ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ: ಆರೋಪಿಗಳ ವಿರುದ್ಧ ಪಿಐಟಿ ಕಾಯ್ದೆ ಬಳಕೆ

ಎಲ್ಲ ಠಾಣೆಗಳಲ್ಲೂ ಎಲೆಕ್ಟ್ರಾನಿಕ್‌ ಇ-ಬೀಟ್‌ ವ್ಯವಸ್ಥೆ ಜಾರಿ
Last Updated 2 ಫೆಬ್ರುವರಿ 2022, 14:05 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 640 ಕೆ.ಜಿ. ವಶಕ್ಕೆ ತೆಗೆದುಕೊಳ್ಳಲಾಗಿದೆ. ನಿಷೇಧಿತ ಮಾದಕ ವಸ್ತುಗಳ ಕಳ್ಳ ಸಾಗಣೆ ಹಾಗೂ ವಹಿವಾಟು ತಡೆಯಲು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಹೇಳಿದರು.

2020ರಲ್ಲಿ 803 ಕೆಜಿ, 2021ರಲ್ಲಿ 1,512 ಕೆ.ಜಿ. ಹಾಗೂ 2022ರಲ್ಲಿ 640 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯವರೇ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಕಂಡು ಬಂದಿದೆ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಆರು ಆರೋ‍ಪಿಗಳು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಹಿಂದಿನ ದಾಖಲೆಗಳಿಂದ ಸಾಬೀತಾಗಿದೆ. ಕೆಲವರು ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಗಾಂಜಾ ಮಾರಾಟದಲ್ಲಿ ತೊಡಗುತ್ತಿದ್ದಾರೆ. ಇನ್ನು ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಣೆ ತಡೆ (ಪಿಐಟಿ ಎನ್‌ಡಿಪಿಎಸ್‌ ಕಾಯ್ದೆ-1988) ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗುವುದು. ಇದು ಗೂಂಡಾ ಕಾಯ್ದೆ ಮಾದರಿಯದ್ದಾಗಿದ್ದು, ಒಂದು ವರ್ಷ ಜಾಮೀನು ಸಿಗುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 47 ಗಾಂಜಾ ಪ್ರಕರಣಗಳು ದಾಖಲಾಗಿವೆ. ಎಲ್ಲ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗಿದೆ. ಮಾದಕ ವಸ್ತುಗಳ ಕಳ್ಳ ಸಾಗಣೆಯ ಒಂದು ಜಾಲ ಇದೆ. ಬೀದರ್ ಜಿಲ್ಲೆಯ ವ್ಯಕ್ತಿಗಳನ್ನು ಸಾಗಣೆಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದು ಹೇಳಿದರು.

ಬೀದರ್‌ ಜಿಲ್ಲೆ ಎರಡು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕಾರಣ ನೆರೆಯ ಜಿಲ್ಲೆಯ ಅಧಿಕಾರಿಗಳೊಂದಿಗೂ ನಿರಂತರ ಸಂಪರ್ಕ ಹೊಂದಿ, ಸಭೆಗಳನ್ನು ನಡೆಸಲಾಗುವುದು. ಒಟ್ಟಾರೆ ಅಕ್ರಮ ಮಾದಕ ವಸ್ತುಗಳ ಸಾಗಣೆ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇ–ಬೀಟ್‌ ವ್ಯವಸ್ಥೆ ಜಾರಿ:ನೈಟ್‌ ಬೀಟ್‌ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಎಲೆಕ್ಟ್ರಾನಿಕ್‌ ಇ- ಬೀಟ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಸಿಬ್ಬಂದಿ ಮೇಲೆ ನಿಗಾ ವಹಿಸಲು ಮತ್ತು ಸಾರ್ವಜನಿಕರಿಗೆ ಸೂಕ್ತ ಭದ್ರತೆ ಒದಗಿಸಲು ಅನುಕೂಲವಾಗಿದೆ. ಪ್ರಾಯೋಗಿಕ ಹಂತದಲ್ಲಿ ಎರಡು ವರ್ಷಗಳ ಹಿಂದೆಯೇ ಬೀದರ್‌ನ ನ್ಯೂಟೌನ್‌ ಠಾಣೆ ವ್ಯಾಪ್ತಿಯಲ್ಲಿ ಇ–ಬೀಟ್‌ ಜಾರಿ ವ್ಯವಸ್ಥೆ ಜಾರಿಗೆ ಬಂದಿದೆ. ಇದೀಗ ಎಲ್ಲ ಠಾಣೆಗಳಲ್ಲೂ ಜಾರಿಗೆ ಬರಲಿದೆ. ಈಗಾಗಲೇ 95 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಗಾಡಿಗಳ ಮೇಲೆ ಪ್ರೆಸ್:ಪೊಲೀಸರ ದಿಕ್ಕು ತಪ್ಪಿಸಲು ಕೆಲವರು ತಮ್ಮ ವಾಹನದ ಮೇಲೆ ಪ್ರೆಸ್‌ ಎಂದು ಬರೆದುಕೊಂಡು ಅಲೆಯುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮಕೈಗೊಳ್ಳುವಂತೆ ಪತ್ರಕರ್ತರು ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಮನವಿ ಮಾಡಿದರು. ‘ಒಂದು ವರ್ಷದ ಹಿಂದೆಯೇ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ನೈಜ ಪತ್ರಕರ್ತರ ಹೆಸರು ಹಾಗೂ ವಾಹನ ಸಂಖ್ಯೆ ಉಲ್ಲೇಖಿಸಿ ಪಟ್ಟಿ ಕೊಡುವಂತೆ ಸೂಚಿಸಲಾಗಿದೆ. ಈ ವರೆಗೂ ಮಾಹಿತಿ ಕೊಟ್ಟಿಲ್ಲ. ಮಾಹಿತಿ ತರಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ತಿಳಿಸಿದರು.

ಬಹುಮಾನ:ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರ್ ಮಾರ್ಗವಾಗಿ ಗಾಂಜಾ ಸಾಗಿಸುತ್ತಿದ್ದ ಮಾಹಿತಿ ದೊರೆತ ತಕ್ಷಣ ತಂಡದೊಂದಿಗೆ ದಾಳಿ ನಡೆಸಿ ₹ 34.20 ಲಕ್ಷ ಮೌಲ್ಯದ 342 ಕೆಜಿ ಗಾಂಜಾ ವಶಪಡಿಸಿಕೊಂಡ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನಂದಿಸಿ ₹ 23 ಸಾವಿರ ಬಹುಮಾನ ನೀಡಿದರು.

ಹುಮನಾಬಾದ್‌ ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಿಪಿಐ ಮಲ್ಲಿಕಾರ್ಜುನ, ಪಿಎಸ್‌ಐ ರವಿಕುಮಾರ, ಸಿಬ್ಬಂದಿ ಭಗವಾನ, ದೀಪಕ, ಸಂಜೀವಕುಮಾರ, ಶಿವಾನಂದ ಸೇರಿ ಒಟ್ಟು 13 ಮಂದಿಗೆ ಬಹುಮಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT