ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶತಕದ ಗಡಿ ದಾಟಿದ ಟೊಮೆಟೊ ದರ

ದ್ವಿಶತಕದತ್ತ ಮುಖ ಮಾಡಿದ ಬೀನ್ಸ್‌; ಎಲ್ಲ ತರಕಾರಿ ನೂರರ ಆಸುಪಾಸು
Published 18 ಜೂನ್ 2024, 6:12 IST
Last Updated 18 ಜೂನ್ 2024, 6:12 IST
ಅಕ್ಷರ ಗಾತ್ರ

ಬೀದರ್‌: ಮುಂಗಾರು ಮಳೆ ಚುರುಕು ಪಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಎಲ್ಲ ತರಕಾರಿ ಪದಾರ್ಥಗಳ ಬೆಲೆ ಏಕಾಏಕಿ ಗಗನಕ್ಕೇರಿದೆ.

ಅದರಲ್ಲೂ ಟೊಮೆಟೊ ಬೆಲೆ ಏಕಾಏಕಿ ಜಿಗಿದಿದೆ. ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ ಟೊಮೆಟೊ ₹25ರಿಂದ ₹30ರ ಆಸುಪಾಸಿನಲ್ಲಿತ್ತು. ನಾಲ್ಕೈದು ದಿನಗಳ ಹಿಂದೆ ಮಧ್ಯಮ ಗಾತ್ರದ ಗುಣಮಟ್ಟದ ಟೊಮೆಟೊ ಪ್ರತಿ ಕೆ.ಜಿಗೆ ₹40ರಿಂದ ₹50 ಇತ್ತು. ಈಗ ಒಂದೇ ಮಟ್ಟಿಗೆ ₹100ರಿಂದ ₹120ಕ್ಕೆ ಏರಿಕೆ ಕಂಡಿದೆ. ದಿನ ಕಳೆದಂತೆ ಇದು ಇನ್ನೂ ಹೆಚ್ಚಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಆದಕಾರಣ ಗ್ರಾಹಕರು ಟೊಮೆಟೊ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಕಳೆದೊಂದು ತಿಂಗಳಿಂದ ಬೀನ್ಸ್‌ ದರ ಯಥಾಸ್ಥಿತಿಯಲ್ಲಿದೆ. ಪ್ರತಿ ಕೆ.ಜಿ ಬೀನ್ಸ್‌ ₹180ರಿಂದ ₹200ಕ್ಕೆ ಮಾರಾಟ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಬೀದರ್‌ನ ಹಳೆ ಆರ್‌ಟಿಒ ಕಚೇರಿ ರಸ್ತೆಯಲ್ಲಿ ವ್ಯಾಪಾರಿಗಳು ತರಕಾರಿ ಮಾರುಕಟ್ಟೆ ಮಾಡುತ್ತಿರುವುದು
ಬೀದರ್‌ನ ಹಳೆ ಆರ್‌ಟಿಒ ಕಚೇರಿ ರಸ್ತೆಯಲ್ಲಿ ವ್ಯಾಪಾರಿಗಳು ತರಕಾರಿ ಮಾರುಕಟ್ಟೆ ಮಾಡುತ್ತಿರುವುದು

ಚವಳಿಕಾಯಿ, ಬೀನ್ಸ್‌, ದಪ್ಪ ಮೆಣಸಿನಕಾಯಿ, ಬೆಂಡೆಕಾಯಿ, ಕುಂಬಳಕಾಯಿ, ಬದನೆಕಾಯಿ, ಹೀರೆಕಾಯಿ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆ ಪ್ರತಿ ಕೆ.ಜಿಗೆ ₹80ರಿಂದ ₹100ರ ಆಸುಪಾಸಿನಲ್ಲಿದೆ. ಸೊಪ್ಪು ಕೂಡ ಹಿಂದೆ ಬಿದ್ದಿಲ್ಲ. ಮಧ್ಯಮ ಗಾತ್ರದ ಒಂದು ಕಟ್ಟು ಮೆಂತೆ ಪಲ್ಯ ₹40ಕ್ಕೆ ಮಾರಾಟವಾದರೆ, ಪಾಲಕ್‌, ಸಬ್ಬಕ್ಕಿ ₹30ರಿಂದ ₹40ರ ಆಸುಪಾಸಿನಲ್ಲಿದೆ. ಏಕಾಏಕಿ ಬೆಲೆ ಹೆಚ್ಚಳ ಆಗಿರುವುದರಿಂದ ಗ್ರಾಹಕರು ಕಂಗಲಾಗಿದ್ದಾರೆ. ಎಷ್ಟೇ ಚೌಕಾಸಿ ಮಾಡಿದರೂ ವ್ಯಾಪಾರಿಗಳು ಐದು ರೂಪಾಯಿ ಸಹ ಕಡಿಮೆ ಮಾಡುತ್ತಿಲ್ಲ. ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದರೆ, ‘ಮಾಲು ಬರುತ್ತಿಲ್ಲ. ಮಳೆ ಹೆಚ್ಚಾದರೆ ಇಷ್ಟು ಕೂಡ ಸಿಗುವುದಿಲ್ಲ. ನಿಮಗೆ ಇಷ್ಟವಿದ್ದರೆ ಖರೀದಿಸಿ, ಇಲ್ಲವಾದರೆ ಬಿಡಿ’ ಎಂದು ಖಂಡತುಂಡವಾಗಿ ಹೇಳುತ್ತಿದ್ದಾರೆ. ಈ ಹಿಂದೆ ಮಾರುಕಟ್ಟೆಗೆ ಬಂದವರು ಕನಿಷ್ಠ ಎರಡ್ಮೂರು ದಿನಗಳಿಗೆ ಸಾಕಾಗುವಷ್ಟು ತರಕಾರಿ ಕೊಂಡೊಯ್ಯುತ್ತಿದ್ದರು. ಈಗ ಒಂದು ದಿನಕ್ಕೆ ಸಾಕು ಎನ್ನುತ್ತಿದ್ದಾರೆ. ಕೆಲವರಂತೂ ತರಕಾರಿ ಬೆಲೆ ಕೇಳಿ, ಬೆಲೆ ಕಡಿಮೆ ಆಗುವವರೆಗೆ ಬೇಳೆ, ಕಾಳು ಮಾಡಿಕೊಂಡು ಇದ್ದರಾಯ್ತು ಎಂಬ ಮನಸ್ಥಿತಿಗೆ ಬಂದಿದ್ದಾರೆ.

‘ಯಾವುದೇ ತರಕಾರಿ ಕಾಲು ಕೆ.ಜಿ ಖರೀದಿಸಿದರೂ ₹40ರಿಂದ ₹50 ಬೆಲೆ ಆಗಿದೆ. ತರಕಾರಿಗೆ ಇಷ್ಟೊಂದು ಹಣ ಹಾಕಿದರೆ ಇನ್ನೂ ಬೇರೆಯದಕ್ಕೆ ಏನು ಮಾಡೋದು? ದಿನೇ ದಿನೇ ಎಲ್ಲವೂ ದುಬಾರಿಯಾಗುತ್ತಿದೆ. ಹೀಗೆ ಮುಂದುವರೆದರೆ ಬಡವರು, ಮಧ್ಯಮ ವರ್ಗದವರು ಬದುಕುವುದಾದರೂ ಹೇಗೆ?’ ಎಂದು ಬಿ.ವಿ. ಭೂಮರಡ್ಡಿ ಕಾಲೇಜಿನ ಎದುರು ತರಕಾರಿ ಖರೀದಿಗೆ ಬಂದಿದ್ದ ಶೋಭಾ ಹೇಳಿದರು.

‘ಯಾವ ಸರ್ಕಾರ ಬಂದರೇನೂ ಜನರ ಗೋಳು ಅವರಿಗೆ ಬೇಕಿಲ್ಲ. ಯಾವುದಾದರೂ ಒಂದರ ಬೆಲೆ ಹೆಚ್ಚಾದರೆ ಹೇಗೋ ‘ಮ್ಯಾನೇಜ್‌’ ಮಾಡಬಹುದು. ಪ್ರತಿಯೊಂದರ ಬೆಲೆ ಹೆಚ್ಚಾದರೆ ಹೇಗೆ ಬದುಕುವುದು? ಅದರಲ್ಲೂ ‘ಮಿಡ್ಲ್‌ ಕ್ಲಾಸ್‌’ ಜನ ಎಲ್ಲಿಗೆ ಹೋಗಬೇಕ್ರಿ’ ಎಂದು ಮಮತಾ ಎಂಬುವರು ಸ್ವಲ್ಪ ಗರಂ ಆಗಿಯೇ ಪ್ರಶ್ನಿಸಿದರು.

ನೆರೆ ರಾಜ್ಯಗಳಿಗಿಂತ ಕಡಿಮೆ–ಕಾಂಗ್ರೆಸ್‌ ಪಾಕಿಸ್ತಾನಕ್ಕಿಂತ ಕಮ್ಮಿ–ಬಿಜೆಪಿ ಸಮರ್ಥನೆ ಕೇಂದ್ರ ಸರ್ಕಾರವು ಸತತವಾಗಿ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡುತ್ತ ಬಂದಿದ್ದರಿಂದ ಜನ ಮೊದಲೇ ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ರಾಜ್ಯ ಸರ್ಕಾರವು ಪೆಟ್ರೋಲ್‌ ಡೀಸೆಲ್‌ ಮೇಲೆ ತೆರಿಗೆ ಹಾಕಿರುವುದರಿಂದ ಜನರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ರಾಜ್ಯ ಸರ್ಕಾರ ತೆರಿಗೆ ವಿಧಿಸಿದ ನಂತರ ಬೀದರ್ ಜಿಲ್ಲೆಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹102.85 ಡೀಸೆಲ್‌ ₹88.93ಕ್ಕೆ ಏರಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಈ ವಿಷಯದಲ್ಲೂ ರಾಜಕೀಯ ಮಾಡುತ್ತ ತಮ್ಮ ಸರ್ಕಾರಗಳ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿವೆ. ‘ನೆರೆಯ ಆಂಧ್ರ ಪ್ರದೇಶ ತೆಲಂಗಾಣ ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಲೂ ತೈಲ ಬೆಲೆ ಕಡಿಮೆ ಇದೆ. ಕೇಂದ್ರ ಸರ್ಕಾರದಿಂದ ಬೆಲೆ ಹೆಚ್ಚಾಗಿದೆ. ನಾವು ಅಲ್ಪ ತೆರಿಗೆ ವಿಧಿಸಿದ್ದೇವೆ’ ಎಂದು ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ‘ನೆರೆಯ ಪಾಕಿಸ್ತಾನ ಅಫ್ಘಾನಿಸ್ತಾನ ನೇಪಾಳಕ್ಕೆ ಹೋಲಿಸಿದರೆ ಭಾರತದಲ್ಲಿ ತೈಲ ಬೆಲೆ ಬಹಳ ಕಡಿಮೆ ಇದೆ. ಕೇಂದ್ರ ಸರ್ಕಾರ ಕಳೆದೊಂದು ವರ್ಷದಿಂದ ಬೆಲೆ ಹೆಚ್ಚಿಸಿಲ್ಲ. ಕೇಂದ್ರದ ಮೇಲೆ ಗೂಬೆ ಕೂರಿಸುವ ರಾಜ್ಯ ಕಾಂಗ್ರೆಸ್ ಸರ್ಕಾರ ತೆರಿಗೆ ವಿಧಿಸಿ ಗ್ರಾಹಕರ ಮೇಲೆ ಹೆಚ್ಚಿನ ಭಾರ ಹಾಕಿದೆ’ ಎಂದು ಬಿಜೆಪಿಯರು ಟೀಕಿಸಿದ್ದಾರೆ.

ಬೆಲೆ ಹೆಚ್ಚಳಕ್ಕೆ ಕಾರಣವೇನು?

ಬೀದರ್‌ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಸತತ ಮಳೆಯಾಗುತ್ತಿದೆ. ಸ್ಥಳೀಯವಾಗಿ ಅಲ್ಲಲ್ಲಿ ಬೆಳೆದಿದ್ದ ತರಕಾರಿ ಹಾಳಾಗಿದೆ. ಅಲ್ಪಸ್ವಲ್ಪ ಉಳಿದದ್ದು ಮಾರುಕಟ್ಟೆಗೆ ಬರುತ್ತಿದೆ. ಇನ್ನೂ ನೆರೆ ರಾಜ್ಯಗಳಾದ ತೆಲಂಗಾಣ ಮಹಾರಾಷ್ಟ್ರದಲ್ಲೂ ಮಳೆಯಾಗುತ್ತಿದೆ. ವಿಜಯಪುರ ಬೆಳಗಾವಿ ಸೇರಿದಂತೆ ಇತರೆಡೆಗಳಿಂದ ತರಕಾರಿ ಬರುವುದು ಬಹಳ ಕಡಿಮೆಯಾಗಿದೆ. ಬಂದರೂ ತೀರ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಅದು ಕೂಡ ಸರಿ ಇಲ್ಲ. ತರಕಾರಿ ಬರುವುದು ಕಡಿಮೆ ಆಗಿರುವುದರಿಂದ ಸಹಜವಾಗಿಯೇ ಬೆಲೆ ಹೆಚ್ಚಳವಾಗಿದೆ. ‘ಬರುವ ಅಕ್ಟೋಬರ್‌ ನಂತರವೇ ಸ್ಥಳೀಯವಾಗಿ ಬೆಳೆದ ತರಕಾರಿ ಮಾರುಕಟ್ಟೆಗೆ ಬರುತ್ತದೆ. ಮಳೆ ಹೆಚ್ಚಾದರೆ ಬೇರೆ ಕಡೆಗಳಿಂದ ಬರುತ್ತಿರುವ ಅಲ್ಪಸ್ವಲ್ಪ ತರಕಾರಿಯೂ ಬರುವುದಿಲ್ಲ. ಇದು ಆರಂಭವಷ್ಟೇ. ಇನ್ನೂ ಕೆಲವು ದಿನಗಳ ನಂತರ ಬೆಲೆ ಇನ್ನಷ್ಟು ಹೆಚ್ಚಾಗಲಿದೆ’ ಎಂದು ತರಕಾರಿ ವ್ಯಾಪಾರಿ ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT