ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾನುಪಾತ ಕಾಯ್ದುಕೊಳ್ಳುವುದು ಅಗತ್ಯ: ಕವಿತಾ ಹುಷಾರೆ

Last Updated 15 ಅಕ್ಟೋಬರ್ 2018, 15:33 IST
ಅಕ್ಷರ ಗಾತ್ರ

ಬೀದರ್: ‘ಲಿಂಗಾನುಪಾತದಲ್ಲಿ ಏರುಪೇರಾದರೆ ಮಹಿಳೆಯರ ಶೋಷಣೆ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಲಿಂಗಾನುಪಾತ ಕಾಯ್ದುಕೊಳ್ಳುವುದು ಅಗತ್ಯ’ ಎಂದು ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತಾ ಹುಷಾರೆ ಹೇಳಿದರು.

ನಗರದ ಸಾಯಿ ಸ್ಫೂರ್ತಿ ಪದವಿ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ವಿಶ್ವ ಗ್ರಾಮೀಣ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು– ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳೆಯರಿಗೆ ಕಾನೂನಿನ ಅಡಿಯಲ್ಲಿ ಸಮಾನ ಸ್ಥಾನ ಕಲ್ಪಿಸಿದರೂ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ
ದ್ವಿತೀಯ ದರ್ಜೆ ಯೇ ಇದೆ. ಮಹಿಳಾ ಸಮಾನತೆಗಾಗಿ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ’ ಎಂದು ತಿಳಿಸಿದರು.

‘ತಾಯಿಯ ಗರ್ಭದಲ್ಲಿರುವ ಭ್ರೂಣ ಹೆಣ್ಣು ಎನ್ನುವುದು ಗೊತ್ತಾಗುತ್ತಲೇ ಕೆಲವರ ಮನಃಸ್ಥಿತಿ ಬದಲಾಗುತ್ತದೆ. ಮಹಿಳೆಯ ಬಗೆಗಿನ ತಿರಸ್ಕಾರದ ಭಾವನೆ ತೊಲಗಬೇಕಾದರೆ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಬೇಕು. ಮಹಿಳಾ ಪರ ಧ್ವನಿ ಎತ್ತುವವರ ಸಂಖ್ಯೆ ಹೆಚ್ಚಾಗಬೇಕು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ರಾಘವೇಂದ್ರ ಮಾತನಾಡಿ, ‘ಇಂದಿನ ಯುವ ಜನಾಂಗ ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದ್ದಾರೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ನಲ್ಲಿ ಬರುವ ಸಂದೇಶ ಹಾಗೂ ಚಿತ್ರಗಳನ್ನು ಮುಂದಾಲೋಚನೆ ಮಾಡದೆ ಬೇರೆಯವರಿಗೆ ಕಳಿಸುವ ಮೂಲಕ ಅಪಾಯವನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ’ ಎಂದರು.

‘ಕಾಲೇಜು ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆಗೆ ಪ್ರಯತ್ನ ಮಾಡುತ್ತಿಲ್ಲ. ಓದುವ ವಯಸ್ಸಿನಲ್ಲಿ ಪ್ರೀತಿ ಮಾಡುತ್ತಿದ್ದಾರೆ. ಮನೆ ಬಿಟ್ಟು ಓಡಿ ಹೋದವರು ಸಂಘರ್ಷದ ಬದುಕನ್ನು ಎದುರಿಸಲಾಗದೆ ಆತ್ಮಸ್ಥೈರ್ಯ ಕಳೆದುಕೊಂಡು ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

ಪ್ರಾಚಾರ್ಯ ಚಂದ್ರಶೇಖರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಂಜುನಾಥ, ಸಮೃದ್ಧಿ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಪುನೀತ ಸಾಳೆ ಪಾಲ್ಗೊಂಡಿದ್ದರು.
ವಾರ್ತಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಹಾಗೂ ಸಮಾಜ ಸೇವಕಿ ಮಮತಾ ರಾಣಿ ಇದ್ದರು. ಚನ್ನಬಸವ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT