ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ | ಸತತ ಓದಿನಿಂದ ಯುಪಿಎಸ್ಸಿಯಲ್ಲಿ ಯಶಸ್ಸು: ಲಖನ್ ಸಿಂಗ್

756ನೇ ರ್‍ಯಾಂಕ್‌ ಪಡೆದ ಬಸವಕಲ್ಯಾಣದ ಲಖನ್ ಸಿಂಗ್ ರಾಠೋರ್
Published 22 ಏಪ್ರಿಲ್ 2024, 6:40 IST
Last Updated 22 ಏಪ್ರಿಲ್ 2024, 6:40 IST
ಅಕ್ಷರ ಗಾತ್ರ

‘ಸತತ ಓದು, ಕುಟುಂಬದ ಸಹಕಾರ ಮತ್ತು ಎಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದಿರುವುದು ಯುಪಿಎಸ್ಸಿಯಲ್ಲಿ ಯಶಸ್ಸು ದೊರಕಿಸಿಕೊಡುತ್ತದೆ’ ಎಂದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 756ನೇ ರ್‍ಯಾಂಕ್‌ ಪಡೆದ ಬಸವಕಲ್ಯಾಣದ ಲಖನ್ ಸಿಂಗ್ ರಾಠೋರ್ ಹೇಳಿದ್ದಾರೆ. ‘ಪ್ರಜಾವಾಣಿ’ಯ ಬಸವಕಲ್ಯಾಣ ಪ್ರತಿನಿಧಿ ಮಾಣಿಕ ಆರ್.ಭುರೆ ಜೊತೆ ಮಾತನಾಡಿದ್ದು ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

*ಯುಪಿಎಸ್ಸಿ ಆಯ್ಕೆ ಮಾಡಿಕೊಂಡಿದ್ದು ಏಕೆ?

‘ತಮ್ಮ ಮೂವರು ಮಕ್ಕಳಲ್ಲಿ ಒಬ್ಬರು ಐಎಎಸ್ ಅಧಿಕಾರಿ ಆಗಬೇಕೆಂಬುದು ತಂದೆಯವರಾದ ದಿಲದಾರಸಿಂಗ್ ಅವರ ಕನಸಾಗಿತ್ತು. ಹಿರಿಯ ಸಹೋದರ ವೈದ್ಯರಾದರು. ಕಿರಿಯ ಸಹೋದರ ಎಂಜಿನಿಯರ್ ಆದರು. ನಾನೂ ಎಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಆದರೆ, ನಾನು ಯಾವಾಗಲೂ ಅಗ್ರಶ್ರೇಣಿಯಲ್ಲಿ ಉತ್ತೀರ್ಣ ಆಗುತ್ತಿದ್ದರಿಂದ ನೀನು ಬೇರೆ ನೌಕರಿ ಮಾಡುವುದು ಬೇಡ. ಯುಪಿಎಸ್ಸಿ ಪರೀಕ್ಷೆ ಕೊಡಬೇಕು ಎಂದು ಯಾವಾಗಲೂ ಒತ್ತಾಯಿಸುತ್ತಿದ್ದರು. ಆದ್ದರಿಂದ ನಾನು ಗಟ್ಟಿ ಮನಸ್ಸು ಮಾಡಿ ಅವರ ಕನಸು ನನಸು ಮಾಡಿದ್ದೇನೆ. ಆದರೆ ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದು ಈ ಸಂತಸವನ್ನು ಅವರೊಂದಿಗೆ ಹಂಚಿಕೊಳ್ಳಲು ಆಗಲಿಲ್ಲ.

*ಕೋಚಿಂಗ್ ಪಡೆಯುವುದು ಅನಿವಾರ್ಯವೇ?

ಅಭ್ಯರ್ಥಿಗಳಿಗಿರುವ ಅನುಭವ ಮತ್ತು ಅವರ ಸುತ್ತಲಿನ ವಾತಾವರಣದ ಮೇಲೆ ಇದು ಅವಲಂಬಿಸಿದೆ. ನಮ್ಮ ಭಾಗದಲ್ಲಿ ಯಾರಿಗೂ ಯುಪಿಎಸ್ಸಿ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಐಎಎಸ್ ಅಧಿಕಾರಿ ಆದವರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಈ ಕುರಿತಾದ ಎಲ್ಲ ಮಾಹಿತಿ ಲಭ್ಯ ಆಗುತ್ತದೆ. ಹೀಗಾಗಿ ಅಲ್ಲಿನ ಹೆಚ್ಚಿನವರು ಈ ಪರೀಕ್ಷೆ ಬರೆಯುವುದಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ನಮ್ಮ ಭಾಗದಲ್ಲಿ ಇದರ ಬಗ್ಗೆ ಆಸಕ್ತಿ ಇಲ್ಲ. ನಿರಾಸಕ್ತಿಗೆ ಅನುಭವ ಮತ್ತು ಮಾಹಿತಿಯ ಕೊರತೆ ಕಾರಣವಾಗಿದೆ. ನನಗೂ ಪ್ರಥಮವಾಗಿ ಏನು ಮಾಡಬೇಕೆಂಬುದು ತೋಚಲಿಲ್ಲ. ಆದ್ದರಿಂದ ದೆಹಲಿಯ ವಾಜೀರಾಮ್ ಅ್ಯಂಡ್ ರವಿ ಸೆಂಟರ್‌ನಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದೇನೆ. ನಂತರದಲ್ಲಿ ಇಂಥ ಕೋಚಿಂಗ್‌ನ ಅವಶ್ಯಕತೆ ಇಲ್ಲ ಎಂಬುದು ನನ್ನ ಅರಿವಿಗೆ ಬಂತು. ಈ ಬಗ್ಗೆ ಅನುಭವಸ್ಥರಿಂದ ಸರಿಯಾದ ಮಾಹಿತಿ ಪಡೆಯದಿದ್ದರೆ ಸೋಲು ನಿಶ್ಚಿತ.

*ಉಚಿತ ಮಾರ್ಗದರ್ಶನಕ್ಕೆ ಸಾಧನ ಸೌಲಭ್ಯಗಳಿವೆಯೇ?

ಇದು ಆನ್‌ಲೈನ್ ಯುಗ. ಯೂಟ್ಯೂಬ್, ಇನ್‌ಸ್ಟಾಗ್ರಾಂ ಒಳಗೊಂಡು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕೋಚಿಂಗ್ ಸೆಂಟರ್‌ನವರು ಹಾಗೂ ವಿವಿಧ ವಿಷಯಗಳ ತಜ್ಞರು ಯುಪಿಎಸ್ಸಿ ಕುರಿತಾಗಿ ನಿರಂತರವಾಗಿ ಮಾಹಿತಿ ಒದಗಿಸುತ್ತಿದ್ದಾರೆ. ಇದರಿಂದ ಖಂಡಿತವಾಗಿಯೂ ಉಪಯೋಗ ಆಗುತ್ತಿದೆ. ಇನ್ನುಳಿದಂತೆ ಎನ್‌ಸಿಇಆರ್‌ಟಿಯ ರಾಜಕೀಯ, ಇತಿಹಾಸ, ಭೂಗೋಳ, ವಿಜ್ಞಾನ, ಅರ್ಥಶಾಸ್ತ್ರ, ಪರಿಸರ ವಿಜ್ಞಾನ, ತಂತ್ರಜ್ಞಾನದ ಪುಸ್ತಕಗಳು ಲಭ್ಯ ಇವೆ. ಎಂ.ಲಕ್ಷ್ಮಿಕಾಂತ, ರಮೇಶಸಿಂಗ್, ಶಂಕರ್ ಐಎಎಸ್, ಸ್ಪೆಕ್ಟ್ರಂ ಪುಸ್ತಕಗಳು ಮತ್ತು ವಾಜೀರಾಮ್ ಅ್ಯಂಡ ರವಿ ಸೆಂಟರ್‌ನ ಯೆಲ್ಲೊ ಬುಕ್ ಇವು ಅತ್ಯಗತ್ಯ ಮಾಹಿತಿ ಒದಗಿಸುತ್ತವೆ. ಕೆಲವೊಂದು ಪುಸ್ತಕಗಳ ಬೆಲೆ ಹೆಚ್ಚಿಗಿದ್ದರೂ ಮನೆಯಲ್ಲಿಯೇ ಅಧ್ಯಯನ ನಡೆಸಬಹುದು. ಆನ್‌ಲೈನ್‌ನಲ್ಲೂ ಪುಸ್ತಕಗಳು ಸಿಗುತ್ತವೆ. ಇದಲ್ಲದೆ ಕರ್ನಾಟಕ ಸರ್ಕಾರ ತೀರ ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ನಡೆಸಿ ಮಾಸಿಕ ಶಿಷ್ಯವೇತನ ನೀಡುತ್ತಿದೆ.

*ಸಂದರ್ಶನ ಕಠಿಣವಿರುತ್ತದೆಯೇ? ನಿಮ್ಮ ಸಿದ್ಧತೆ ಹೇಗಿತ್ತು?

ಪ್ರಿಲಿಮ್ಸ್ ಮತ್ತು ಮೇನ್ಸ್‌ಗಿಂತ ಕೊನೆಯ ಹಂತವಾದ ಸಂದರ್ಶನಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಐದನೇ ಸಲಕ್ಕೆ ನನಗೆ ಯಶಸ್ಸು ದೊರಕಿದ್ದು ಮೂರು ಸಲ ಸಂದರ್ಶನ ನೀಡಿದ್ದೇನೆ. ಮೊದಲಿನ ಎರಡು ಸಂದರ್ಶನಗಳಿಂದಲೇ ನನಗೆ ಸಾಕಷ್ಟು ಅನುಭವ ಆಗಿತ್ತು. ಇಲ್ಲಿ ಜ್ಞಾನಕ್ಕೆ ಮಹತ್ವ ಇರುವುದಿಲ್ಲ. ನಮ್ಮ ವ್ಯಕ್ತಿತ್ವದ ಪರೀಕ್ಷೆ ನಡೆಯುತ್ತದೆ. ನಮ್ಮಲ್ಲಿನ ಪ್ರಾಮಾಣಿಕತೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಯೋಚನಾ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ ಎಂಬುದನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ಸಿದ್ಧತೆ ಕೈಗೊಂಡೆ. ವೈಫಲ್ಯದಿಂದ ಸಾಕಷ್ಟು ಅರಿವಾಗುತ್ತದೆ ಎನ್ನುತ್ತಾರಲ್ಲ ಅದು ಸುಳ್ಳಲ್ಲ.

ಒಟ್ಟಾರೆ ಸಿದ್ಧತೆ ಹೇಗಿತ್ತು? ಎಷ್ಟು ಸಮಯ ಓದುತ್ತಿದ್ದೀರಿ?

ಒಂದು ವರ್ಷ ಕೋಚಿಂಗ್‌ಗೆ ಹೋಗಿದ್ದು ಬಿಟ್ಟರೆ ಐದು ವರ್ಷ ಮನೆಯಲ್ಲಿಯೇ ಓದಿದ್ದೇನೆ. ಪ್ರತಿದಿನವೂ 12 ಗಂಟೆ ಸಮಯ ಓದಿಗೆ ಮೀಸಲಿರಿಸಿದ್ದೇನೆ. ಬೆಳಿಗ್ಗೆ ಬೇಗ ಎದ್ದು ಓದಲು ಕೂಡುತ್ತಿದ್ದೆ. ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳುವುದಕ್ಕಾಗಿ ಪ್ರಥಮವಾಗಿ ಕೆಲ ಪ್ರಮುಖ ದಿನಪತ್ರಿಕೆಗಳನ್ನು ಪ್ರಥಮ ಪುಟದಿಂದ ಕೊನೆಯವರೆಗೂ ಓದುತ್ತಿದ್ದೆ. ನಂತರ ಚಹಾ ತಿಂಡಿಯ ನಂತರ ಪ್ರಮುಖ ವಿಷಯಗಳ ಪುಸ್ತಕಗಳನ್ನು ಓದುತ್ತಿದ್ದೆ. ಮಧ್ಯಾಹ್ನದಿಂದ ರಿವಿಷನ್, ವಿಶ್ಲೇಷಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಫೋನ್ ಮುಖಾಂತರ ಸಂಪರ್ಕಿಸಿ ಕೆಲ ಗೆಳೆಯರೊಂದಿಗೆ ಈ ಬಗ್ಗೆ ಚರ್ಚಿಸುತ್ತಿದ್ದೆ.

*ಕುಟುಂಬದ ಸಹಕಾರ ಹೇಗಿತ್ತು? ಹೊಸಬರಿಗೆ ನಿಮ್ಮ ಸಂದೇಶವೇನು?

ಎರಡು ವರ್ಷಗಳ ಹಿಂದೆ ನನ್ನ ಮದುವೆ ಆಗಿದ್ದು ಮುಖ್ಯವಾಗಿ ನನ್ನ ಪತ್ನಿ ಮಾಧುರಿ ನನಗೆ ಬಹಳಷ್ಟು ಸಹಕರಿಸಿದ್ದಾಳೆ. ನಾಲ್ಕು ಸಲ ವಿಫಲನಾದರೂ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ಅವಳು ಹುರಿದುಂಬಿಸಿದಳು. ತಂದೆ ದಿಲದಾರಸಿಂಗ್ ಮತ್ತು ತಾಯಿ ಸೀಮಾ ಅವರಂತೂ ಮೊದಲಿನಿಂದಲೇ ಎಷ್ಟೇ ಹಣ ಖರ್ಚಾಗಲಿ ನೀನು ಹಿಂದಿರುಗಿ ನೋಡುವುದು ಬೇಡ ಎಂದಿದ್ದರು. ತಂದೆಯವರು ನಿಧನರಾಗಿ ಎರಡು ವರ್ಷವಾಗುತ್ತಿದ್ದು ಈ ಸಮಯದಲ್ಲಿ ಇಬ್ಬರು ಸಹೋದರರು ನನಗೆ ನೈತಿಕ ಶಕ್ತಿ ನೀಡಿ ಕೊನೆಯವರೆಗೂ ಸರ್ವ ರೀತಿಯಿಂದ ಸಹಕರಿಸಿದರು. ಕೆಲ ಜನ ಯುಪಿಎಸ್ಸಿ ಟಾಪರ್ಸ್‌ಗಳು ನನಗೆ ಅಗತ್ಯ ನೋಟ್ಸ್ ನೀಡಿ ಮಹದುಪಕಾರ ಮಾಡಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಬರೆಯುವವರು ಯೋಜನಾಬದ್ಧವಾಗಿ ಮತ್ತು ಶಿಸ್ತಿನಿಂದ ಅಧ್ಯಯನ ನಡೆಸುವುದು ಅಗತ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಬೇಕು. ಸಾಧಿಸುವ ಛಲ ಇರಬೇಕು.

ಬಸವಕಲ್ಯಾಣದಲ್ಲಿ ಯುಪಿಎಸ್ಸಿಯಲ್ಲಿ 756ನೇ ರ್‍ಯಾಂಕ್‌ ಪಡೆದ ಲಖನ್ ಸಿಂಗ್ ರಾಠೋರ್ ಅವರಿಗೆ ತಾಯಿ ಸೀಮಾ ಸಿಹಿ ತಿನಿಸಿದರು. ಪತ್ನಿ ಮಾಧುರಿ ಜತೆಗಿದ್ದರು
ಬಸವಕಲ್ಯಾಣದಲ್ಲಿ ಯುಪಿಎಸ್ಸಿಯಲ್ಲಿ 756ನೇ ರ್‍ಯಾಂಕ್‌ ಪಡೆದ ಲಖನ್ ಸಿಂಗ್ ರಾಠೋರ್ ಅವರಿಗೆ ತಾಯಿ ಸೀಮಾ ಸಿಹಿ ತಿನಿಸಿದರು. ಪತ್ನಿ ಮಾಧುರಿ ಜತೆಗಿದ್ದರು
ಬಸವಕಲ್ಯಾಣದಲ್ಲಿ ಯುಪಿಎಸ್ಸಿಯಲ್ಲಿ 756ನೇ ರ್‍ಯಾಂಕ್‌ ಪಡೆದ ಲಖನ್ ಸಿಂಗ್ ರಾಠೋರ್ ಅವರಿಗೆ ತಾಯಿ ಸೀಮಾ ಸಿಹಿ ತಿನಿಸಿದರು. ಪತ್ನಿ ಮಾಧುರಿ ಜತೆಗಿದ್ದರು
ಬಸವಕಲ್ಯಾಣದಲ್ಲಿ ಯುಪಿಎಸ್ಸಿಯಲ್ಲಿ 756ನೇ ರ್‍ಯಾಂಕ್‌ ಪಡೆದ ಲಖನ್ ಸಿಂಗ್ ರಾಠೋರ್ ಅವರಿಗೆ ತಾಯಿ ಸೀಮಾ ಸಿಹಿ ತಿನಿಸಿದರು. ಪತ್ನಿ ಮಾಧುರಿ ಜತೆಗಿದ್ದರು
ನಗರಸಭೆ ಕಂದಾಯ ನಿರೀಕ್ಷಕರ ಮಗ
ಲಖನ್ ಸಿಂಗ್ ರಾಠೋರ್ ಬಸವಕಲ್ಯಾಣ ನಗರಸಭೆಯಲ್ಲಿ ಕಂದಾಯ ನಿರೀಕ್ಷಕರ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿದ ದಿಲದಾರಸಿಂಗ್ ರಾಠೋರ್ ಅವರ ಎರಡನೇ ಮಗ. ತಂದೆ ಎರಡು ವರ್ಷದ ಹಿಂದೆ ನಿಧನರಾದರು. ಇವರು ತಾಯಿ ಸೀಮಾ ಪತ್ನಿ ಮಾಧುರಿ ಸಹೋದರರಾದ ಡಾ.ಚೇತನ್ ಸಿಂಗ್ ಭೂಷಣಸಿಂಗ್ ಅವರೊಂದಿಗೆ ಬಸವಕಲ್ಯಾಣದ ಶಿವಾಜಿನಗರ ಓಣಿಯಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಾರೆ. ಪ್ರಾಥಮಿಕ ಪ್ರೌಢ ಮತ್ತು ಪಿಯುಸಿವರೆಗಿನ ಶಿಕ್ಷಣ ಲಾತೂರ್‌ನಲ್ಲಿ ಪೊರೈಸಿದ್ದು ಬೀದರ್‌ನ ಲಿಂಗರಾಜಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ಯುಪಿಎಸ್ಸಿ ಪರೀಕ್ಷೆಗಾಗಿ ದೆಹಲಿಯ ವಾಜೀರಾಮ್ ಅ್ಯಂಡ್ ರವಿ ಸೆಂಟರ್‌ನಲ್ಲಿ ಒಂದು ವರ್ಷ ಕೋಚಿಂಗ್ ಪಡೆದರು. ಐದು ವರ್ಷ ಮನೆಯಲ್ಲಿಯೇ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT