ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಹುದ್ದೆ ಖಾಲಿಯಿದ್ದರೂ ಸಿಗದ ಅರ್ಹ ಶಿಕ್ಷಕರು

ಮರಾಠಿ ಮಾಧ್ಯಮದ 13 ಹುದ್ದೆಗಳಿಗೆ ಅರ್ಹತೆ ಪಡೆದವರು ಒಬ್ಬರೇ!
Last Updated 20 ಆಗಸ್ಟ್ 2022, 4:32 IST
ಅಕ್ಷರ ಗಾತ್ರ

ಬೀದರ್‌: ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ಆದರೆ, ಅದಕ್ಕೆ ಪೂರಕವಾಗಿ ಸೂಕ್ತ ಶಿಕ್ಷಕರು ಇಲಾಖೆಗೆ ಸಿಗುತ್ತಿಲ್ಲ.

ಬಿ.ಇಡಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತಿರ್ಣರಾದ ಶೇ 50ರಷ್ಟು ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲೇ ಉತ್ತೀರ್ಣರಾಗಿಲ್ಲ. ಅರ್ಹತೆ ಪಡೆಯದ ಸಮಾಜ ವಿಜ್ಞಾನ ಶಿಕ್ಷಕ ಅಭ್ಯರ್ಥಿಗಳ ಸಂಖ್ಯೆ ಅರ್ಧದಷ್ಟಿದ್ದರೆ, ಉರ್ದು ಹಾಗೂ ಮರಾಠಿ ಮಾಧ್ಯಮದ ಶೇಕಡ 90 ರಷ್ಟು ಅಭ್ಯರ್ಥಿಗಳು ಅರ್ಹತೆಯೇ ಪಡೆದಿಲ್ಲ.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಟಿಇಟಿ ಪಾಸಾಗಿರಬೇಕು. ಹುದ್ದೆಗೆ ನೇಮಕ ಆಗಲು ಸಿಇಟಿಯಲ್ಲಿ ಕನಿಷ್ಠ ಶೇ 45 ಅಂಕ ಪಡೆದಿರಬೇಕು. ಭಾಷಾ ಸಾಮರ್ಥ್ಯದ ಪೇಪರ್‌–2 ಪರೀಕ್ಷೆಯಲ್ಲಿ ಶೇ 50ರಷ್ಟು ಅಂಕ ಗಳಿಸಿರಬೇಕು.

ಮೇ ತಿಂಗಳಲ್ಲಿ ನಡೆದ ಸಿಇಟಿ ಪರೀಕ್ಷೆಗೆ 2,899 ಅಭ್ಯರ್ಥಿಗಳು ಹಾಜರಾಗಿದ್ದರು. ಇಂಗ್ಲಿಷ್‌, ಸಮಾಜ ವಿಜ್ಞಾನ, ಗಣಿತ–ವಿಜ್ಞಾನ, ಜೀವ ವಿಜ್ಞಾನ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು.

ಕನ್ನಡ ಮಾಧ್ಯಮದ ಸಮಾಜ ವಿಜ್ಞಾನ ವಿಷಯದ 165 ಹುದ್ದೆಗಳಿಗೆ 1,492 ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 75 ಇಂಗ್ಲಿಷ್‌ ಮಾಧ್ಯಮ ಶಿಕ್ಷಕರ ಹುದ್ದೆಗೆ 142 ಅಭ್ಯರ್ಥಿಗಳು ಅರ್ಹತೆ ಗಳಿಸಿದ್ದಾರೆ. ಸಮಾಜ ವಿಜ್ಞಾನದ 165 ಹುದ್ದೆಗೆ 1,066 ಅಭ್ಯರ್ಥಿಗಳು, ಉರ್ದು ಸಮಾಜ ವಿಜ್ಞಾನದ 45 ಹುದ್ದೆಗಳಿಗೆ 32 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಮರಾಠಿ ಮಾಧ್ಯಮದ ಸಮಾಜ ವಿಜ್ಞಾನ ವಿಷಯದ 45 ಹುದ್ದೆಗಳಿಗೆ 17 ಮಂದಿ ಮಾತ್ರ ಅರ್ಹತೆ ಪಡೆದಿದ್ದಾರೆ. ಕನ್ನಡ ಮಾಧ್ಯಮದ ಗಣಿತ–ವಿಜ್ಞಾನ ವಿಷಯದ ಎಲ್ಲ 136 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ದೊರಕಿದ್ದಾರೆ. ಉರ್ದು ಮಾಧ್ಯಮದ 61 ಹುದ್ದೆಗೆ 30 ಅಭ್ಯರ್ಥಿಗಳು ಅರ್ಹತೆ ಪಡೆದರೆ, ಮರಾಠಿ ಮಾಧ್ಯಮದ 53 ಹುದ್ದೆಗೆ ಕೇವಲ 12 ಮಂದಿ ಅರ್ಹತೆ ಪಡೆದಿದ್ದಾರೆ.

ಕನ್ನಡ ಮಾಧ್ಯಮದ ಜೀವ ವಿಜ್ಞಾನ 40 ಹುದ್ದೆಗಳಿಗೆ 44 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಉರ್ದು ಮಾಧ್ಯಮದ 14 ಹುದ್ದೆಗಳ ಪೈಕಿ 13 ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮರಾಠಿ ಮಾಧ್ಯಮದ 13 ಹುದ್ದೆಗಳಿದ್ದರೂ ಒಬ್ಬ ಅಭ್ಯರ್ಥಿ ಮಾತ್ರ ಅರ್ಹತಾ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಉಳಿದವರು ಅರ್ಹತಾ ಪರೀಕ್ಷೆಯನ್ನೂ ಪಾಸಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಎಸ್ಸೆಸ್ಸೆಲ್ಸಿ ಹಾಗೂ ಬಿ.ಇಡಿ ಪರೀಕ್ಷೆ ವೇಳೆ ಕೆಲ ಶಿಕ್ಷಣ ಸಂಸ್ಥೆಗಳು ಪಾಸಾದ ವಿದ್ಯಾರ್ಥಿಗಳ ಶೇಕಡವಾರು ಪ್ರಮಾಣ ತೋರಿಸಲು ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಕಲ್ಪಿಸುತ್ತಿವೆ. ಹೀಗಾಗಿ ಟಿಇಟಿ ಫಲಿತಾಂಶ ಹೀಗೆ ಕುಸಿದಿದೆ’ ಎಂದು ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಜೋಳದಾಬಕೆ ಹೇಳಿದರು.

‘ಬಿ.ಇಡಿ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ನಡೆದಾಗ ಮಾಧ್ಯಮಗಳು ಅದನ್ನು ಅನೇಕ ಬಾರಿ ಬಹಿರಂಗ ಪಡಿಸಿವೆ. ಜಿಲ್ಲಾಡಳಿತವು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಒಂದು ನಿದರ್ಶನ ಇಲ್ಲ’ ಎಂದು ಜಿಲ್ಲಾ ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕ ಸಂದೀಪ ಕಾಂಟೆ ತಿಳಿಸಿದರು.

‘ಸರ್ಕಾರಿ, ಅನುದಾನಿತ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಆದರೆ, ‍ಪ್ರಭಾವಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆಯುತ್ತಿವೆ. ಹಿರಿಯ ಅಧಿಕಾರಿಗಳಿಗೆ ಗೊತ್ತಿದ್ದರೂ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ’ ಎಂದು ಸ್ಟುಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ ಹೇಳಿದರು.

ಹಲವು ವರ್ಷಗಳಿಂದ ಸುಧಾರಿಸದ ವ್ಯವಸ್ಥೆ
‘ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರು ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ, ಸುಧಾರಣೆಯಾಗಲಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಹೆಚ್ಚಿನ ಆಸಕ್ತಿ ತೋರಿರುವುದು ಕಾಣಸಿಗಲಿಲ್ಲ’ ಎಂದು ಸಾರ್ವಜನಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT