ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಹೆಚ್ಚಿದ ಚಳಿ: ಬೆಚ್ಚನೆ ಉಡುಪುಗಳತ್ತ ಜನರ ಚಿತ್ತ

Last Updated 21 ಡಿಸೆಂಬರ್ 2021, 5:29 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಒಂದು ವಾರದಿಂದ ಚಳಿಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಬೆಚ್ಚನೆಯ ಉಡುಪುಗಳಾದ ಸ್ವೇಟರ್, ತಲೆಯ ರುಮಾಲು, ಜಾಕೆಟ್ ಖರೀದಿಸಲು ಮುಗಿಬೀಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೆಚ್ಚನೆಯ ಉಡುಪುಗಳ ಮಾರಾಟ ಭರ್ಜರಿಯಾಗಿ ಸಾಗಿದೆ.

ಚಳಿಗಾಲ ಪ್ರಾರಂಭವಾಗಿ ಎರಡು ತಿಂಗಳೇ ಕಳೆದಿವೆ. ಆದರೆ ಹೇಳಿಕೊಳ್ಳುವಂತಹ ಚಳಿ ಇರಲೇ ಇಲ್ಲ. ಆದರೆ ಕೆಲವು ದಿನಗಳಿಂದ ಆಗುತ್ತಿರುವ ಚಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಸಂಜೆ ಆದರೆ ಸಾಕು ಮನೆಯಿಂದ ಹೊರ ಬರಲು ಹಿಂದೆಟು ಹಾಕುತ್ತಿದ್ದಾರೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಹಿರಿಯರಿಗೆ ಮೂಳೆಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ಸೂರ್ಯನ ಕಿರಣಗಳಿಂದ ಸ್ನಾಯುಗಳ ಸೆಳೆತ ಕಡಿಮೆಯಾಗುವುದು ಎಂಬ ನಂಬಿಕೆಯಿಂದ ಹಿರಿಯರು ಬೆಳಿಗ್ಗೆ ಸೂರ್ಯನ ಬಿಸಿಲಿಗಾಗಿ ಕಾಯುತ್ತಾರೆ.

ಹಿಂದಿನ ಕಾಲದಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಕುರಿ ಉಣ್ಣೆಯಿಂದ ತಯಾರಿಸಿದ ಬೆಚ್ಚನೆಯ ಉಡುಪು (ಘುಂಗಡಿ), ಮಹಿಳೆಯರಿಗಾಗಿ ಕುಂಚಿ ಇರುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ಬಣ್ಣ ಬಣ್ಣದ ಸ್ವೇಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೀಗಾಗಿ ಘುಂಗಡಿಯಂತಹ ಉಡುಪುಗಳು ಕಣ್ಮರೆಯಾಗಿವೆ ಎಂದು ಹಿರಿಯರಾದ ಬಾಬುರಾವ್ ತಿಳಿಸಿದರು.

ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದೇನೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮನೆಪಾಠಕ್ಕೆ ಹೋಗುತ್ತಿದ್ದೆ. ಆದರೆ ಕಳೆದ ಐದಾರು ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಇದರಿಂದ ಶೈಕ್ಷಣಿಕ ಹಿನ್ನಡೆಯಾಗುವ ಆಗುವ ಆತಂಕ ಎದುರಾಗಿದೆ ಎಂದು ವಿದ್ಯಾರ್ಥಿನಿ ಅಂಬಿಕಾ ತಿಳಿಸಿದಳು.

ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿರುವುದರಿಂದ ಪ್ರತಿದಿನ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರ ಸಂಖ್ಯೆಯೂ ಇಳಿಕೆಯಾಗಿದೆ.ಆದರೆ ವ್ಯಾಯಾಮ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗಿ ಸಾಗುತ್ತದೆ .ಆದರೂ ಕೂಡ ಚಳಿಗೆ ಹೆದರಿ ಬೆಚ್ಚನೆಯ ಮನೆಯಲ್ಲಿಯೇ ಮಲಗುತ್ತಿದ್ದಾರೆ ಎಂದು ಧನರಾಜ ಚಿಮಕೋಡೆ ತಿಳಿಸುತ್ತಾರೆ.

ಸದ್ಯ ಮಕ್ಕಳ, ಮಹಿಳೆಯರ, ಪುರುಷರ ಸ್ವೇಟರಗಳ ಬೇಡಿಕೆ ಹೆಚ್ಚಾಗಿದೆ. ಪ್ರತಿ ಸ್ವೇಟರ್ ಬೆಲೆ ₹ 200 ರಿಂದ ₹2 ಸಾವಿರದವರೆಗೆ ಇವೆ. ಹೆಚ್ಚಾಗಿ ₹500 ಬೆಲೆ ಬಾಳುವ ಸ್ವೇಟರ್‌ಗಳು ಮಾರಾಟವಾಗುತ್ತಿವೆ. ಇದರಿಂದ ವ್ಯಾಪಾರದಲ್ಲಿ ಲಾಭ ಆಗುತ್ತಿದೆ ಎಂದು ವ್ಯಾಪಾರಿ ಪ್ರಮೋದ ಮಹಾಜನ್ ಸಂತಸ ವ್ಯಕ್ತಪಡಿಸಿದರು.

‘ಚಳಿಗಾಲದಲ್ಲಿ ಮಕ್ಕಳನ್ನು ಕಾಪಾಡಿಕೊಳ್ಳುವುದೇ ಒಂದು ಸಾಹಸವಾಗಿದೆ. ಶಾಲೆಗೆ ಹೋಗಬೇಕಾದ ಕಾರಣ ಮಕ್ಕಳು ಬೆಳಿಗ್ಗೆ ಬೇಗನೆ ಏಳಬೇಕು. ಜ್ವರ, ಕೆಮ್ಮು, ನೆಗಡಿ ಸಾಮಾನ್ಯ ಎಂಬಂತಾಗಿದೆ. ಕೋವಿಡ್ ಭೀತಿಯ ನಡುವೆ ಚಳಿಯು ಪಾಲಕರ ನಿದ್ದೆಗೆಡಿಸಿದೆ’ ಎನ್ನುತ್ತಾರೆ ರಾಜಕುಮಾರ ಶೀಲವಂತ.

‘ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಹಾಲು ಮಾರಾಟಗಾರರು, ಪತ್ರಿಕಾ ವಿತರಕರು ಸೇರಿದಂತೆ ಇನ್ನಿತರರು ಸ್ವೇಟರ್ ಧರಿಸಿಕೊಂಡು ತಮ್ಮ ದೈನಂದಿನ ಕಾರ್ಯ ಮುಂದುವರೆಸಿದ್ದಾರೆ’ ಎಂದು ಮಧುಕರ ರೆಡ್ಡಿ ತಿಳಿಸುತ್ತಾರೆ.

‘ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಟೋಪಿ, ಸ್ವೆಟರ್‌ , ಶಾಲು, ಟವೆಲ್‌ ಮಾರಾಟ ಮಾಡುತ್ತಿದ್ದಾರೆ. ಕಿವಿ ಮುಚ್ಚಿಕೊಳ್ಳುವ ಬಟ್ಟೆ ಹಾಕಿದರೆ ಚಳಿಯಿಂದ ರಕ್ಷಣೆ ಪಡೆಯಬಹುದು. ವಿಶೇಷ ಮಾದರಿ ಟೋಪಿಗಳು ಬರುತ್ತಿವೆ. ಎಲ್ಲವೂ ನಮ್ಮನ್ನು ಕೊರೆಯುವ ಚಳಿಯಿಂದ ರಕ್ಷಣೆ ಮಾಡುತ್ತಿವೆ’ ಎನ್ನುತ್ತಾರೆ ಸಾರ್ವಜನಿಕರು.

*ಚಳಿಗಾಲದಲ್ಲಿ ದಿನಕ್ಕೊಮ್ಮೆಯಾದರೂ ಮೈಗೆ ಹಿತವೆನಿಸುವಷ್ಟು ಬಿಸಿನೀರಿನ ಸ್ನಾನ ಮಾಡಬೇಕು. ಬಿಸಿ ನೀರು ಕೀಲುಗಳ ಬಿಗಿತವನ್ನು ಕಡಿಮೆ ಮಾಡುತ್ತದೆ

- ಡಾ.ಸಂದೀಪ ಪಾಟೀಲ,ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT