ಸೋಮವಾರ, ನವೆಂಬರ್ 28, 2022
20 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮನವಿ

ಸಹಕಾರ ಸಂಸ್ಥೆಗಳ ವಿಚಾರದಲ್ಲಿ ರಾಜಕೀಯ ಬೇಡ: ಉಮಾಕಾಂತ ನಾಗಮಾರಪಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸಹಕಾರ ಸಂಸ್ಥೆಗಳ ವಿಚಾರದಲ್ಲಿ ರಾಜಕೀಯ ಬೇಡ. ಡಿಸಿಸಿ ಬ್ಯಾಂಕ್ ನನ್ನ ಸ್ವತ್ತಲ್ಲ. ಜಿಲ್ಲೆಯ ಜನರ ಆಸ್ತಿ. ಅದನ್ನು ಹಾಳುಗೆಡವಲು ಯಾರೂ ಪ್ರಯತ್ನಿಸಬಾರದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮನವಿ ಮಾಡಿದರು.

ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನದ ಅಂಗವಾಗಿ ಇಲ್ಲಿಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ಯಾಂಕ್ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಜಿಲ್ಲೆಯ ರೈತರು ಹಾಗೂ ಜನರ ಸೇವೆ ಮಾಡುತ್ತಿದ್ದೇನೆ. ಹೀಗಾಗಿ ಯಾವುದೇ ಟೀಕೆ, ಟಿಪ್ಪಣಿಗಳಿಗೆ ಬೆದರುವ ಪ್ರಶ್ನೆಯೇ ಇಲ್ಲ. ಬ್ಯಾಂಕ್‍ಗೆ ಸಂಬಂಧಿಸಿದಂತೆ ಸಿಬಿಐ ಸೇರಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದರು.
ಜಿಲ್ಲೆಯ ರೈತರಿಗೆ ಸಹಾಯವಾಗಲೆಂದು ಡಿಸಿಸಿ ಬ್ಯಾಂಕ್‍ನಿಂದ ಬಿ.ಎಸ್.ಎಸ್.ಕೆ, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಸಾಲ ಕೊಡಲಾಗಿದೆ. ಸಾಲ ನವೀಕರಣವಾಗಿದೆ. ಸಾಲಕ್ಕೆ ಬಡ್ಡಿ ಬೆಳೆದಿದೆ. ಹೊಸ ಸಾಲವನ್ನೇನೂ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸಿಸಿ ಬ್ಯಾಂಕ್ ಕೃಷಿಯೇತರ ಸಾಲದ ವಸೂಲಾತಿ ಶೇ 90.09, ಕೃಷಿ ಸಾಲದ ವಸೂಲಾತಿ ಶೇ 89.49, ಸರಾಸರಿ ವಸೂಲಾತಿ ಶೇ 90 ರಷ್ಟಿದೆ. ಆರ್ಥಿಕ ಸಂಸ್ಥೆಯಾಗಿರುವ ಕಾರಣ ಬ್ಯಾಂಕ್ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಜನರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ತಿಳಿಸಿದರು.
ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಅಧ್ಯಕ್ಷರಾಗಿದ್ದಾಗ ₹ 25 ಕೋಟಿ ವಹಿವಾಟಿನ ಬ್ಯಾಂಕ್‍ನ್ನು ₹. 3 ಸಾವಿರ ಕೋಟಿಗೆ ತಲುಪಿಸಿದ್ದರು. ನಾನು ಅಧ್ಯಕ್ಷನಾದ ಏಳು ವರ್ಷಗಳಲ್ಲಿ ₹ 3 ಸಾವಿರ ಕೋಟಿಯಿಂದ ₹ 4,100 ಕೋಟಿಗೆ ತಲುಪಿಸಿದ್ದೇನೆ ಎಂದು ತಿಳಿಸಿದರು.
ನನ್ನ ತಂದೆ ಮಹಿಳಾ ಸಬಲೀಕರಣ, ಜಿಲ್ಲೆಯ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಆರಂಭಿಸಿದ ಸ್ವಸಹಾಯ ಗುಂಪುಗಳು ಇಂದು ಬೃಹದಾಕಾರವಾಗಿ ಬೆಳೆದಿವೆ. 1996 ರಲ್ಲಿ 20 ಸದಸ್ಯರ ಒಂದು ಸಂಘ ರಚಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ 33,627 ಸಂಘಗಳು ರಚನೆಯಾಗಿದ್ದು, ಅದರಲ್ಲಿ 4,53,637 ಸದಸ್ಯರು ಇದ್ದಾರೆ. ಸ್ಥಾಪನೆಯಿಂದ 2022 ರವರೆಗೆ ಎಸ್.ಎಚ್.ಜಿ.ಗಳಿಗೆ ₹ 1,700 ಕೋಟಿ ಸಾಲ ಕೊಡಲಾಗಿದೆ. 2022 ರಲ್ಲೇ ₹ 507 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ಗುರುಪಾದಪ್ಪ ನಾಗಮಾರಪಳ್ಳಿ ಚಿತ್ರ ಹೊರ ಬರಲಿ:

ದಿ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಜೀವನ ಚರಿತ್ರೆ ಆಧಾರಿತ ಚಲನಚಿತ್ರ ಹೊರ ಬರಬೇಕು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರೂ ಆದ ಬ್ರಹ್ಮರ್ಷಿ ಆನಂದ ಸಿದ್ಧಿ ಪೀಠದ ಸಂಸ್ಥಾಪಕ ಆನಂದ ಗುರೂಜಿ ಆಶಯ ವ್ಯಕ್ತಪಡಿಸಿದರು.
ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನದ ಅಂಗವಾಗಿ ಇಲ್ಲಿಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಗಮಾರಪಳ್ಳಿ ಅವರ ಕುರಿತು ಈಗಾಗಲೇ ಕಿರುಚಿತ್ರ ನಿರ್ಮಾಣಗೊಂಡಿದೆ. ದೊಡ್ಡ ಪರದೆಯ ಚಿತ್ರ ತಯಾರಾದರೆ ಎಲ್ಲರೂ ಅವರ ಜೀವನ ಹಾಗೂ ಸಾಧನೆಗಳನ್ನು ಅರಿಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸದಸ್ಯರ ಅನಿಸಿಕೆ:

ಸ್ವಸಹಾಯ ಗುಂಪು ತಮ್ಮ ಬದುಕು ಕಟ್ಟಿಕೊಳ್ಳಲು ಹೇಗೆ ನೆರವಾಯಿತು ಎನ್ನುವ ಕುರಿತು ಗುಂಪಿನ ಸದಸ್ಯೆಯರಾದ ನಾಗಮ್ಮ ಶಂಕರ ಹಾಗೂ ಭಾರತಿ ಅಷ್ಟೂರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಲಾವಿದ ಶಂಕರ ಚೊಂಡಿ ಹಾಗೂ ತಂಡದವರು ಜಾನಪದ ಗೀತೆ ಹಾಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಕುರಿತ ಕಿರುಚಿತ್ರ ಪ್ರದರ್ಶಿಸಲಾಯಿತು. ಸಾಹಿತಿ ಎಂ.ಜಿ. ದೇಶಪಾಂಡೆ ರಚಿತ ದಿ. ನಾಗಮಾರಪಳ್ಳಿ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಸಹಕಾರ ಭೀಷ್ಮ ಕೃತಿ ಬಿಡುಗಡೆ ಮಾಡಲಾಯಿತು.

ಮಾತೆ ಜಯಲಕ್ಷ್ಮಿ, ಶ್ರೀನಿವಾಸ ಗುರೂಜಿ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಎನ್.ಎಸ್.ಎಸ್.ಕೆ. ಅಧ್ಯಕ್ಷ ಡಿ.ಕೆ. ಸಿದ್ರಾಮ, ಉದ್ಯಮಿ ಮಹೇಶ ತಾಳಂಪಳ್ಳಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಕೈಲಾಶ ಪಾಟೀಲ, ಡಾ. ರಜನೀಶ್ ವಾಲಿ, ವಂದೇ ಮಾತರಂ ಇಂಟರ್‍ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ರತ್ನಾ ಪಾಟೀಲ, ಸಹಕಾರ ಸಂಘಗಳ ಉಪ ನಿಬಂಧಕಿ ಮಂಜುಳಾ ಎಸ್, ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ಇದ್ದರು.
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಉಮಾದೇವಿ ಚಿಲ್ಲರ್ಗೆ ನಿರೂಪಿಸಿದರು.

...............BOX-1............

ಸೂರ್ಯಕಾಂತ ರಥಕ್ಕೆ ಸಾರಥಿ ನಾನಾಗುವೆ

ಬೀದರ್: ಬರುವ ವಿಧಾನಸಭೆ ಚುನಾವಣೆಯಲ್ಲಿ ಕಿರಿಯ ಸಹೋದರ ಸೂರ್ಯಕಾಂತ ನಾಗಮಾರಪಳ್ಳಿ ಅವರ ರಥಕ್ಕೆ ಸಾರಥಿ ನಾನಾಗುವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಘೋಷಿಸಿದರು.
ಸಹೋದರ ಯಾವುದೇ ರಥ ಆರಿಸಿಕೊಂಡರೂ ಅದನ್ನು ನಾನು ಮುನ್ನಡೆಸುವೆ ಎಂದು ಹೇಳಿದರು.
ಸೂರ್ಯಕಾಂತ ಅವರು ಒಮ್ಮೆ ಶಾಸಕರಾಗಿ ಆಯ್ಕೆಯಾಗಬೇಕು ಎನ್ನುವುದು ಬಹುಜನರ ಅಪೇಕ್ಷೆಯಾಗಿದೆ. ಅದರ ಸಾಕಾರಕ್ಕೆ ಎಲ್ಲರೂ ಅವರನ್ನು ಆಶೀರ್ವದಿಸಬೇಕಿದೆ ಎಂದು ತಿಳಿಸಿದರು.
ಈ ಹಿಂದೆ ಸಭೆಯೊಂದರಲ್ಲಿ ಶುಭ ಸುದ್ದಿ ಬರಲಿದೆ ಎಂದು ಹೇಳಿದ್ದೆ. ಭೀಮರಾವ್ ಪಾಟೀಲ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಮುಂದಿನ ದಿನಗಳಲ್ಲೂ ಒಳ್ಳೆಯ ಸುದ್ದಿ ಸಿಗಲಿದೆ. ಸೂರ್ಯಕಾಂತ ಅವರಿಗೆ ಉಜ್ವಲ ಭವಿಷ್ಯ ಇದೆ ಎಂದು ಹೇಳಿದರು.
ಸೂರ್ಯಕಾಂತ ನಾಗಮಾರಪಳ್ಳಿ ಅಣ್ಣನ ಮಾತಿನಿಂದ ಭಾವುಕರಾದರು. ಅವರ ಕಣ್ಣುಗಳು ತೇವಗೊಂಡವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.