ್ನು ತಡವಾಗಿ ನಡೆಸಲಾಗುತ್ತಿದೆ. ಯಾವುದೇ ರೀತಿಯಿಂದ ತೊಂದರೆ ಆಗದಂತೆ ಪರೀಕ್ಷೆ ನಡೆಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಹದೇವ ಜಿ. ಮಾತನಾಡಿ, ‘ಮಂಡಳಿಯಿಂದ ರವಾನಿಸಿದ ಓಎಂಆರ್ ಮತ್ತು ಸಿಎನ್‍ಆರ್‌ಗಳನ್ನು ಮುಖ್ಯ ಅಧೀಕ್ಷಕರು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ತಪ್ಪು ಕಂಡುಬಂದರೆ ತಕ್ಷಣವೇ ಮಂಡಳಿಗೆ ತಿಳಿಸಬೇಕು’ ಎಂದರು.
‘ಈ ವರ್ಷ ತಾಲ್ಲೂಕಿನಲ್ಲಿ 4,500 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಲಾಗುವುದು. ಮುಖ್ಯ ಅಧೀಕ್ಷ ಕರು ಪರೀಕ್ಷಾ ಮುನ್ನಾ ದಿನವೇ ತಮ್ಮ ಕೇಂದ್ರಕ್ಕೆ ಒದಗಿಸಿರುವ ಪರೀಕ್ಷಾ ಸಿಬ್ಬಂದಿ ತರಬೇತಿ ನಡೆಸಿ, ಪರೀಕ್ಷಾ ಕಾರ್ಯವನ್ನು ಸುಗಮವಾಗಿ ನಡೆಯು ವಂತೆ ನೋಡಿಕೊಳ್ಳಬೇಕು’ ಎಂದರು.
ಮುಖ್ಯಶಿಕ್ಷಕ ರಾಜಕುಮಾರ ಜೊಳದಪಕೆ, ಶ್ರೀಕಾಂತ ಮೂಲಗೆ, ಶಿವಕುಮಾರ ಘಂಟೆ, ಶಿವಕುಮಾರ ಮೇತ್ರೆ, ಜಯರಾಜ ದಾಬಶೆಟ್ಟಿ, ಬಸವಪ್ರಭು ಸೊಲಾಪೂರೆ, ಅಶೋಕ ಬರ್ಮಾ, ಎಸ್. ನಾಲವಾರ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.