ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ಬಸ್‌ ತಂಗುದಾಣ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

Last Updated 19 ಫೆಬ್ರುವರಿ 2023, 4:23 IST
ಅಕ್ಷರ ಗಾತ್ರ

ಭಾಲ್ಕಿ: ಗ್ರಾಮದ ಎಲ್ಲೆಡೆ ನಿರ್ಮಾಣ ವಾಗದ ಸಿಸಿ ರಸ್ತೆ, ಚರಂಡಿ. ನಿರ್ಮಾ ಣವಾಗದ ಬಸ್‌ ನಿಲ್ದಾಣ, ಸಾರ್ವಜನಿಕ ಶೌಚಾಲಯ. ಹಾಳು ಬಿದ್ದು, ಅನೈತಿಕ ಚಟುವಟಿಕೆಗಳ ಕೇಂದ್ರವಾಗಿರುವ ಐತಿಹಾಸಿಕ ಕೋಟೆ, ಗುರುಭವನ.

–ಇವು ತಾಲ್ಲೂಕು ಕೇಂದ್ರದಿಂದ 8 ಕಿ.ಮೀ ಅಂತರದಲ್ಲಿರುವ ಭಾತಂಬ್ರಾ ಗ್ರಾಮದ ಸಮಸ್ಯೆಗಳು. ಇದು ಗ್ರಾಮ ಪಂಚಾಯಿತಿ ಕೇಂದ್ರ, ಜಿಲ್ಲಾ ಪಂಚಾಯಿತಿ ಕ್ಷೇತ್ರವೂ ಆಗಿದೆ. ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮ ಇದು. ಊರಿನ ಗಾತ್ರ, ವಿಶಾಲತೆಗೆ ತಕ್ಕಂತೆ ಸಮಸ್ಯೆಗಳು ಕೂಡ ದೊಡ್ಡದಾಗಿವೆ.

‘13 ಎಕರೆ ವಿಶಾಲ ಪ್ರದೇಶದಲ್ಲಿ ಗ್ರಾಮದ ಕೋಟೆಯು 1820 ರಿಂದ 1850 ರ ಮಧ್ಯದಲ್ಲಿ ರಾಮಚಂದ್ರ ಜಾಧವ್‌, ಧನಾಜಿ ಜಾಧವ್‌ ಅವರಿಂದ ನಿರ್ಮಾಣಗೊಂಡಿದೆ. ಮರಾಠರ ಸಾಮಂತ ರಾಮಚಂದ್ರ ಸೇನ ಜಾಧವ್‌ ಕಾಲದಲ್ಲಿ ಇದನ್ನು ಪುನರ್ ನಿರ್ಮಾಣ ಮಾಡಲಾಗಿದೆ’ ಎಂದು ಹಿರಿಯರು ಹೇಳುತ್ತಾರೆ.

‘ಐತಿಹಾಸಿಕ ಕೋಟೆಯನ್ನು ಹೊಂದಿರುವ ನಮ್ಮ ಗ್ರಾಮ ಜಿಲ್ಲೆಯಲ್ಲಿಯೇ ಪ್ರಮುಖ ಪ್ರವಾಸಿ ಕೇಂದ್ರವಾಗಿ ನಿರ್ಮಾಣವಾಗಬೇಕಿತ್ತು. ಆದರೆ, ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟೆ ಅವಸಾನದ ಅಂಚಿಗೆ ತಲುಪಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ’ ಎಂದು ವಕೀಲ ಮಹೇಶ ರಾಚೋಟೆ ಅಸಮಾಧಾನ ವ್ಯಕ್ತಪಡಿಸಿದರು. ‘ಇನ್ನು ಸುತ್ತಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿರುವ ನಮ್ಮ ಗ್ರಾಮಕ್ಕೆ ವ್ಯಾಪಾರ, ಬ್ಯಾಂಕ್‌, ಶಾಲೆ, ವಿವಿಧ ಕಾರ್ಯ ನಿಮಿತ್ತ ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಆದರೆ, ಗ್ರಾಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶೌಚಾಲಯ ಇಲ್ಲದಿರುವುದರಿಂದ ಅವರು ಹಿಡಿಶಾಪ ಹಾಕುವಂತಾಗಿದೆ. ಬಸ್‌ ನಿಲ್ದಾಣ ಇರದಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಬೇಸಿಗೆ, ಮಳೆಗಾಲದಲ್ಲಿ ರಸ್ತೆ ಪಕ್ಕವೇ ನಿಲ್ಲಬೇಕಾದ ಅನಿವಾರ್ಯತೆ ಇದೆ’ ಎಂದು ವಿದ್ಯಾರ್ಥಿಗಳಾದ ರಾಜಕುಮಾರ, ಸಿದ್ರಾಮ ಅಳಲು ತೋಡಿಕೊಂಡರು.

‘ದೇವಿ ನಗರದಲ್ಲಿ ಸುಮಾರು 10 ವರ್ಷಗಳಿಂದ ಚರಂಡಿ ನಿರ್ಮಾಣ ಆಗಿಲ್ಲ. ಓಣಿಯ ಎಲ್ಲ ಮನೆಗಳ, ಮಳೆ ನೀರು ರಸ್ತೆ ಮಧ್ಯೆ, ಮನೆಗಳ ಅಕ್ಕಪಕ್ಕ ಸಂಗ್ರಹಗೊಳ್ಳುತ್ತಿದ್ದು, ನಿವಾಸಿಗಳು ಚರಂಡಿ ನೀರಿನಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ. ರಸ್ತೆಯ ಕೊನೆಯಲ್ಲಿ ಗುಂಡಿ ನಿರ್ಮಾಣವಾಗಿದ್ದು ವಾಹನ ಸವಾರರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ ವಿಪರೀತವಾಗುತ್ತಿದ್ದು, ಸಾಂಕ್ರಾಮಿಕ ರೋಗಗಳಾದ ಚಿಕುನ್‌ಗುನ್ಯ, ಮಲೇರಿಯಾ, ಕಾಲರಾ ಸೇರಿದಂತೆ ಇತರ ರೋಗಗಳ ಭಯ ಕಾಡುತ್ತಿದೆ’ ಎಂದು ದೀಪಕ ಠಮಕೆ ಹಾಗೂ ಮಹಿಳೆಯರು ಆತಂಕ ವ್ಯಕ್ತಪಡಿಸಿದರು.

‘ಮಾದರಿ ಗ್ರಾಮ, ಪ್ರವಾಸೋದ್ಯಮ ಕೇಂದ್ರವಾಗಿಸಲು ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು’ ಎಂದು ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT