ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಸರ್ಕಾರಿ ನೌಕರರು

Published 6 ಮಾರ್ಚ್ 2024, 8:49 IST
Last Updated 6 ಮಾರ್ಚ್ 2024, 8:49 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಎರಡು ದಿನಗಳ ಕ್ರೀಡಾಕೂಟ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ನೌಕರರು ಬಂದಿದ್ದರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ನೌಕರರು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮಹಿಳೆಯರ ವಿಭಾಗದ ಅಥ್ಲೆಟಿಕ್ಸ್‌ನೊಂದಿಗೆ ಕ್ರೀಡಾಕೂಟ ಆರಂಭಗೊಂಡಿತು. ಬಳಿಕ ಪುರುಷರ ವಿಭಾಗದ ಅಥ್ಲೆಟಿಕ್ಸ್‌ ನಡೆಯಿತು. ಆನಂತರ ವಾಲಿಬಾಲ್‌, ಗುಂಡು ಎಸೆತ, ಕೊಕ್ಕೊ, ಕಬಡ್ಡಿ, ಥ್ರೋ ಬಾಲ್, 100 ಮೀ. ಓಟ, 200 ಮೀ, 400 ಮೀ. ಓಟ, 800 ಮೀ. ಓಟ, ಬ್ಯಾಡ್ಮಿಂಟನ್, ಕೇರಂ, ವೇಟ್ ಲಿಫ್ಟಿಂಗ್, ಕುಸ್ತಿ ಸ್ಪರ್ಧೆಗಳು ನಡೆದವು. ರಂಗ ಮಂದಿರದಲ್ಲಿ ಜಾನಪದ ನೃತ್ಯ, ಶಾಸ್ತ್ರೀಯ ಸಂಗೀತ, ಕೋಲಾಟ ಹಾಗೂ ಮತ್ತಿತರ ಸ್ಪರ್ಧೆಗಳು ಜರುಗಿದವು. 

ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಅವರು ವೇದಿಕೆಗೆ ಬಂದಾಗ ಸಮಯ ಮಧ್ಯಾಹ್ನ 12.30 ಆಗಿತ್ತು. ಕ್ರೀಡಾ ಜ್ಯೋತಿ ಬರ ಮಾಡಿಕೊಂಡು, ಬಲೂನ್‌ ಹಾರಿಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು,‘ಸರ್ಕಾರಿ ನೌಕರರು ಸರ್ಕಾರದ ಬೆನ್ನೆಲುಬು. ಪ್ರಜಾಪ್ರಭುತ್ವದ ಆಧಾರಸ್ತಂಭ. ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಲ್ಲಿ ನೌಕರರ ಪಾತ್ರ ದೊಡ್ಡದಿದೆ. ಸರ್ಕಾರಿ ನೌಕರರು ಪ್ರತಿಭಾವಂತರು ಹಾಗೂ ಶ್ರಮಜೀವಿಗಳು’ ಎಂದು ಬಣ್ಣಿಸಿದರು.

ಜನಪ್ರತಿನಿಧಿಗಳಿಗೆ ಐದು ವರ್ಷ ಅಧಿಕಾರದಲ್ಲಿರಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಸರ್ಕಾರಿ ನೌಕರರು ಹಾಗಲ್ಲ. ಸರ್ಕಾರಿ ನೌಕರರಾಗಿ ಒಂದು ಸಲ ಸೇರಿಕೊಂಡರೆ 30ರಿಂದ 35 ವರ್ಷ ಸೇವೆ ಸಲ್ಲಿಸುತ್ತೀರಿ. ನಿಮ್ಮ ಮೇಲೆ ಬಹಳ ಜವಾಬ್ದಾರಿ ಇದೆ. ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದೀರಿ. ಈ ರೀತಿಯ ಕ್ರೀಡಾಕೂಟಗಳಿಂದ ಒತ್ತಡ ಕಡಿಮೆಯಾಗಲಿದೆ ಎಂದರು.

ಪ್ರತಿಯೊಬ್ಬರಿಗೂ ವಿಶ್ರಾಂತಿ, ಮನರಂಜನೆ ಬೇಕು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಒತ್ತಡ ಕಡಿಮೆಯಾಗುತ್ತದೆ. ಇಂತಹ ಕ್ರೀಡಾಕೂಟಗಳಿಂದ ಭಾವೈಕ್ಯ, ಪ್ರೀತಿ, ವಿಶ್ವಾಸ, ನಂಬಿಕೆ, ಸಹೋದರತೆ ಮತ್ತು ಸಹಕಾರ ಭಾವನೆ ಬೆಳೆಯುತ್ತದೆ. ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವದಿಂದ ಸ್ಪರ್ಧೆ ಮಾಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವು ಸ್ವಾಭಾವಿಕ. ಸೋಲೇ ಗೆಲುವಿನ ಮೆಟ್ಟಿಲಾಗುತ್ತದೆ. ಸ್ಪರ್ಧೆ ಆರೋಗ್ಯಕರವಾಗಿರಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ರಘುನಾಥರಾವ್‌ ಮಲ್ಕಾಪುರೆ, ಡಾ. ಚಂದ್ರಶೇಖರ ಪಾಟೀಲ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಗೌತಮ್ ಅರಳಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಕ್ರೀಡಾ ಕಾರ್ಯದರ್ಶಿ ಗಣಪತಿ ಜಮಾದಾರ್, ಸುಮತಿ ರುದ್ರಾ, ವೈಶಾಲಿ, ಓಂಕಾರ ಮಲ್ಲಿಗೆ, ಪಾಂಡುರಂಗ ಬೆಲ್ದಾರ್, ಸಂಜು ಸೂರ್ಯವಂಶಿ, ಮನೋಹರ ಕಾಶಿ ಹಾಗೂ ಮತ್ತಿತರರು ಹಾಜರಿದ್ದರು.

ಮಹಿಳೆಯರ ವಿಭಾಗದ ಓಟದ ಸ್ಪರ್ಧೆಯಲ್ಲಿ ಕಂಡು ಬಂದ ತುರುಸಿನ ಪೈಪೋಟಿ
ಮಹಿಳೆಯರ ವಿಭಾಗದ ಓಟದ ಸ್ಪರ್ಧೆಯಲ್ಲಿ ಕಂಡು ಬಂದ ತುರುಸಿನ ಪೈಪೋಟಿ
ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಪುರುಷರ ವಿಭಾಗದ ಅಥ್ಲೆಟಿಕ್ಸ್‌ ನಡೆಯಿತು
–ಪ್ರಜಾವಾಣಿ ಚಿತ್ರಗಳು
ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಪುರುಷರ ವಿಭಾಗದ ಅಥ್ಲೆಟಿಕ್ಸ್‌ ನಡೆಯಿತು –ಪ್ರಜಾವಾಣಿ ಚಿತ್ರಗಳು

‘ಒಪಿಎಸ್‌ ಜಾರಿಗೆ ಬೆಂಬಲ’

‘ನಮ್ಮ ಸರ್ಕಾರಕ್ಕೆ ಗೌರವ ಬರಬೇಕಾದರೆ ಸರ್ಕಾರಿ ನೌಕರರು ಪ್ರಾಮಾಣಿಕತೆ ದಕ್ಷತೆಯಿಂದ ಜನರ ಸೇವೆ ಮಾಡಬೇಕು. 7ನೇ ವೇತನ ಆಯೋಗ ಹಳೆ ಪಿಂಚಣಿ ಜಾರಿಗೆ ಮತ್ತು ಇನ್ನಿತರ ಬೇಡಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲ. ಸಹಕಾರ ಇದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT