ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಏರಿದ ನುಗ್ಗೆಕಾಯಿ, ಇಳಿದ ಬದನೆಕಾಯಿ

ಆಯ್ದ ತರಕಾರಿ ಬೆಲೆ ಕುಸಿತ
Last Updated 6 ಆಗಸ್ಟ್ 2021, 12:45 IST
ಅಕ್ಷರ ಗಾತ್ರ

ಬೀದರ್‌: ರಾಜ್ಯದ ರಾಜಕೀಯದಲ್ಲಿ ಬದಲಾವಣೆಯಾದ ಸಂದರ್ಭದಲ್ಲೇ ತರಕಾರಿ ಮಾರುಕಟ್ಟೆಯಲ್ಲೂ ಅಲ್ಲೋಲ ಕಲ್ಲೋಲವಾಗಿದೆ. ತರಕಾರಿ ರಾಜ ಬದನೆಕಾಯಿ ಕಿರೀಟ ಕೆಳಗಿಳಿದಿದೆ. ನುಗ್ಗೆಕಾಯಿ ಪ್ರತಿಸ್ಪರ್ಧಿಯಂತೆ ಎದ್ದು ನಿಂತಿದೆ.

ರಾಜಕೀಯ ಊಹಾಪೋಹಗಳು ತನ್ನಗಾದ ಮಾದರಿಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ನುಗ್ಗೆಕಾಯಿ, ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ, ಆಲೂಗಡ್ಡೆ ₹ 1,500 ಹಾಗೂ ಎಲೆಕೋಸು ₹ 500 ಹೆಚ್ಚಾಗಿದೆ. ಅತಿವೃಷ್ಟಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹಾರಾಡಿದ್ದ ಈರುಳ್ಳಿ ಎರಡು ವಾರಗಳಿಂದ ಮೆತ್ತಗಾಗಿದೆ. ಮೆಣಸಿನಕಾಯಿ ಸಿಟ್ಟು ಕಡಿಮೆ ಮಾಡಿಕೊಂಡಿದೆ. ಈರುಳ್ಳಿ, ಮೆಣಸಿನಕಾಯಿ ಹಾಗೂ ತೊಂಡೆಕಾಯಿ ಬೆಲೆ ಸ್ಥಿರವಾಗಿದೆ.

ನಾಯಕತ್ವ ಬದಲಾವಣೆಯಾದಂತೆ ತರಕಾರಿ ಮಾರುಕಟ್ಟೆಯಲ್ಲಿ ಹಿರೇಕಾಯಿ ಹಿರಿತನ ಕಳೆದುಕೊಂಡಿದೆ. ಬೆಂಡೆಕಾಯಿ ಬೆಂಡಾಗಿದೆ. ಒಳಗೆ ಕೆಂಪು ಮೇಲೆ ಹಸಿರು ಕಾಣುವ ತೊಂಡೆಕಾಯಿ ಅವಾಜ್‌ ಬಂದ್‌ ಆಗಿದೆ. ಟೊಮೆಟೊ ಹಣ್ಣು ಗಾಯಿ ನೀರಗಾಯಿ ಆಗಿದೆ. ಕೊತಂಬರಿಯ ಘಮ ಘಮವೂ ಕಡಿಮೆಯಾಗಿದೆ.

ಮೆಂತೆ ಸೊಪ್ಪು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ, ಬೀನ್ಸ್‌, ಹೂಕೋಸು ₹ 2 ಸಾವಿರ, ಹಿರೇಕಾಯಿ ₹ 1,500,
ಬದನೆಕಾಯಿ, ಬೆಂಡೆಕಾಯಿ, ಗಜ್ಜರಿ, ಪಾಲಕ್‌ ₹ 1 ಸಾವಿರ, ಬೀಟ್‌ರೂಟ್‌, ಟೊಮೆಟೊ, ಸಬ್ಬಸಗಿ, ಕರಿಬೇವು ₹ 500 ಇಳಿದಿದೆ. ಕೊತಂಬರಿ ₹ 6,500ಕ್ಕೆ ಇಳಿಕೆ ಕಂಡಿದೆ.

ಹುಮನಾಬಾದ್, ಚಿಟಗುಪ್ಪ, ಭಾಲ್ಕಿ ಹಾಗೂ ಬೀದರ್‌ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ತರಕಾರಿ ಬೀದರ್ ಸಗಟು ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಸಹಜವಾಗಿಯೇ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನಾಗರ ಅಮಾವಾಸ್ಯೆಯ ದಿನ ಇನ್ನಷ್ಟು ಭಕ್ತಿಭಾವದಿಂದ ನಾಗ ಪೂಜೆ ಸಲ್ಲಿಸುವಂತೆ ಆಗಿದೆ.

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ತರಕಾರಿ ಬೆಳೆಗಳು ಹಾಳಾಗಿವೆ. ಮೆಣಸಿನಕಾಯಿ ಗಿಡಗಳು ನೀರಿನಲ್ಲಿ ನಿಂತಿರುವ ಕಾರಣ ರೈತರು ಸ್ವಲ್ಪಮಟ್ಟಿಗಾದರೂ ಬೆಳೆ ಕೈಸೇರಲಿ ಎನ್ನುವ ಆಶಾ ಭಾವನೆಯಿಂದ ಮೆಣಸಿನಕಾಯಿ ಬಿಡಿಸಿ ಮಾರುಕಟ್ಟೆಗೆ ಕಳಿಸಿದ್ದಾರೆ. ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬಂದು ಬೆಲೆ ಕಡಿಮೆಯಾಗಿದೆ.

ನೆರೆಯ ರಾಜ್ಯಗಳ ಸೋಲಾಪುರ, ನಾಸಿಕ್, ಹೈದರಾಬಾದ್‌ ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ತರಕಾರಿಗಳ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಎರಡು ವಾರ ತರಕಾರಿ ಬೆಲೆ ಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) - ಕಳೆದ ವಾರ - ಈ ವಾರ
ಈರುಳ್ಳಿ 25-30. 20-30
ಮೆಣಸಿನಕಾಯಿ 25-30, 25-30
ಆಲೂಗಡ್ಡೆ 20-25. 30-40
ಎಲೆಕೋಸು 30-35, 35-40
ಬೆಳ್ಳುಳ್ಳಿ 80-90, 80-100
ಗಜ್ಜರಿ 50-60, 40-50
ಬೀನ್ಸ್‌ 70-80, 50-60
ಬದನೆಕಾಯಿ 50-60, 40-50
ಮೆಂತೆ ಸೊಪ್ಪು 60-80, 40-50
ಹೂಕೋಸು 50-60, 30-40
ಸಬ್ಬಸಗಿ 40-50, 40-45
ಬೀಟ್‌ರೂಟ್‌ , 40-50, 40-45
ತೊಂಡೆಕಾಯಿ 30-40, 30-40
ಕರಿಬೇವು 30-40, 30-35
ಕೊತಂಬರಿ 80-100, 40-45
ಟೊಮೆಟೊ 20-30, 20-25
ಪಾಲಕ್‌ 50-60, 40-50
ಬೆಂಡೆಕಾಯಿ 50-60, 40-50
ಹಿರೇಕಾಯಿ 40-50, 30-35
ನುಗ್ಗೆಕಾಯಿ 40-50. 50-60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT