ಹುಮನಾಬಾದ್| ಕೋವಿಡ್ ನಿರ್ಮೂಲನೆಗೆ ಹರಕೆ: 200 ಕಿ.ಮೀ ಉರುಳು ಸೇವೆ

ಹುಮನಾಬಾದ್: ತೆಲಂಗಾಣ ರಾಜ್ಯದ ಜಹೀರಾಬಾದ್ ತಾಲ್ಲೂಕಿನ ಧನಸಿರಿ ಗ್ರಾಮದ ಶಶಿಕಲಾ ಮಾತಾ ಅವರು ಕೋವಿಡ್ ನಿರ್ಮೂಲನೆಗೆ ಪ್ರಾರ್ಥಿಸಿ 200 ಕಿ.ಮೀ ಉರುಳು ಸೇವೆ ಮಾಡುತ್ತಿದ್ದಾರೆ.
ಅವರು ನವೆಂಬರ್ 11 ರಂದು ಧನಸಿರಿ ಗ್ರಾಮದ ಭವಾನಿ ದೇವಸ್ಥಾನದಿಂದ ಉರುಳು ಸೇವೆ ಪ್ರಾರಂಭಿಸಿದ್ದು, ಕಲಬುರಗಿ ಜಿಲ್ಲೆಯ ಧತ್ತರಗಿ ಗ್ರಾಮದ ಭಾಗ್ಯವಂತಿ ದೇವಸ್ಥಾನದವರೆಗೂ ಸೇವೆ ಮಾಡಲಿದ್ದಾರೆ.
ಮಾನವ ಕುಲಕ್ಕೆ ಕೋವಿಡ್ ಸೋಂಕಿನಿಂದ ಮುಕ್ತಿ ಸಿಗಬೇಕು. ಸಕಲ ಜೀವರಾಶಿಗಳಿಗೆ ಒಳಿತಾಗಬೇಕು ಎನ್ನುವ ಉದ್ದೇಶದಿಂದ ಉರುಳು ಸೇವೆ ಮಾಡುತ್ತಿದ್ದಾರೆ. ಎರಡು ವರ್ಷ ದೇಶ ಸೇರಿ ಜಗತ್ತಿನಾದ್ಯಂತ ಕೋವಿಡ್ ಸೋಂಕಿನಿಂದಾಗಿ ಲಕ್ಷಾಂತರ ಜನ ಮೃತಪಟ್ಟಿದ್ದರು. ಹೀಗಾಗಿ ಸೋಂಕು ನಿರ್ಮೂಲನೆ ಆದರೆ ಉರುಳು ಸೇವೆ ಮಾಡುತ್ತೇನೆ ಎಂದು ಧತ್ತರಗಿಯ ಭಾಗ್ಯವಂತಿ ದೇವರಲ್ಲಿ ಬೇಡಿಕೊಂಡಿದ್ದರು.
ಸದ್ಯ ಕೋವಿಡ್ ನಿಯಂತ್ರಣದಲ್ಲಿರುವ ಕಾರಣ ಹರಕೆ ತೀರಿಸುತ್ತಿದ್ದಾರೆ ಎಂದು ಗ್ರಾಮದ ಶ್ರೀನಿವಾಸ್ ತಿಳಿಸಿದರು. 2012-13 ರ ಸಾಲಿನಲ್ಲಿಯೂ ಸಹ ಮಹಾರಾಷ್ಟ್ರದ ತುಳಜಾಪುರದ ಭವಾನಿ ದೇವಸ್ಥಾನದವರೆಗೂ ಶಶಿಕಲಾ ಮಾತಾ ಅವರು ಉರುಳು ಸೇವೆ ಮಾಡಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು. ಹುಮನಾಬಾದ್ ತಾಲ್ಲೂಕಿನ ಹಳ್ಳೀಖೇಡ್ ಕೆ. ಪಟ್ಟಣದಿಂದ 11ನೇ ದಿನದ ಉರುಳು ಸೇವೆಯ ಹರಕೆಯನ್ನು ಸೋಮವಾರ ಮತ್ತೆ ಪ್ರಾರಂಭಿಸಿದ್ದಾರೆ.
ಶಶಿಕಲಾ ಮಾತಾ ಪ್ರತಿದಿನ 6 ಕಿ.ಮೀ ಉರುಳು ಸೇವೆ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 66 ಕಿ.ಮೀ ಸೇವೆ ಮಾಡಿದ್ದಾರೆ.
ಭಕ್ತರಿಂದ ಸ್ವಾಗತ: ಶಶಿಕಲಾ ಮಾತಾ ಅವರು ಮಾಡುತ್ತಿರುವ ಉರುಳು ಸೇವೆಯ ಮೆರವಣಿಗೆ ಗ್ರಾಮಗಳನ್ನು ಸಮೀಪಿಸುತ್ತಿದ್ದಂತೆ ನೂರಾರು ಭಕ್ತರು ಬಂದು ಶಶಿಕಲಾ ಮಾತ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಉರುಳು ಸೇವೆ ಸಂದರ್ಭದಲ್ಲಿ ತಂಡಗಳಿಂದ ಭಜನಾ ಕಾರ್ಯಕ್ರಮ ಗಳು ನಡೆಯುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.