ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯವ್ಯಾಪ್ತಿ ನಿಗದಿಗೆ ಒತ್ತಾಯಿಸಿ ಗ್ರಾಮ ಲೆಕ್ಕಾಧಿಕಾರಿಗಳ ಧರಣಿ

ಸಮಾನ ಪದೋನ್ನತಿಗೆ ಕಂದಾಯ ಆಯುಕ್ತಾಲಯ ಸ್ಥಾಪನೆ ಮಾಡಿ
Last Updated 18 ಜುಲೈ 2019, 6:46 IST
ಅಕ್ಷರ ಗಾತ್ರ

ಬೀದರ್: ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯ ವ್ಯಾಪ್ತಿ ನಿಗದಿಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಲೆಕ್ಕಾಧಿಕಾರಿಗಳು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಧರಣಿ ನಡೆಸಿ ಕಂದಾಯ ಸಚಿವ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಎಲ್ಲ ಇಲಾಖೆಗಳ ಕಾರ್ಯಗಳನ್ನು ನಿರ್ವಹಿಸುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದರಿಂದಾಗಿ ಗ್ರಾಮ ಲೆಕ್ಕಾಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಸಂಗ ಎದುರಾಗುತ್ತಿದೆ ಎಂದು ದೂರಿದರು.

ಕಂದಾಯ ಇಲಾಖೆಯಲ್ಲಿ 12 ಸಾವಿರಕ್ಕೂ ಅಧಿಕ ಗ್ರಾಮ ಲೆಕ್ಕಾಧಿಕಾರಿಗಳು ಇದ್ದಾರೆ. ದ್ವಿತೀಯ ದರ್ಜೆ ಸಹಾಯಕರು 2,800 ಜನ ಮಾತ್ರ ಇದ್ದಾರೆ. ಮುಂಬಡ್ತಿ ನೀಡುವಾಗ 40:30 ಪ್ರಮಾಣ ನಿಗದಿಪಡಿಸಿರುವುದರಿಂದ ಪ್ರಥಮ ದರ್ಜೆ ಸಹಾಯಕ/ ಕಂದಾಯ ನಿರೀಕ್ಷಕ ಹುದ್ದೆಯ ಪದೋನ್ನತಿಗೆ ಅನೇಕ ವರ್ಷಗಳೇ ಕಳೆದು ಹೋಗುತ್ತಿವೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆಯಲ್ಲಿಯೇ ನಿವೃತ್ತಿ ಹೊಂದುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಗ್ರಾಮ ಲೆಕ್ಕಾಧಿಕಾರಿ, ದ್ವಿತೀಯ ದರ್ಜೆ ಸಹಾಯಕ ಹುದ್ದೆಯಿಂದ ಪದೋನ್ನತಿಗೆ 50:20 ಪ್ರಮಾಣ ನಿಗದಿಪಡಿಸಲು ಸಿ ಆ್ಯಂಡ್ ಆರ್‌ಗೆ ತಿದ್ದುಪಡಿ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಬೇಕು. ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿಶೇಷ ವೇತನ ಶ್ರೇಣಿ ನಿಗದಿಪಡಿಸಬೇಕು. ಪ್ರಯಾಣ ಭತ್ಯೆಯನ್ನು ₹ 2,000ಕ್ಕೆ ಏರಿಸಬೇಕು. ಕಚೇರಿ ಕಟ್ಟಡ ನಿರ್ಮಿಸಬೇಕು. ಈ ದಿಸೆಯಲ್ಲಿ ವಿಳಂಬವಾದಲ್ಲಿ ಮಾಸಿಕ ₹ 2,500 ಕಟ್ಟಡ ಬಾಡಿಗೆ ಭತ್ಯೆ ನೀಡಬೇಕು. ಕಚೇರಿ ಕೆಲಸಕ್ಕೆ ನೇಮಿಸದೆ ಮೂಲ ಹುದ್ದೆಗಳಿಗೆ ಕಳುಹಿಸಲು ಆದೇಶ ಹೊರಡಿಸಬೇಕು. ಇಲಾಖಾ ವಿಚಾರಣೆಗಳನ್ನು ಕಂದಾಯ ಇಲಾಖೆಯಿಂದಲೇ ನಡೆಸಬೇಕು ಎಂದು ಆಗ್ರಹಿಸಿದರು.

ಕಂದಾಯ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಪದೋನ್ನತಿಯಲ್ಲಿ ವ್ಯತ್ಯಾಸ ಇದೆ. ಒಂದು ವಿಭಾಗದಲ್ಲಿ ಶೀಘ್ರ ಪದೋನ್ನತಿ ಪಡೆದರೆ, ಮತ್ತೊಂದು ವಿಭಾಗದಲ್ಲಿ ಪದೋನ್ನತಿಗೆ ವಿಳಂಬವಾಗುತ್ತಿದೆ. ಆದ್ದರಿಂದ ಕಂದಾಯ ಆಯುಕ್ತಾಲಯ ಸ್ಥಾಪಿಸಿ ಎಲ್ಲ ಹುದ್ದೆಗಳಿಗೆ ಒಂದೇ ಮಾದರಿಯಲ್ಲಿ ಪದೋನ್ನತಿ ನೀಡಬೇಕು. ಗ್ರಾಮ ಸಹಾಯಕರ ಹುದ್ದೆಯನ್ನು ಡಿ ವೃಂದದ ಹುದ್ದೆಯನ್ನಾಗಿಸಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಬ್ರುವಾಹನ ಬೆಳಮಗಿ, ಅಧ್ಯಕ್ಷ ಶಿವಾನಂದ ಎಂ. ಪಾಟೀಲ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಪ್ರಧಾನ ಕಾರ್ಯದರ್ಶಿ ರಾಹುಲ್ ದೇವ ಎಚ್. ಪ್ರಸಾದ, ಖಜಾಂಚಿ ವೀರೇಶ ಬಟಕುರ್ಕಿ, ರಾಜ್ಯ ಪರಿಷತ್ ಸದಸ್ಯ ಪ್ರಭಾಕರ ಮಾಳೆ, ಧರ್ಮಣ್ಣ ಭಾಲ್ಕಿ, ಶಿವಲಿಂಗಪ್ಪ ಯರಗಲ್, ಸುಭಾಷ ರಾಠೋಡ, ನೀಲಕಂಠ ಬಿರಾದಾರ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT