ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ಐದು ನಿರ್ಣಯಗಳ ಮಂಡನೆ

ಯುವ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ
Last Updated 22 ಜನವರಿ 2021, 13:55 IST
ಅಕ್ಷರ ಗಾತ್ರ

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಬೀದರ್ ತಾಲ್ಲೂಕು ಎರಡನೇ ಯುವ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಗುರುವಾರ ನಡೆಯಿತು.

ಬಹಿರಂಗ ಸಭೆಯಲ್ಲಿ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರದ ಮುಖ್ಯಮಂತ್ರಿ ವರ್ತನೆ ಹಾಗೂ ರಾಜ್ಯದಲ್ಲಿ ಹಿಂದಿ ಭಾಷೆ ಹೇರುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುವ ನಿರ್ಣಯ ಸೇರಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಭವನದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸುವ ಗೊತ್ತವಳಿಯನ್ನು ವಿಜಯಕುಮಾರ ಸೋನಾರೆ ಸೂಚಿಸಿದರೆ, ಓಂಪ್ರಕಾಶ ಧಡ್ಡೆ ಅನುಮೋದಿಸಿದರು.

ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಉರ್ದು ಮತ್ತು ಮರಾಠಿ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕು ಎನ್ನುವ ಗೊತ್ತವಳಿಯನ್ನು ಬಸವರಾಜ ಬಲ್ಲೂರ ಸೂಚಿಸಿದರೆ, ಜಗನ್ನಾಥ ಕಪಲಾಪೂರೆ ಅನುಮೋದಿಸಿದರು.

ನೆಹರು ಕ್ರೀಡಾಂಗಣ ಹತ್ತಿರದ ಕನ್ನಡ ಕಟ್ಟಾಳು ಪ್ರಭುರಾವ್ ಕಂಬಳಿವಾಲೆ ಬಸ್ ತಂಗುದಾಣವನ್ನು ಈ ಹಿಂದೆ ಇದ್ದ ಸ್ಥಳದಲ್ಲಿಯೇ ಮರು ನಿರ್ಮಾಣ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸುವ ನಿರ್ಣಯವನ್ನು ರಮೇಶ ಬಿರಾದಾರ ಮಂಡಿಸಿದರೆ, ಸಿದ್ಧಾರೂಢ ಭಾಲ್ಕೆ ಅನುಮೋದಿಸಿದರು.

ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ವರ್ತನೆ ಮತ್ತು ರಾಜ್ಯದಲ್ಲಿ ಹಿಂದಿ ಭಾಷೆ ಹೇರುತ್ತಿರುವ ಕೇಂದ್ರ ಸರ್ಕಾರದ ನೀತಿಗೆ ತೀವ್ರವಾಗಿ ಖಂಡಿಸುವ ನಿರ್ಣಯ ಕೈಗೊಳ್ಳಲು ಪ್ರೊ.ರಾಜಕುಮಾರ ಅಲ್ಲೂರೆ ಸೂಚಿಸಿದರೆ, ಸಚಿನ್ ಮಠಪತಿ ಅನುಮೋದಿಸಿದರು.

ಬೀದರ್ ನಗರದ ಎಲ್ಲ ಬಸ್ ತಂಗುದಾಣಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಇಡಬೇಕು ಎಂದು ಜಗನ್ನಾಥ ಮೂಲಗೆ ಸೂಚಿಸಿದರೆ, ಪ್ರಶಾಂತ ಮಠಪತಿ ಅನುಮೋದಿಸಿದರು.

ಸಾಹಿತಿ ಮಚ್ಛೇಂದ್ರ ಅಣಕಲ್ ಬಸವಕಲ್ಯಾಣ ಅವರು ಸಮಾರೋಪ ಭಾಷಣ ಮಾಡಿದರು. ಯುವ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಿಜಲಿಂಗ ರಗಟೆ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್ ಮನೋಹರ ಅಧ್ಯಕ್ಷತೆ ವಹಿಸಿದ್ದರು.
ಯುವ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ವಿರೂಪಾಕ್ಷ ಗಾದಗಿ, ವಿವಿಧ ಸಂಘಟನೆಗಳ ಮುಖಂಡರಾದ ವಿಜಯಕುಮಾರ ಸೋನಾರೆ, ಶ್ರೀಮಂತ ಸಪಾಟೆ, ಎಂ.ಪಿ. ಮುದಾಳೆ, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್, ವೀರಶೆಟ್ಟಿ ಪಟ್ನೆ ಇದ್ದರು.

ಸಚಿನ್ ವಿಶ್ವಕರ್ಮ ಸ್ವಾಗತಿಸಿದರು. ಟಿ.ಎಂ. ಮಚ್ಚೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT