ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್‌: ವಿದ್ಯಾರ್ಥಿಗಳ ಕಲಿಕಾಸಕ್ತಿಗೆ ‘ಇಲ್ಲ’ಗಳ ತೊಡಕು

ಮೂಲಸೌಕರ್ಯದ ನಿರೀಕ್ಷೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
Last Updated 29 ಡಿಸೆಂಬರ್ 2021, 6:20 IST
ಅಕ್ಷರ ಗಾತ್ರ

ಹುಮನಾಬಾದ್: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಕಲಿಕಾಸಕ್ತಿಗೆ ಕ್ರೀಡಾ ಮೈದಾನ, ಪ್ರಯೋಗಾಲಯ ಸಾಮಗ್ರಿ ಹಾಗೂ ಅಧ್ಯಾಪಕರ ಕೊರತೆ ಅಡ್ಡಿಯಾಗಿದೆ.

ಇಲ್ಲಿ ವಿಜ್ಞಾನ ಮತ್ತು ಗಣಕಯಂತ್ರ ಕೋರ್ಸ್‌ಗಳಿಗೆ ಸುಮಾರು 500 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆ ಪೈಕಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರೇ ಇದ್ದಾರೆ. ಇಲ್ಲಿ ಬಿ.ಎ, ಬಿ.ಕಾಂ, ಬಿಎಸ್ಸಿ, ಬಿ.ಬಿ.ಎಂ, ಬಿ.ಸಿ.ಎ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಒಟ್ಟು 1331 ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈ ಕಾಲೇಜು 2007ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದಲ್ಲಿ ಪ್ರಾರಂಭಗೊಂಡಿತ್ತು. ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು, ಮೇಲ್ಚಾವಣಿ ಕುಸಿದಿದ್ದವು. ಈ ಕುರಿತು ಶಾಸಕ ರಾಜಶೇಖರ ಪಾಟೀಲ ಅವರ ಗಮನಕ್ಕೆ ತರಲಾಯಿತು. ಅವರು 20018–19 ರಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಲೇಜಿನ ಕೊಠಡಿ ಸೇರಿ ಇತರ ಮೂಲ ಸೌಕರ್ಯಕ್ಕೆ ₹10 ಕೋಟಿ ಮಂಜೂರು ಮಾಡಿದ್ದರು. ಅದರಲ್ಲಿ ಈಗಾಗಲೇ ₹1.28 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿ, ಉದ್ಘಾಟನೆಯೂ ಮಾಡಲಾಗಿದೆ.

‘ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗಾಗಿ ತಲಾ ಒಂದು ಶೌಚಾಲಯ ನಿರ್ಮಿಸಲಾಗಿದೆ. ಕೆಲ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಕೆಲ ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕಾಗಿದೆ. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಅವರು ತಮ್ಮ ಅನುದಾನದಡಿ ಕಾಲೇಜಿನ ಸುತ್ತುಗೋಡೆ ನಿರ್ಮಾಣ ಕ್ಕಾಗಿ ಸುಮಾರು ₹25 ಲಕ್ಷ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಸುತ್ತಗೋಡೆ ನಿರ್ಮಿಸಿದ್ದು, ಪ್ಲಾಸ್ಟರ್ ಸುಣ್ಣ ಹಾಕಬೇಕಿದೆ’ ಎಂದು ಪ್ರಾಂಶುಪಾಲ ವೀರಣ್ಣ ತುಪ್ಪದ್ ತಿಳಿಸಿದರು.

ಕಾಲೇಜಿನಲ್ಲಿ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಭೌತಶಾಸ್ತ್ರ, ರಸಾಯನಶಾಸ್ತ್ರ ಶಾಸ್ತ್ರಗಳ ಪ್ರಯೋಗಾಲಯ, ಲ್ಯಾಂಗ್ವೇಜ್ ಲ್ಯಾಬ್, ಕ್ರೀಡಾ ಜಿಮ್, ಡಿಜಿಟಲ್ ಸ್ಮಾರ್ಟ್‌ ರೂಮ್‌ಗಳಿವೆ. ವಿದ್ಯಾರ್ಥಿಗಳಿಗೆ ವೈಫೈ ಸೌಲಭ್ಯ ಸೇರಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಇವರು ಏನಂತಾರೆ?

ಕಾಲೇಜಿನ ಅಭಿವೃದ್ಧಿಗಾಗಿ 2018-19ರಲ್ಲಿ ಕೆಕೆಆರ್‌ಡಿಬಿಯಿಂದ ₹10 ಕೋಟಿ ಬಿಡುಗಡೆ ಮಾಡ ಲಾಗಿತ್ತು. ಈಗಾಗಲೇ ನೂತನ ಕಟ್ಟಡ ನಿರ್ಮಿಸಲಾಗಿದೆ. ಇನ್ನಷ್ಟು ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವೆ

– ರಾಜಶೇಖರ ಪಾಟೀಲ, ಶಾಸಕ

***

ಕಾಲೇಜಿನ ವಿಜ್ಞಾನ ಮತ್ತು ಗಣಕ ವಿಜ್ಞಾನ ವಿಭಾಗದ ಕೋರ್ಸ್‌ನ ವಿದ್ಯಾರ್ಥಿಗಳ ಪೂರಕ ಸಾಮಗ್ರಿ ಪೂರೈಸುವಂತೆ ಹಾಗೂ ಇತರ ಸಮಸ್ಯೆ ಪರಿಹರಿಸುವಂತೆ ಈಚೆಗೆ ಶಿಕ್ಷಣ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

– ವೀರಣ್ಣ ತುಪ್ಪದ, ಪ್ರಾಂಶುಪಾಲ

***

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆದಿದ್ದಾರೆ. ವಿಜ್ಞಾನ ಪ್ರಯೋಗಾಲಯ ಸಾಮಗ್ರಿ ಕೊರತೆ ಕಾಡುತ್ತಿದೆ. ಸಂಬಂಧಿಸಿದವರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು

– ಬಸವರಾಜ ಅಷ್ಟಗಿ, ಸಾಮಾಜಿಕ ಕಾರ್ಯಕರ್ತ

***

ಕಾಲೇಜಿನಲ್ಲಿ ಉತ್ತಮ ಮೈದಾನವಿಲ್ಲ. ಆದ್ದರಿಂದ ಕ್ರೀಡಾ ಹವ್ಯಾಸ ದಿನೇ ದಿನೇ ಕಡಿಮೆಯಾಗುತ್ತಿದೆ. ಮೈದಾನ ನಿರ್ಮಿಸಬೇಕು

– ವಿಶಾಲ, ವಿದ್ಯಾರ್ಥಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT