ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿಯಲ್ಲಿ ಲಿಂಗಾಯತ ಬರೆಸಿ

ಬಸವ ದಳ ರಾಷ್ಟ್ರೀಯ ಅಧ್ಯಕ್ಷ ಧನ್ನೂರು ಮನವಿ
Last Updated 3 ಮಾರ್ಚ್ 2021, 3:00 IST
ಅಕ್ಷರ ಗಾತ್ರ

ಬೀದರ್: ಮುಂಬರುವ ಡಿಜಿಟಲ್ ಮಾದರಿ ಜನಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಬೇಕು ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರು ಹೇಳಿದ್ದಾರೆ.

ದೇಶದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಪ್ರತಿ ಪ್ರಜೆಗೂ ತನ್ನ ಧರ್ಮ ನಮೂದಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಹೀಗಾಗಿ ತಮ್ಮ ಧರ್ಮ ಉಲ್ಲೇಖಿಸುವಲ್ಲಿ ಲಿಂಗಾಯತರು ಹಿಂದೆ ಬೀಳಬಾರದು. ಒಗ್ಗಟ್ಟಿನ ಕಾರಣ ಭಾರತದಲ್ಲೇ ಜನ್ಮ ತಳೆದ ಸಿಖ್ಖ, ಜೈನ, ಬೌದ್ಧ ಧರ್ಮಗಳು ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನ ದಕ್ಕಿಸಿಕೊಂಡಿವೆ. ಆ ಧರ್ಮಗಳ ಜನ ಸರ್ಕಾರದ ವಿವಿಧ ಸೌಲಭ್ಯಗಳ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಲಿಂಗಾಯತಕ್ಕೂ ಸ್ವತಂತ್ರ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ಪಡೆ ಯಲು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದಿದ್ದಾರೆ.

900 ವರ್ಷಗಳ ಹಿಂದೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ವೀರಶೈವವೂ ಸೇರಿದಂತೆ 102 ಉಪ ಪಂಗಡಗಳು ಇವೆ. ಜನಗಣತಿಯಲ್ಲಿ ಎಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಹಾಗೂ ಉಪ ಪಂಗಡದ ಕಾಲಂನಲ್ಲಿ ಆಯಾ ಉಪ ಪಂಗಡವನ್ನು ನಮೂದಿಸಬೇಕು. ಇದರಿಂದ ಲಿಂಗಾಯತರ ನಿಖರ ಜನಸಂಖ್ಯೆ ಸರ್ಕಾರಕ್ಕೆ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಬಸವ ದಳ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾಗಳು 2021 ರ ಜನಗಣತಿ ಕುರಿತು ಲಿಂಗಾಯತರಲ್ಲಿ ಜಾಗೃತಿ ಮೂಡಿಸಲಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷರೂ ಆದ ಅವರು ತಿಳಿಸಿದ್ದಾರೆ.

ಕೇಂದ್ರ ಮಾನ್ಯತೆ ಕಲ್ಪಿಸಲಿ: ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ಸಮಿತಿ ವರದಿ ಆಧರಿಸಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಕೇಂದ್ರ ಸರ್ಕಾರ ಸ್ವತಂತ್ರ ಧರ್ಮ ಮಾನ್ಯತೆ ಕಲ್ಪಿಸಿ ಲಿಂಗಾಯತರ ಬಹು ದಿನಗಳ ಬೇಡಿಕೆ ಈಡೇರಿಸಬೇಕು ಎಂದು ಧನ್ನೂರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT