ಬುಧವಾರ, ನವೆಂಬರ್ 20, 2019
20 °C
1.11 ಕೋಟಿ ಜಾನುವಾರುಗಳಿಗೆ ಕಾಲು ಬಾಯಿರೋಗ ಲಸಿಕೆ: ಸಚಿವ ಚವಾಣ್

ಲಸಿಕೆ ಗುಣಮಟ್ಟಕ್ಕೆ ವಿವಿಎಂ ವ್ಯವಸ್ಥೆ

Published:
Updated:
Prajavani

ಬೀದರ್‌: ‘ಜಾನುವಾರುಗಳಿಗೆ ಹಾಕುವ ಲಸಿಕೆಯ ಗುಣಮಟ್ಟ ಕಾಯ್ದುಕೊಳ್ಳಲು ದೇಶದಲ್ಲಿ ಮೊದಲ ಬಾರಿಗೆ ವ್ಯಾಕ್ಸಿನ್ ವಿವಲ್‌ ಮಾನಿಟರ್‌ (ವಿವಿಎಂ) ವ್ಯವಸ್ಥೆ ಅಳವಡಿಸಲಾಗಿದೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಹೇಳಿದರು.

ಔರಾದ್ ತಾಲ್ಲೂಕಿನ ಬೋಂತಿ ತಾಂಡಾದಲ್ಲಿ ಸೋಮವಾರ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ 16ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಲಸಿಕೆ ಹಾಳಾಗದಂತೆ ವಿವಿಎಂನಿಂದ ನಿರ್ದಿಷ್ಟ ತಾಪಮಾನ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಪೋಲಿಯೊ ಮಾದರಿಯಲ್ಲಿ ಲಸಿಕೆಯನ್ನು ಬಳಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ರಾಜ್ಯದ 80.02 ಲಕ್ಷ ದನಗಳು, 27.46 ಲಕ್ಷ ಎಮ್ಮೆಗಳು ಮತ್ತು 2.08 ಲಕ್ಷ ಹಂದಿಗಳು ಸೇರಿ ಒಟ್ಟು 1.11 ಕೋಟಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ತಡೆ ಲಸಿಕೆ ಹಾಕಲಾಗುವುದು’ ಎಂದು ತಿಳಿಸಿದರು.

‘ಅಭಿಯಾನದ ಮೇಲ್ವಿಚಾರಣೆಗಾಗಿ ರಾಜ್ಯಮಟ್ಟದಲ್ಲಿ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳ ಉಸ್ತುವಾರಿಯಲ್ಲಿ ಅಭಿಯಾನ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ 22 ದಿನ ನಿರಂತರವಾಗಿ ನಡೆಯಲಿದೆ. ರಾಜ್ಯದಾದ್ಯಂತ ಒಟ್ಟು 1,003 ಲಸಿಕಾ ತಂಡಗಳನ್ನು ರಚಿಸಲಾಗಿದ್ದು, 9,303 ಲಸಿಕಾದಾರರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಅಭಿಯಾನಕ್ಕೆ 1,192 ವಾಹನಗಳನ್ನು ಬಳಸಿಕೊಳ್ಳಲಾಗುವುದು. ಲಸಿಕಾ ಅಭಿಯಾನದ ಪ್ರಗತಿಯನ್ನು ಆಯಾ ದಿನದಂದು ಮಧ್ಯಾಹ್ನದ ವೇಳೆಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಇದರಿಂದ ಲಸಿಕಾ ಅಭಿಯಾನದ ಮಾಹಿತಿ ಲಭಿಸಲಿದೆ’ ಎಂದು ತಿಳಿಸಿದರು.

‘ಈ ಲಸಿಕಾ ಅಭಿಯಾನವು ಪಲ್ಸ್ ಪೋಲಿಯೊ ಮಾದರಿಯಲ್ಲಿ ನಡೆಯಲಿದೆ. ರೈತನ ಒಡನಾಡಿ, ರೈತರ ಆರ್ಥಿಕ ಚೇತರಿಕೆಗೆ ಸಹಕಾರಿಯಾಗುವ ಜಾನುವಾರುಗಳು ಆರೋಗ್ಯದಿಂದಿರಲು ಲಸಿಕೆ ಹಾಕುವುದು ಕಡ್ಡಾಯವಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವಾಣ್, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ ಇದ್ದರು.

ಪ್ರತಿಕ್ರಿಯಿಸಿ (+)