ಕುಡಿಯುವ ನೀರಿನ ತೊಂದರೆ ಮಾಡಬೇಡಿ

7
ಶಿಕಾರಿಪುರ: ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ‌ಯಡಿಯೂರಪ್ಪ

ಕುಡಿಯುವ ನೀರಿನ ತೊಂದರೆ ಮಾಡಬೇಡಿ

Published:
Updated:
Prajavani

ಶಿಕಾರಿಪುರ: ‘ತಾಲ್ಲೂಕಿನ ಜನತೆಗೆ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಎಚ್ಚರವಹಿಸಬೇಕು’ ಎಂದು ಅಧಿಕಾರಿಗಳಿಗೆ ಶಾಸಕ ಬಿ.ಎಸ್‌. ಯಡಿಯೂರಪ್ಪ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ಜಲಾಶಯಗಳ ನೀರು ಪೋಲಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಜಾನುವಾರು ಹಾಗೂ ಜನರಿಗೆ ಕುಡಿಯುವ ಸಮರ್ಪಕವಾಗಿ ನೀರು ದೊರೆಯುವಂತೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಸಮರ್ಪಕ ವಿದ್ಯುತ್‌ ವಿತರಿಸಬೇಕು’ ಎಂದು ಸೂಚಿಸಿದರು.

ಹಳೇ ಸಂತೆಮೈದಾನ ಸುತ್ತಲೂ ಕಾಪೌಂಡ್‌ ನಿರ್ಮಾಣ ಮಾಡುವ ಪ್ರಕ್ರಿಯೆ ಏನಾಯ್ತು ಹಾಗೂ ಆಶ್ರಯ ಯೋಜನೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿ ಫಲಾನುಭವಿಗಳಿಗೆ ತಲುಪಿದೆಯೇ ಎಂದು ಮುಖ್ಯಾಧಿಕಾರಿ ಸುರೇಶ್‌ಗೆ ಪ್ರಶ್ನಿಸಿದರು.

ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ‘ಕಾಪೌಂಡ್‌ ನಿರ್ಮಾಣಕ್ಕೆ ₹75 ಲಕ್ಷ ಖರ್ಚು ಮಾಡುವ ಬಗ್ಗೆ ಕ್ರಿಯಾ ಯೋಜನೆ ಹಾಕಿಕೊಂಡಿದ್ದು, ಶೀಘ್ರ  ಗುತ್ತಿಗೆ ನೀಡಬೇಕಾಗಿದೆ. ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಂದಿದ್ದು, ಫಲಾನುಭವಿಗಳಿಗೆ ತಲುಪುತ್ತಿದೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ವಾರ್ಡ್‌ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಶಾಸಕ ಯಡಿಯೂರಪ್ಪ ಉದ್ಘಾಟನೆ ಮಾಡಿಸಿ ಹಿರಿಯ ನಾಗರಿಕರ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು’ ಎಂದು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶ್ರೀನಿವಾಸ್‌ಗೆ ಸೂಚಿಸಿದರು.

ಜಿಲ್ಲೆಯ ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳಲ್ಲಿ ಮಂಗನಕಾಯಿಲೆ ತೀವ್ರತೆ ಪಡೆದುಕೊಂಡಿದ್ದು, ಇಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥನಾಗಲೀಕರ್‌ ಪ್ರತಿಕ್ರಿಯಿಸಿ, ‘ತಾಲ್ಲೂಕಿನಲ್ಲಿ ಮಂಗನಕಾಯಿಲೆ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಮುಂಜಾಗ್ರತ ಕ್ರಮ ಕೈಗೊಂಡಿದ್ದೇವೆ’ ಎಂದರು.

ಕೆಎಸ್‌ಆರ್‌ಟಿಸಿ ಡಿಪೊ ನಿರ್ಮಾಣಕ್ಕೆ ಭೂಮಿ ಗುರುತಿಸಿ ನೀಡಬೇಕು ಎಂದು ಪ್ರಭಾರ ತಹಶೀಲ್ದಾರ್‌ ಶೈಲಜಾ ಅವರಿಗೆ ಸಂಸದ ರಾಘವೇಂದ್ರ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಲಿ ಸುಬ್ರಮಣ್ಯ, ಇಒ ಆನಂದಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !