ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾನಗರ: ಮಾದರಿ ವೆಲ್‌ಫೇರ್‌ ಸೊಸೈಟಿ

ಸ್ವಚ್ಛತೆ, ಪರಿಸರ, ಸಾಮಾಜಿಕ ಸಹಭಾಗಿತ್ವ ಸಂಘಟನೆಯ ಜೀವಾಳ
Last Updated 28 ಫೆಬ್ರುವರಿ 2021, 5:14 IST
ಅಕ್ಷರ ಗಾತ್ರ

ಕಲಬುರ್ಗಿ: ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡುವುದು, ಗಿಡ ಬೆಳೆಸುವುದು, ಆರೋಗ್ಯ ಜಾಗೃತಿ, ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆ ಹಮ್ಮಿಕೊಳ್ಳುವುದು, ಸ್ಪರ್ಧೆಗಳ ಆಯೋಜನೆ, ಸರ್ಕಾರದ ಯೋಜನೆಗಳ ಜಾಗೃತಿ ಮತ್ತು ಅನುಷ್ಠಾನ ಸೇರಿದಂತೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಇಲ್ಲಿನ ಬಸವೇಶ್ವರ ಆಸ್ಪತ್ರೆ ಎದುರಿನ ವಿದ್ಯಾನಗರ ವೆಲ್‌ಫೇರ್‌ ಸೊಸೈಟಿ ಮಾದರಿಯೆನಿಸಿದೆ.

ಕಾಲೊನಿಯಲ್ಲಿ ಅಂದಾಜು 85 ಮನೆಗಳಿದ್ದು, 340 ಜನಸಂಖ್ಯೆ ಇದೆ. ಸುಮಾರು 23 ವರ್ಷಗಳ ಹಿಂದೆ ಆರಂಭಿಸಿರುವ ಈ ವಿದ್ಯಾನಗರ ವೆಲ್‌ಫೇರ್‌ ಸೊಸೈಟಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿ 27 ಜನ ಪದಾಧಿಕಾರಿಗಳಿದ್ದಾರೆ. ಈ ಸಂಘಟನೆಗೆ ಪೂರಕವಾಗಿ ಇದೇ ಕಾಲೊನಿಯ ಮಲ್ಲಿಕಾರ್ಜುನ ತರುಣ ಸಂಘ ಮತ್ತು ಅಕ್ಕ ಮಹಾದೇವಿ ಮಹಿಳಾ ಟ್ರಸ್ಟ್ ಕೂಡ ಕೆಲಸ ಮಾಡುತ್ತಿವೆ.

ಮಹಾನಗರದಲ್ಲಿದ್ದರೂ ವೆಲ್‌ಫೇರ್‌ ಸೊಸೈಟಿಯು ಸಕ್ರಿಯ ಕಾರ್ಯಚಟುವಟಿಕೆಯಿಂದ ಬಡಾವಣೆಯಲ್ಲಿ ಹಳ್ಳಿಯ ವಾತಾವರಣ ನಿರ್ಮಿಸಿದೆ. ಯಾವುದೇ ಸಾಮಾಜಿಕ ಚಟುವಟಿಕೆಯಿದ್ದರೂ ಮುಂಚೂಣಿಯಲ್ಲಿರುತ್ತದೆ. ಮಹಿಳೆಯರೂ ಪಾಲ್ಗೊಳ್ಳುತ್ತಾರೆ.

ಸ್ವಚ್ಛತೆಗೆ ಆದ್ಯತೆ: ವೆಲ್‌ಫೇರ್‌ ಸೊಸೈಟಿಯ ಪದಾಧಿಕಾರಿಗಳು ಸ್ವಯಂ ಸೇವಕರಂತೆ ಕಾರ್ಯನಿರ್ವಹಿಸುತ್ತಾರೆ. ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ಉದ್ಯಾನ, ದೇವಸ್ಥಾನ, ಕಾಲೊನಿಯಲ್ಲಿ ಸ್ವಚ್ಛತೆ ಮಾಡುತ್ತಾರೆ. ಜೊತೆಗೆ ಗಿಡಗಳನ್ನೂ ಬೆಳೆಸಿದ್ದಾರೆ.

‘ನಗರದ ಖುಲ್ಲಾ ಪ್ಲಾಟ್‌ಗಳ ಕಸ ಸಂಗ್ರಹ ಆಗಿತ್ತು. ಇದರಿಂದ ಹಂದಿಗಳ ಉಪಟಳ ಹೆಚ್ಚಾಗಿತ್ತು. ಇದನ್ನರಿತ ಸಂಘಟನೆ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸಿಬ್ಬಂದಿ ಜೊತೆಗೆ ಕಾಲೊನಿಯಲ್ಲಿ ಸುತ್ತಾಡಿ ಧ್ವನಿವರ್ಧಕದ ಮೂಲಕ ಪ್ಲಾಟ್‌ಗಳ ಮಾಲೀಕರು ಖುಲ್ಲಾ ಪ್ಲಾಟ್‌ಗಳನ್ನು ಸ್ವಚ್ಛಗೊಳಿಸುವಂತೆ ಜಾಗೃತಿ ಮೂಡಿಸಿದ್ದೇವೆ’ ಎನ್ನುತ್ತಾರೆ ವಿದ್ಯಾನಗರ ವೆಲ್‌ಫೇರ್‌ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ.

ಮಲ್ಲಿಕಾರ್ಜುನ ದೇವಸ್ಥಾನ: ಆರಾಧ್ಯ ದೈವ ಮತ್ತು ಕಾಲೊನಿಯ ಧಾರ್ಮಿಕ ಚಟುವಟಿಕೆಗಳ ಕೇಂದ್ರ ಬಿಂದು ಈ ಮಲ್ಲಿಕಾರ್ಜುನ ದೇವಸ್ಥಾನ. ಸುಮಾರು 25 ವರ್ಷಗಳ ಹಿಂದೆ ಕಾಲೊನಿಯವರೇ ದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಹಿರಿಯರಾದ ಮಲ್ಲಿನಾಥ ದೇಶಮುಖ ಮತ್ತು ದಿ.ಗುರುಶಾಂತಪ್ಪ ಕೋಳಕೂರು ಹಾಗೂ ನಿವಾಸಿಗಳು ಶ್ರೀಶೈಲದಿಂದ ಉದ್ಭವ ಲಿಂಗ ತಂದು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಪುರಾಣ ಪ್ರವಚನ, ಭಜನೆ, ಹಬ್ಬಗಳ ಆಚರಣೆಗೆ ಮಲ್ಲಿಕಾರ್ಜುನ ದೇವಸ್ಥಾನ ವೇದಿಕೆಯಾಗಿದೆ. ಅಲ್ಲದೆ, ವಿಚಾರ ವಿನಿಮಯಕ್ಕೆ ಇದು ಕೇಂದ್ರ ಸ್ಥಾನ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಇಲ್ಲಿ ಆಯೋಜನೆ ಮಾಡಲಾಗುತ್ತದೆ ಎಂದು ಸೊಸೈಟಿ ಉಪಾಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸುತ್ತಾರೆ.

‘ಮನುಷ್ಯ ಸಂಘಜೀವಿ. ಪರಸ್ಪರ ಸಹಕಾರ, ಸಹಭಾಳ್ವೆ ಇದ್ದಲ್ಲಿ ನೆಮ್ಮದಿ ಜೀವನ ಸಾಧ್ಯ. ಅಲ್ಲದೇ, ಯಾವುದೇ ಕಾರ್ಯ ಯಶಸ್ವಿ ಆಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಸಮಸ್ಯೆಗಳಿದ್ದಲ್ಲಿ ಸಂಘಟನೆಯು ಹಾಜರಾಗಿ ಒಗ್ಗಟ್ಟಾಗಿ ನಿಭಾಯಿಸುವುದು ಸಂಘಟನೆಯ ಗುಟ್ಟು’ ಎಂದು ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT