ರಂಗೋಲಿಯಲ್ಲಿ ಪ್ರತಿಭೆಗಳ ಅನಾವರಣ

ಗುರುವಾರ , ಏಪ್ರಿಲ್ 25, 2019
22 °C

ರಂಗೋಲಿಯಲ್ಲಿ ಪ್ರತಿಭೆಗಳ ಅನಾವರಣ

Published:
Updated:
Prajavani

ಬೀದರ್‌: ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿಯ ವತಿಯಿಂದ ಡಾ.ಅಂಬೇಡ್ಕರ್‌ ಜಯಂತಿ ಅಂಗವಾಗಿ ನಗರದ ಅಂಬೇಡ್ಕರ್‌ ಭವನದಲ್ಲಿ  ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಯುವಕ, ಯುವತಿಯರು ಉತ್ಸಾಹದಿಂದ ಪಾಲ್ಗೊಂಡು ಪ್ರತಿಭೆಯ ಅನಾವರಣ ಮಾಡಿದರು.

ಬಿಎಸ್ಸಿ ವಿದ್ಯಾರ್ಥಿ ವಿನಾಯಕ ಗೌತಮ ಅವರು ನಾಲ್ಕು ಬಣ್ಣಗಳನ್ನು ಮಾತ್ರ ಬಳಸಿ ಗೌತಮ ಬುದ್ಧನ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದರು. ಪರಿಸರದ ಮಡಿಲಲ್ಲಿ ಕುಳಿತ ಧ್ಯಾನಸ್ಥ ಗೌತಮ ಬುದ್ಧನ ಚಿತ್ರಕ್ಕೆ ಕಳೆ ತುಂಬಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡರು.

ಶಿಲ್ಪಾ ಮನೋಜ ಅವರು ಗೌತಮ ಬುದ್ಧ ಅರಳಿ ಮರದ ಕೆಳಗೆ ಜ್ಞಾನೋದಯ ಹೊಂದಿದ್ದರ ಸಂಕೇತವಾಗಿ
ಬೌದ್ಧ ಧರ್ಮದ ಚಿನ್ಹೆಯನ್ನು ರಂಗೋಲಿಯಲ್ಲಿ ಬಿಡಿಸಿದ್ದರು. ಅರಳಿ ಎಲೆಯ ಮೇಲಿನ ಚಿಹ್ನೆ ರಂಗೋಲಿಯ ಮೇಲೆ ಹೊದಿಕೆ ಹಾಕಿದಂತೆ ಕಾಣುತ್ತಿತ್ತು.

ವಿಜಯಶ್ರೀ ಬಿ.ಅವರು ಅಂಬೇಡ್ಕರ್‌ ಅಭಿಮಾನಿ ಎಂದು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸುತ್ತಲೂ ಸಾಂಪ್ರದಾಯಿಕ ರಂಗೋಲಿ ಬಿಡಿಸಿ ಮಧ್ಯದಲ್ಲಿ ಬಾಬಾಸಾಹೇಬರ ಚಿತ್ರವನ್ನು ಬಿಂಬಿಸಿ ಸ್ಪರ್ಧೆಗೆ ಇನ್ನಷ್ಟು ರಂಗು ತುಂಬಿದರು.

ಬೃಹದಾಕಾರದಲ್ಲಿ ಚುಕ್ಕೆ ಹಾಕಿ ಸಾಂಪ್ರದಾಯಿಕ ರಂಗೋಲಿಯ ಚಿತ್ತಾರ ಮೂಡಿಸಿದ ಅಂಬಿಕಾ ಹಾರೂರಗೇರಿ ಸಮರ್ಪಣಾ ಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು. ಶಿವಾನಿ ಅವರೂ ಅಚ್ಚುಕಟ್ಟಾದ ರಂಗೋಲಿ ಬಿಡಿಸಿದರು. ವನಿತಾ ಕೇಶಪ್ಪ ಅವರು ಬಾತುಕೋಳಿಯ ವೈಯ್ಯಾರವನ್ನು ಗಮನದಲ್ಲಿಟ್ಟುಕೊಂಡು ರಂಗೋಲಿಯ ಚಿತ್ತಾರ ಮೂಡಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಬಾಲಕಿಯರೇ ಅಧಿಕ ಸಂಖ್ಯೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯಿಂದ ಭವನದಲ್ಲಿ ಮಕ್ಕಳ ಕಲರವ ಹೆಚ್ಚಾಗಿತ್ತು. ಭವನದ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

‘ಬಾಬಾಸಾಹೇಬ ಅಂಬೇಡ್ಕರ್ ಜಯಂತಿಯನ್ನು ವಿನೂತನ ರೀತಿಯಲ್ಲಿ ಆಚರಿಸುವ ಹಾಗೂ ರಂಗೋಲಿ ಕಲೆಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 10 ರಿಂದ 12 ಜನ ಪಾಲ್ಗೊಳ್ಳಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಮೀರಿ 25 ಜನ ಪಾಲ್ಗೊಂಡು ಉತ್ಸಾಹ ತೋರಿದರು’ ಎಂದು ಆಯೋಜಕರಲ್ಲೊಬ್ಬರಾದ ಮಹೇಶ ಗೋರನಾಳಕರ್‌ ಹೇಳಿದರು.

‘ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಬೀದರ್ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಣ್ಣು ಮಕ್ಕಳು ಆಸಕ್ತಿಯಿಂದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ಗಂಗಮ್ಮ ಫುಲೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !