ಭಾನುವಾರ, ಏಪ್ರಿಲ್ 5, 2020
19 °C
ಶಿಕ್ಷಕರ ಅರ್ಹತಾ ಪರೀಕ್ಷೆಯ ತರಬೇತಿ ಸಮಾರೋಪ

ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಸ್ವಾಮಿ ಜ್ಯೋತಿರ್ಮಯಾನಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕೊರತೆಯಿಲ್ಲ. ಆದರೆ ಅವರಿಗೆ ಸೂಕ್ತ ತರಬೇತಿ, ಪ್ರೋತ್ಸಾಹ, ಮಾರ್ಗದರ್ಶನ ಸಿಕ್ಕರೆ ಶ್ರೇಷ್ಠ ಸಾಧನೆಯನ್ನು ಮಾಡಬಹುದು’ ಎಂದು ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಹೇಳಿದರು.

ವಿವೇಕಾನಂದ ಅಕಾಡೆಮಿಯಿಂದ ಆಶ್ರಮದ ವಿವೇಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ(ಟಿಇಟಿ) ಎರಡನೇ ಬ್ಯಾಚ್ ತರಗತಿ ಸಮಾರೋಪ ಹಾಗೂ ಉಚಿತ ಟಿಇಟಿ ಮಾದರಿ ಪರೀಕ್ಷೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬೀದರ್ ಜಿಲ್ಲೆಯ ಅಭ್ಯರ್ಥಿಗಳಿಗೆ ಇಲ್ಲಿಯೇ ಸೂಕ್ತ ತರಬೇತಿ ನೀಡಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವುದು ಅಕಾಡೆಮಿಯ ಧ್ಯೇಯವಾಗಿದೆ. ಟಿಇಟಿ ತರಗತಿ ಮೊದಲ ಬ್ಯಾಚ್‍ಗೆ ಶೇ. 45 ರಷ್ಟು ಫಲಿತಾಂಶ ಬಂದಿತ್ತು. ಎರಡನೇ ಬ್ಯಾಚ್‍ಗೆ ಶೇ 60ಕ್ಕೂ ಹೆಚ್ಚು ಫಲಿತಾಂಶ ಬರುವ ವಿಶ್ವಾಸವಿದೆ’ ಎಂದರು.

‘ಸ್ಪರ್ಧಾತ್ಮಕ ಪರೀಕ್ಷೆಗಾಗಿ ಬೇರೆ ಬೇರೆ ನಗರಕ್ಕೆ ಹೋಗಿ ಸಾಕಷ್ಟು ಹಣ ಖರ್ಚು ಮಾಡಿಕೊಳ್ಳುವುದನ್ನು ತಪ್ಪಿಸಿ ಸ್ಥಳೀಯವಾಗಿ ನುರಿತ ಬೋಧಕರಿಂದ ಗುಣಮಟ್ಟದ ತರಬೇತಿ ನೀಡುವ ಕೆಲಸ ಒಂದೂವರೆ ವರ್ಷದಿಂದ ಅಕಾಡೆಮಿ ಮಾಡುತ್ತಿದೆ. ಅಭ್ಯರ್ಥಿಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಹೆಚ್ಚಿನ ಸಾಧನೆ ಮಾಡಲಿ ಎನ್ನುವ ಉದ್ದೇಶದಿಂದ ನಿರಂತರ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಧಾರವಾಡ, ಬೆಂಗಳೂರು ಇತರೆ ನಗರಕ್ಕೆ ಒಮ್ಮೆ ಹೋಗಿ ಬರುವ ಪ್ರಯಾಣ ವೆಚ್ಚದ ಮೊತ್ತದಲ್ಲಿಯೇ ನಾವು 30-40 ದಿನಗಳ ತರಗತಿ ನೀಡುತ್ತಿದ್ದೇವೆ. ಲಾಭ ಅಥವಾ ವ್ಯವಹಾರಿಕ ದೃಷ್ಟಿಯಿಂದ ಅಕಾಡೆಮಿ ನಡೆಸುತ್ತಿಲ್ಲ. ಜಿಲ್ಲೆಯ ಬಡ, ಹಿಂದುಳಿದ ಪ್ರತಿಭೆಗಳಿಗೆ ಇಲ್ಲಿಯೇ ಸೂಕ್ತ ತರಬೇತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಬೇಕೆಂಬುದು ನಮ್ಮ ಗುರಿ’ ಎಂದು ಹೇಳಿದರು.

‘ಎಲ್ಲ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಆದರೆ ಇದಕ್ಕೆ ಒಂದಿಷ್ಟು ಪೂರ್ವಸಿದ್ಧತೆ, ತರಬೇತಿ, ಪರಿಣತರ ಮಾರ್ಗದರ್ಶನ ತೀರ ಅಗತ್ಯವಿದೆ. ಜಿಲ್ಲೆಯ ಅನೇಕರು ಕೆಪಿಎಸ್ಸಿಯಲ್ಲಿ ಸಾಧನೆ ಮೆರೆದಿದ್ದಾರೆ. ಕೆಲವರು ಯುಪಿಎಸ್ಸಿಯಲ್ಲೂ ರ್‍ಯಾಂಕ್‌ ಪಡೆದಿದ್ದಾರೆ. ಬಡತನ, ನಾನಾ ಸಮಸ್ಯೆಗಳು ಮೆಟ್ಟಿ ನಿಂತು ಸಾಧನೆ ಮಾಡಿದ ಇಂಥವರಿಗೆ ಮಾದರಿಯನ್ನಾಗಿ ಮಾಡಿಕೊಂಡು ಶ್ರಮಪಟ್ಟು ಅಧ್ಯಯನದಲ್ಲಿ ತೊಡಗಿದರೆ ಹಿಡಿದ ಗುರಿ ಮುಟ್ಟಲು ಸಾಧ್ಯ’ ಎಂದು ಸ್ವಾಮೀಜಿ ಪ್ರತಿಪಾದಿಸಿದರು.

‘ವಿವೇಕಾನಂದ ಅಕಾಡೆಮಿಯು ಜಿಲ್ಲೆಯ ಪ್ರತಿಭಗಳ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುತ್ತಿದೆ. ಶಿಕ್ಷಕರ ಟಿಇಟಿ, ಸಿಇಟಿ ಸೇರಿ ವಿವಿಧ ತರಗತಿ ಯಶಸ್ವಿಯಾಗಿ ನಡೆದಿವೆ. ಇದೇ ತಿಂಗಳ ಕೊನೆಯ ವಾರದಲ್ಲಿ ಕೆಎಎಸ್, ಪಿಎಸ್‍ಐ, ಎಫ್‍ಡಿಎ, ಎಸ್‍ಡಿಎ ಬ್ಯಾಚ್ ಸಂಬಂಧ ಒಂದು ದಿನದ ಉಚಿತ ಕಾರ್ಯಾಗಾರ ನಡೆಯಲಿದೆ. ನಂತರ 45 ದಿನದ ತರಗತಿಯೂ ಆರಂಭವಾಗಲಿದೆ’ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಬೇಕು. ಪರಿಪೂರ್ಣತೆ ಮತ್ತು ಸ್ಪಷ್ಟತೆಯೊಂದಿಗೆ ಹೆಜ್ಜೆಯಿಟ್ಟರೆ ಗುರಿ ಸುಲಭವಾಗಿ ಮುಟ್ಟಿ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ. ಆತ್ಮಶಕ್ತಿ ಜಾಗೃತಗೊಳಿಸಬೇಕು. ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ ಅಡಗಿದೆ. ಹೀಗಾಗಿ ನನ್ನಿಂದ ಏನೂ ಆಗದು ಎಂಬ ಕೀಳರಿಮೆ ಯಾರಲ್ಲೂ ಬರಬಾರದು’ ಎಂದರು.

ತರಗತಿಯಲ್ಲಿನ ಅನುಭವ ಹಂಚಿಕೊಂಡ ಸಂಗೀತಾ ಶೆಟಕಾರ, ರಮೇಶ ಇತರರು, ಇಲ್ಲಿ ನಮ್ಮನ್ನು ಟಿಇಟಿ ಪರೀಕ್ಷೆ ಜತೆಗೆ ಜೀವನ ಎದುರಿಸುವ ಪಾಠವೂ ಸಿಕ್ಕಿದೆ. ಇಲ್ಲಿ ದೊರೆತ ಉತ್ತಮ ಬೋಧನೆ, ಮಾರ್ಗದರ್ಶನ, ಪ್ರೇರಣೆ ಸಾಧಿಸುವ ಛಲ ತುಂಬಿದೆ. ಆತ್ಮವಿಶ್ವಾಸ ಗಟ್ಟಿಗೊಳಿಸಿದೆ. ಗುರಿ ಹೇಗೆ ತಲುಪಬೇಕೆಂಬುದನ್ನು ಸಹ ಕಲಿಸಿದೆ. ಉತ್ತಮ ಸಂಸ್ಕಾರ, ಮೌಲ್ಯ, ಅಧ್ಯಾತ್ಮ ಶಕ್ತಿಯನ್ನೂ ತಿಳಿದಿದ್ದೇವೆ ಎಂದರು.

ಟಿಇಟಿ ಮಾದರಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ವಿವೇಕ ಸಾಹಿತ್ಯ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು