ಸೋಮವಾರ, ಮಾರ್ಚ್ 27, 2023
31 °C

ಜನವಾಡ:ಮರಕಲ್ ಪಂಚಾಯಿತಿಗೆ ವೈಜಿನಾಥ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕಿನ ಮರಕಲ್ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ವೈಜಿನಾಥ ಶಂಕರ ಕಾಂಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ವೈಜಿನಾಥ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ್ ಪಾಟೀಲ ಅವರು ಆಯ್ಕೆಯನ್ನು ಪ್ರಕಟಿಸಿದರು.
ಹಿಂದೆ ಅಧ್ಯಕ್ಷರಾಗಿದ್ದ ಚಂದ್ರಶೇಖರ ಬಂಡೆಪ್ಪ ಅವರ ವಿರುದ್ಧ ಪಂಚಾಯಿತಿಯ 18 ಸದಸ್ಯರ ಪೈಕಿ 14 ಜನ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಅವಿಶ್ವಾಸಕ್ಕೆ ಗೆಲುವು ಆದ ಕಾರಣ ಅವರು ಅಧಿಕಾರ ಕಳೆದುಕೊಂಡಿದ್ದರು. ಹೀಗಾಗಿ ಖಾಲಿ ಆಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ.

ಸದಸ್ಯರು ಹಾಗೂ ಬೆಂಬಲಿಗರು ನೂತನ ಅಧ್ಯಕ್ಷರಿಗೆ ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು.
ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಕಾರಣ ಹಿಂದಿನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಅಧಿಕಾರ ಉಳಿಸಿಕೊಳ್ಳಲು ಅವರು ಎಷ್ಟೇ ಪ್ರಯತ್ನ ನಡೆಸಿದರೂ ಫಲ ಸಿಗಲಿಲ್ಲ. ಸದಸ್ಯರ ಒಗ್ಗಟ್ಟಿಗೆ ಜಯ ಸಿಕ್ಕಿದೆ. ನೂತನ ಅಧ್ಯಕ್ಷರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದು ಸದಸ್ಯ ದಿಗಂಬರ ಪಂಢರಿನಾಥ ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮೊದಲಾದ ಮೂಲಸೌಕರ್ಯಗಳಿಗೆ ಆದ್ಯತೆ ನೀಡುವೆ. ಜನರ ಸಮಸ್ಯೆಗೆ ಸ್ಪಂದಿಸುವೆ ಎಂದು ನೂತನ ಅಧ್ಯಕ್ಷ ವೈಜಿನಾಥ ಕಾಂಬಳೆ ತಿಳಿಸಿದರು.

ಎನ್.ಎಸ್.ಎಸ್.ಕೆ. ಉಪಾಧ್ಯಕ್ಷ ಬಾಲಾಜಿ ಚೌಹಾಣ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾದೇವಿ ಸಾಯಿಬಣ್ಣ, ಸದಸ್ಯರಾದ ಖಲೀಲ್‍ಮಿಯಾ, ಮಹಬೂಬ್, ಶಿವು, ಪದ್ಮಾವತಿ, ಕವಿತಾ, ಚಿತ್ರಮ್ಮ, ಲಕ್ಷ್ಮಿ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು