ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಹಣ್ಣುಗಳ ರಾಜನಿಗೆ ಕಾಣದ ಬೇಡಿಕೆ

ಮಾವು ಫಸಲು ಖರೀದಿಗೆ ವ್ಯಾಪಾರಿಗಳ ಹಿಂದೇಟು
Last Updated 24 ಮೇ 2021, 4:18 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಮುತ್ತಂಗಿ ಗ್ರಾಮದ ಸಾವಯವ ಕೃಷಿಕ ಮಲ್ಲಯ್ಯ ಸ್ವಾಮಿ ಅವರು ಇಪ್ಪತ್ತು ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ಆರು ಎಕರೆ ಪ್ರದೇಶದಲ್ಲಿ ಮಾವು ಬೆಳೆಸಿದ್ದಾರೆ. ಈ ಬಾರಿ ಮಾವಿನ ಮರಗಳಿಗೆ ಹೆಚ್ಚು ಫಸಲು ಬಂದರೂ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಹಣ್ಣು ಖರೀದಿಗೆ ಮುಂದಾಗದ ಕಾರಣ ಚಿಂತೆಗೀಡಾಗಿದ್ದಾರೆ.

ರತ್ನಗಿರಿ ಆಪೂಸ್‌, ರಸಪುರಿ, ಕಲಮಿ, ದಸರಿ, ಬೇನಿಶಾನ್‌, ಮಲ್ಲಿಕಾ, ತೊತಾಪುರಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಸಿದ್ಧವಾಗಿದ್ದು, ಖರೀದಿ ಮಾಡುವವರ ನಿರೀಕ್ಷೆಯಲ್ಲಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವ ಕಾರಣ ಮಾವು ಮಾರಲು ಸಾಧ್ಯವಾಗಿಲ್ಲ.

‘ಪ್ರತಿವರ್ಷ ಸುಮಾರು ₹10 ಲಕ್ಷಕ್ಕೂ ಅಧಿಕ ಬೆಲೆಗೆ ಮರಗಳ ಫಸಲು ಮಾರಾಟವಾಗುತ್ತಿತ್ತು. ಈ ಬಾರಿ ವ್ಯಾಪಾರಿಗಳಿಗೆ ದುಂಬಾಲು ಬಿದ್ದು ಖರೀದಿಸಲು ಕೇಳಿಕೊಂಡರೂ ಯಾರೂ ಮುಂದೆ ಬರುತ್ತಿಲ್ಲ. ಈ ಬಾರಿಯ ಅಧಿಕ ಮಳೆಯಿಂದಾಗಿ ಮಾವಿನ ಹಣ್ಣುಗಳು ಬೃಹದಾಕಾರದಲ್ಲಿ ಬೆಳೆದಿವೆ. ಒಂದು ಹಣ್ಣು ಕೆ.ಜಿ. ಯಷ್ಟು ತೂಕವಿದೆ. ಆದರೆ, ಮಾರುಕಟ್ಟೆ ಸಮಸ್ಯೆಯಿಂದಾಗಿ ತೋಟದಲ್ಲಿಯೇ ಹಾಳಾಗುತ್ತಿವೆ’ ಎಂದು ಮಲ್ಲಯ್ಯ ಸ್ವಾಮಿ ನೋವು ತೋಡಿಕೊಂಡರು.

‘ಸಂಪೂರ್ಣವಾಗಿ ಸಾವಯವ ಕೃಷಿ ಅಳವಡಿಸಿಕೊಂಡು ಜೀವಾಮೃತ ಬಳಸಿ ಬೆಳೆಸಿದ ಮರಗಳಿದ್ದು, ಇವುಗಳ ಹಣ್ಣು ವಿದೇಶದಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಆದರೆ, ಗ್ರಾಮೀಣ ಭಾಗದ ನಮ್ಮಂತಹ ರೈತರಿಗೆ ಸೂಕ್ತ ಸಾರಿಗೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಮಾರ್ಗದರ್ಶನ ಇಲ್ಲದಕ್ಕೆ ನಮ್ಮ ಶ್ರಮ ನಿರರ್ಥಕವಾಗುತ್ತಿದೆ’ ಎಂದು ಅವರು ತಿಳಿಸುತ್ತಾರೆ.

‘ಜನರು ಮನೆಗಳಿಂದ ಹೊರಬರುವಂತಿಲ್ಲ. ದುಬಾರಿ ಬೆಲೆಗೆ ಮರಗಳ ಫಸಲು ಖರೀದಿಸಿದ್ದರೂ ಹಣ್ಣುಗಳು ಮಾರಾಟವೇ ಆಗುವುದಿಲ್ಲ. ಹೀಗಾಗಿ ನಷ್ಟ ಅನುಭವಿಸುವುದಕ್ಕಿಂತಲೂ ಖರೀದಿ ಮಾಡದೇ ಇರುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರಿಂದ ಮಾವು ಬೆಳೆದ ರೈತರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಸಂಗ್ರಾಮಪ್ಪ ಹೇಳುತ್ತಾರೆ.

‘ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಮಾವು ಬೆಳೆಸಿದ ರೈತರು ತೀರಾ ವಿರಳ. ಮುಂಗಾರು ಮಳೆ ಜೂನ್‌ನಲ್ಲಿ ಆರಂಭವಾದರೆ ಮಾವಿನ ಹಣ್ಣುಗಳಲ್ಲಿ ಹುಳುಗಳಾಗುತ್ತವೆ ಎಂದುಕೊಂಡು ಬಹಳಷ್ಟು ವ್ಯಾಪಾರಿಗಳು ಮತ್ತು ಗ್ರಾಹಕರು ಹಣ್ಣು ಖರೀದಿಸುವುದಿಲ್ಲ. ಕಾರಣ ತೋಟಗಾರಿಕೆ ಇಲಾಖೆ ಎಚ್ಚೆತ್ತು ಇವರು ಬೆಳೆದ ಫಸಲು ಖರೀದಿಸಿ ಆರ್ಥಿಕ ಸಹಾಯ ಹಾಗೂ ಪರಿಹಾರ ನೀಡುವ ಕಾರ್ಯ ಮಾಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಶಿವಪುತ್ರಪ್ಪ ಸಾದಾ ಆಗ್ರಹಿಸಿದ್ದಾರೆ.

ರೈತ ಮಲ್ಲಯ್ಯ ಸ್ವಾಮಿ ಅವರ ಸಂಪರ್ಕ ಸಂಖ್ಯೆ: 9902367156.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT