ಮಂಗಳವಾರ, ಜನವರಿ 26, 2021
19 °C
ಭೇಟಿ ಕೊಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ

ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಹಿನ್ನೆಲೆ: ವರ್ಷದ ನಂತರ ಹಳೆಯ ಕಾಮಗಾರಿ ಚುರುಕು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜನವರಿ 6ರಂದು ಬೀದರ್‌ ಹಾಗೂ ಬಸವಕಲ್ಯಾಣಕ್ಕೆ ಭೇಟಿ ಕೊಡುತ್ತಿರುವ ಕಾರಣ ಜಿಲ್ಲಾಡಳಿತ ಚುರುಕಾಗಿದೆ. ಒಂದು ವರ್ಷದ ನಂತರ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ ಮೂಲಕ ನಿರ್ಮಿಸಲಾದ ಹೊಸ ಕ್ರೀಡಾಂಗಣ ಒಪ್ಪಂದ ಪ್ರಕಾರ 2019ರಲ್ಲೇ ಪೂರ್ಣಗೊಳ್ಳಬೇಕಿತ್ತು. ಕ್ರೀಡಾಂಗಣದ ವಿನ್ಯಾಸಕ್ಕೆ ಕ್ರೀಡಾಪಟುಗಳಿಂದ ಆಕ್ಷೇಪ ವ್ಯಕ್ತವಾದ್ದರಿಂದ ವಿಳಂಬವಾಗಿದೆ. ಈಗಲೂ ಕಾಮಗಾರಿಯ ಬಗ್ಗೆ ಕ್ರೀಡಾಪಟುಗಳಲ್ಲಿ ಅಸಮಾಧಾನ ಇದೆ. ಮೊದಲಿದ್ದ ಗ್ಯಾಲರಿಗಿಂತ ಈಗಿನ ಗ್ಯಾಲರಿ ವಿಸ್ತಾರ ಕಡಿಮೆ ಮಾಡಲಾಗಿದೆ. ಕ್ರೀಡಾಂಗಣ ಅಂದ ಕಳೆದುಕೊಂಡಿದೆ.

ಮೈದಾನದಲ್ಲಿ ಹಾವುಗಳು ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ದೂರಿದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿರಲಿಲ್ಲ. ‌ಕ್ರೀಡಾಂಗಣದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಮಂಗಳವಾರ ಸ್ವಚ್ಛಗೊಳಿಸಲಾಯಿತು.

ಎರಡು ದಿನಗಳ ಹಿಂದೆಯಷ್ಟೇ ಒಳಾಂಗಣ ಕ್ರೀಡಾಂಗಣ ಮುಂಭಾಗದಲ್ಲಿ ನಿರ್ಮಿಸಲಾದ ರಸ್ತೆ ಅಂಚಿನಲ್ಲಿ ಮಣ್ಣು ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಎರಡು ದಿನಗಳ ಹಿಂದೆಯಷ್ಟೇ ಜಿಲ್ಲಾ ಕ್ರೀಡಾಂಗಣ ಉದ್ಘಾಟಿಸುವ ಕುರಿತು ಪ್ರಸ್ತಾಪ ಮಾಡಿದ್ದರು. ಕೊನೆಯ ಹಂತದಲ್ಲಿ ಕೈಬಿಡಲಾಗಿದೆ.

ಮುಖ್ಯಮಂತ್ರಿ ಸಂಚರಿಸುವ ಮಾರ್ಗದಲ್ಲಿರುವ ರೋಡ್‌ ಹಂಪ್ಸ್‌ಗಳಿಗೆ ಝಿಬ್ರಾ ಕ್ರಾಸ್‌ ಪೇಂಟಿಂಗ್ ಮಾಡಲಾಯಿತು. ಓಲ್ಡ್‌ಸಿಟಿಯಲ್ಲಿ ರಸ್ತೆ ಮಧ್ಯೆ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಯಿತು.

ಬೀದರ್‌ ನಗರದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಕಟ್ಟಡ ನಿರ್ಮಾಣಗೊಂಡು ಎರಡು ವರ್ಷಗಳಾಗಿವೆ. ಈಗ ಉದ್ಘಾಟನೆಯ ಮುಹೂರ್ತ ಕೂಡಿ ಬಂದಿದೆ.

ಆಸ್ಪತ್ರೆಯ ನಿರ್ಮಾಣದ ಸಂದರ್ಭದಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕಿತ್ತು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ ವರ್ಷ ಆಸ್ಪತ್ರೆ ಉದ್ಘಾಟನೆಯಾಗಿರಲಿಲ್ಲ. ರಾಜ್ಯ ಮಟ್ಟದ ಪಶು ಮೇಳದ ಸಂದರ್ಭದಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಲು ನಿರ್ಧರಿಸಿ ಅಂತಿಮ ಕ್ಷಣದಲ್ಲಿ ಕೈಬಿಡಲಾಯಿತು. ಈಗ ಮತ್ತೆ ಉದ್ಘಾಟನೆಗೆ ಸಜ್ಜುಗೊಳಿಸಲಾಗಿದೆ.

‘ಬೀದರ್‌ನಲ್ಲಿ ಎರಡು ದಿನಗಳಿಂದ ರಸ್ತೆ ಮಧ್ಯದ ತಗ್ಗು ತುಂಬಲಾಗುತ್ತಿದೆ. ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಈಗಾಗಲೇ ನಗರಸಭೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಕೊನೆಯ ಕ್ಷಣದಲ್ಲಿ ಸರಿಪಡಿರುವ ಪ್ರಯತ್ನಗಳು ನಡೆದಿವೆ’ ಎಂದು ಬೀದರ್‌ ಯುಥ್‌ ಎಂಪಾವರ್‌ಮೆಂಟ್ ಅಸೋಸಿಯೇಷನ್‌ ಅಧ್ಯಕ್ಷ ಶಾಹೇದ್‌ ಅಲಿ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು