ಮೂಲಸೌಲಭ್ಯಗಳಿಲ್ಲದ ಮಕ್ಕಳ ಪಾಲನಾ ಸಂಸ್ಥೆಗಳು ಕಪ್ಪು ಪಟ್ಟಿಗೆ

7
ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿ, ಸಮಗ್ರ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

ಮೂಲಸೌಲಭ್ಯಗಳಿಲ್ಲದ ಮಕ್ಕಳ ಪಾಲನಾ ಸಂಸ್ಥೆಗಳು ಕಪ್ಪು ಪಟ್ಟಿಗೆ

Published:
Updated:
Deccan Herald

ಶಿವಮೊಗ್ಗ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಹಾಗೂ ಮೂಲಸೌಲಭ್ಯಗಳ ಕುರಿತು ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 46 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿದ್ದು, ಒಟ್ಟು 1,476ಮಕ್ಕಳು ಆಶ್ರಯ ಪಡೆದಿದ್ದಾರೆ. ಈ ಸಂಸ್ಥೆಗಳಲ್ಲಿರುವ ಮಕ್ಕಳ ಸ್ಥಿತಿಗತಿ, ಅವರಿಗೆ ಲಭ್ಯವಿರುವ ಆಹಾರ, ವಸತಿ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಪರಿಸ್ಥಿತಿ, ಸುರಕ್ಷತಾ ವ್ಯವಸ್ಥೆಯನ್ನು ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.   ಅಲ್ಲಿರುವ ಮಕ್ಕಳೊಂದಿಗೆ ಮಾತನಾಡಿ ಅವರ ಹೇಳಿಕೆಗಳನ್ನೂ ದಾಖಲಿಸಿದ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದರು.

ಮೂಲಸೌಲಭ್ಯಗಳಿಲ್ಲದ ಸಂಸ್ಥೆಗಳನ್ನು ಗುರುತಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. ನೋಂದಣಿ ರದ್ದುಗೊಳಿಸಬೇಕು. ಅಲ್ಲಿರುವ ಮಕ್ಕಳನ್ನು ಸಮೀಪದ ಇತರೆ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲು ಮಾಡಬಹುದು. ಸಂಕಷ್ಟದಲ್ಲಿರುವ ಮಕ್ಕಳ ಕುರಿತು ಯಾವುದೇ ಮಾಹಿತಿ ದೊರೆತರೂ ಸಾರ್ವಜನಿಕರು 1,098 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಒದಗಿಸಬೇಕು ಎಂದರು.

ಬಾಲ್ಯ ವಿವಾಹದ ವಿರುದ್ಧ ಜಾಗೃತಿ: ಜಿಲ್ಲೆಯಲ್ಲಿ ಈ ವರ್ಷ ಜೂನ್ ಅಂತ್ಯದವರೆಗೆ ಒಟ್ಟು 13 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 11 ಪ್ರಕರಣಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದು, 2 ಪ್ರಕರಣದಲ್ಲಿ ದೂರು ದಾಖಲಾಗಿದೆ. ಕಳೆದ ವರ್ಷ ಒಟ್ಟು 64 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು, 54 ಪ್ರಕಣಗಳಲ್ಲಿ ಬಾಲ್ಯ ವಿವಾಹ ತಡೆಯಲಾಗಿದೆ. ಬಾಲ್ಯ ವಿವಾಹ ಸಾಮಾನ್ಯವಾಗಿ ನಡೆಯುವ ತಾಂಡಾ ಅಥವಾ ಸಮುದಾಯಗಳ ಮೇಲೆ ನಿಗಾ ಇರಿಸಬೇಕು. ಬಾಲ್ಯ ವಿವಾಹದ ವಿರುದ್ಧ ತಿಂಗಳಿಗೆ ಎರಡು ಬಾರಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.

ಮಾತೃಪೂರ್ಣ ಯೋಜನೆ: ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಒದಗಿಸುವ ಮಾತೃಪೂರ್ಣ ಯೋಜನೆಯನ್ನು ಇನ್ನಷ್ಟು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಸೊರಬದಲ್ಲಿ ಶೇ 82, ಹೊಸನಗರ ಶೇ 52, ತೀರ್ಥಹಳ್ಳಿ ಶೇ 70, ಸಾಗರ ಶೇ 74, ಶಿಕಾರಿಪುರ ಶೇ 95, ಭದ್ರಾವತಿ ಶೇ 88 ಹಾಗೂ ಶಿವಮೊಗ್ಗದಲ್ಲಿ ಶೇ 94ರಷ್ಟು ಅರ್ಹ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಮಾತೃವಂದನಾ ಕಾರ್ಯಕ್ರಮ: ಗರ್ಭಿಣಿಯರಿಗೆ ಮೂರು ಕಂತಿನಲ್ಲಿ ₹ 5 ಸಾವಿರ ನೇರ ಆರ್ಥಿಕ ನೆರವು ಒದಗಿಸುವ ಮಾತೃವಂದನಾ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಯೊಬ್ಬ ಅರ್ಹ ಗರ್ಭಿಣಿ ಒಳಗೊಳ್ಳುವಂತೆ ಖಾತ್ರಿಪಡಿಸಬೇಕು. ಈ ಯೋಜನೆಗೆ ಬಿಪಿಎಲ್ ಕಾರ್ಡ್ ಅಗತ್ಯವಿರುವುದಿಲ್ಲ. ಗರ್ಭಿಣಿ ಸರ್ಕಾರಿ ನೌಕರಳಾಗಿದ್ದರೆ ಮಾತ್ರ ಆಕೆ ಅರ್ಜಿ ಸಲ್ಲಿಸುವಂತಿಲ್ಲ. ಪತಿ ಸರ್ಕಾರಿ ನೌಕರನಾಗಿದ್ದರೂ ಯೋಜನೆಯ ಪ್ರಯೋಜನ ಪಡೆಯಬಹುದು ಎಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !