ಅಭಿವೃದ್ಧಿಗೆ ತೊಡಕಾದ ಅವ್ಯವಸ್ಥೆ ಸಹಿಸಲಾಗದು: ಸಿಇಒ ಮಹಾಂತೇಶ ಬೀಳಗಿ

7

ಅಭಿವೃದ್ಧಿಗೆ ತೊಡಕಾದ ಅವ್ಯವಸ್ಥೆ ಸಹಿಸಲಾಗದು: ಸಿಇಒ ಮಹಾಂತೇಶ ಬೀಳಗಿ

Published:
Updated:
Prajavani

ಬೀದರ್‌: ‘ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆಯ ಅಡಿಪಾಯವೇ ಗಟ್ಟಿ ಇಲ್ಲ. ಇವುಗಳನ್ನು ಸರಿಪಡಿಸದ ಹೊರತು
ಬೀದರ್ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅಭಿವೃದ್ಧಿಗೆ ತೊಡಕಾದ ಅವ್ಯವಸ್ಥೆಯನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಹೇಳಿದರು.

ನಾವದಗೇರಿಯ ಚಂದ್ರಶೇಖರ ಹೆಬ್ಬಾಳೆ ಅವರ ತೋಟದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಎಳ್ಳು ಅಮಾವಾಸ್ಯೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ, ಬಡವರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ಹಾಗೂ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಹೊರತು ಜಿಲ್ಲೆಯ ಸುಧಾರಣೆ ಸಾಧ್ಯವಿಲ್ಲ. ಅಭಿವೃದ್ಧಿಯ ಮೂಲ ಬೇರುಗಳಾದ ಅಂಗನವಾಡಿ, ಆಸ್ಪತ್ರೆ ಹಾಗೂ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿರುವ ಮಟ್ಟಿಗೆ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಈಚೆಗೆ ಕೆಲ ಅಂಗನವಾಡಿಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಅವ್ಯವಸ್ಥೆ ಕಂಡು ಬೇಸರವಾಯಿತು. ಕೆಲವರನ್ನು ವಜಾ, ಅಮಾನತು ಮಾಡಿದ್ದಕ್ಕೆ ನನ್ನ ವಿರುದ್ಧ ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಆದರೂ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದ್ದೇನೆ. ಆದರೆ ಇನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಎಚ್ಚರಿಸಿದರು.

‘ನಾನು ಅತ್ಯಂತ ಬಡ ಕುಟುಂಬದಿಂದ ಬಂದವನು. ಬಡವರ ಕಷ್ಟಗಳು ಏನೆಂಬುವುದು ಚೆನ್ನಾಗಿ ಗೊತ್ತಿದೆ. ಸರ್ಕಾರದ ಕೆಲ ಯೋಜನೆಗಳು ಬಡವರನ್ನು ಬಿಟ್ಟು ಅನ್ಯರ ಪಾಲಾದರೆ ನನ್ನಿಂದ ಸಹಿಸಿಕೊಳ್ಳಲು ಆಗವುದಿಲ್ಲ. ಯೋಜನೆಗಳು ಬಡವರಿಗೆ ತಲುಪುವಂತೆ ಮಾಡುವುದೇ ನನ್ನ ಗುರಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಅವಿನಾಶ, ಹಿಂದುಳಿದ ವರ್ಗಗಳ ಅಧಿಕಾರಿ ಭಾಗ್ಯವಂತಿ, ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ರಾಚಪ್ಪ ಪಾಟೀಲ, ಬಸವತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, ಅಕ್ಕಮಹಾದೇವಿ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಡಾ.ನೀಲಗಂಗಾ ಹೆಬ್ಬಾಳೆ ಇದ್ದರು.

ಗಾಯಕ ಶಿವಕುಮಾರ ಪಾಂಚಾಳ ಹಾಗೂ ಸಂಗಡಿಗರು, ಸಂಜುಕುಮಾರ ಸ್ವಾಮಿ ಉಜನಿ, ಮಾರುತಿ ರಾವಣಗಾಂವೆ, ಬೇಬಾವತಿ, ಮಾರುತಿ ಚಾಂಬೋಳ, ನವಲಿಂಗ ಪಾಟೀಲ, ಮಲ್ಲಯ್ಯ ಸ್ವಾಮಿ ಐನೋಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಲೋಕನಾಥ ಚಾಂಗಲೇರೆ ಹಾಗೂ ಪುಂಡಲೀಕ ಪಾಟೀಲ ಗುಮ್ಮಾ ತಬಲಾ ಸಾಥ ನೀಡಿದರು.

ಎಸ್‌.ಬಿ.ಕುಚಬಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಹೆಬ್ಬಾಳೆ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !