ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ರದ್ದು

7
ಹವಾಮಾನ ವೈಪರೀತ್ಯ: ಹುಬ್ಬಳ್ಳಿಯಿಂದ ಟೇಕ್‌ಆಫ್‌ ಆಗದ ಸಿಎಂ ಕುಮಾರಸ್ವಾಮಿ ಹೆಲಿಕಾಪ್ಟರ್

ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ರದ್ದು

Published:
Updated:
Deccan Herald

ಆಲಮಟ್ಟಿ: ಹವಾಮಾನ ವೈಪರೀತ್ಯದ ಕಾರಣ ಹೆಲಿಕಾಪ್ಟರ್ ಟೇಕ್‌ಆಫ್‌ ಆಗದೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲೇ ಉಳಿದರು. ಇದರಿಂದ ಇಲ್ಲಿನ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ, ಭಾನುವಾರ ಆಯೋಜಿಸಿದ್ದ ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾಯಿತು.

ಇದು, ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನೆರೆದಿದ್ದ ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಯಿತು.

ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಕೃಷ್ಣಾ ಭಾಗ್ಯ ಜಲನಿಗಮದ (ಕೆ.ಬಿ.ಜೆ.ಎನ್‌.ಎಲ್) ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಬರಲಿದ್ದ ಕಾರಣ ಆಲಮಟ್ಟಿಯಿಂದ ಜಲಾಶಯವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಿ, ಡಾಂಬರ್ ಹಾಕಿ ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಸಚಿವರಾದ ಶಿವಾನಂದ ಪಾಟೀಲ ಹಾಗೂ ಎಂ.ಸಿ.ಮನಗೂಳಿ ನೇತೃತ್ವದಲ್ಲಿ ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಬಂದು ಸಿಎಂಗಾಗಿ ಕಾದು ನಿಂತಿದ್ದರು.

ಸೆಪ್ಟೆಂಬರ್‌ನಲ್ಲಿ ಆಯೋಜನೆ: ಈ ವೇಳೆ ತುರ್ತು ಸುದ್ದಿಗೋಷ್ಠಿ ನಡೆಸಿದ ಸಚಿವ ಶಿವಾನಂದ ಪಾಟೀಲ, ’ಹುಬ್ಬಳ್ಳಿಯಲ್ಲಿ ಭಾರಿ ಮಳೆ ಇದ್ದು, ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಮೇಲೇರಲು ಅನುಮತಿ ದೊರೆತಿಲ್ಲ. ಹಾಗಾಗಿ ಬಾಗಿನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಿಎಂ ಇಲ್ಲಿಗೆ ಬಂದು ಬಾಗಿನ ಅರ್ಪಣೆ ಮಾಡಲಿದ್ದಾರೆ. ಶೀಘ್ರ ಅವರು ಭೇಟಿ ನೀಡುವ ದಿನಾಂಕ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

’ಕೆಲವರು ಮೇಲಿಂದ ಮೇಲೆ ಉತ್ತರ–ದಕ್ಷಿಣ ಎಂದು ಮಾತಾಡುತ್ತಿದ್ದಾರೆ. ಅದನ್ನು ಹೋಗಲಾಡಿಸಲು ಮುಖ್ಯಮಂತ್ರಿ ವಿಶೇಷ ಆಸ್ಥೆ ವಹಿಸಿ ಆಲಮಟ್ಟಿಗೆ ಬಂದು ಕೃಷ್ಣೆಗೆ ಬಾಗಿನ ಅರ್ಪಣೆ ಮಾಡಲು ಮುಂದಾಗಿದ್ದರು. ಅದಕ್ಕೆ ಸಾಕಷ್ಟು ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕಾಗಿ ಚುನಾವಣಾ ಆಯೋಗದಿಂದಲೂ ಅನುಮತಿ ಪಡೆಯಲಾಗಿತ್ತು ಎಂದು ಪತ್ರ ಪ್ರದರ್ಶಿಸಿದರು. ಆಲಮಟ್ಟಿಗೆ ಬರುವ ಉದ್ದೇಶದಿಂದ ಕುಮಾರಸ್ವಾಮಿ ಎರಡು ತಾಸಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ. ಊಟ ಕೂಡ ಮಾಡಿಲ್ಲ’ ಎಂದು ಹೇಳಿದ ಶಿವಾನಂದ ಪಾಟೀಲ, ಕಾರ್ಯಕ್ರಮ ರದ್ದಾದ ವಿಚಾರವನ್ನು ಬೇರೆ ರೀತಿಯಲ್ಲಿ ಬಿಂಬಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದರು.

ಪ್ರತಿಭಟನೆ, ಆಕ್ರೋಶ:

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಹಣ ನೀಡಿ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಕಾದು ನಿಂತಿದ್ದ ಅವಳಿ ಜಿಲ್ಲೆಯ ರೈತ ಸಂಘದ ಕಾರ್ಯಕರ್ತರು ಹಾಗೂ ಸ್ಥಳೀಯರು ಕಾರ್ಯಕ್ರಮ ರದ್ದಾದ ವಿಚಾರ ತಿಳಿದು ನಿರಾಶೆಗೊಂಡರು. ಜಲಾಶಯದ ಎದುರು ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿದರು.

‘ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಮೂರು ತಾಸಿನ ಹಾದಿ. ಹೆಲಿಕಾಪ್ಟರ್ ಮೂಲಕ ಸಾಧ್ಯವಾಗದಿದ್ದಲ್ಲಿ ರಸ್ತೆ ಮಾರ್ಗವಾಗಿಯಾದರೂ ಬಂದು ಮುಖ್ಯಮಂತ್ರಿ ಬಾಗಿನ ಅರ್ಪಿಸಬಹುದಿತ್ತು. ಇದು ಉತ್ತರ ಕರ್ನಾಟಕದ ಬಗ್ಗೆ ಅವರಿಗಿರುವ ನಿರ್ಲಕ್ಷ್ಯ ಧೋರಣೆಯನ್ನು ಬಿಂಬಿಸುತ್ತದೆ’ ಎಂದು ಇದೇ ವೇಳೆ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಬಾಗಿನ ಅರ್ಪಿಸದಿದ್ದರೇನು ? ನಾವು ಕೃಷ್ಣೆಗೆ ಗೌರವಪೂರ್ವಕವಾಗಿ ಬಾಗಿನ ಅರ್ಪಿಸುತ್ತೇವೆ. ಅವಕಾಶ ಕೊಡಿ’ ಎಂಬ ಪಟ್ಟು ಹಿಡಿದು ಧರಣಿ ಕುಳಿತರು. ‘ಕುಮಾರಸ್ವಾಮಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದ್ದಿದ್ದರೆ ಇಂದು ವಾಸ್ತವ್ಯ ಹೂಡಿ, ಬಾಗಿನ ಅರ್ಪಿಸುತ್ತಿದ್ದರು’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸುರಿವ ಮಳೆಯಲ್ಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ, ಪ್ರತಿಭಟನಾಕಾರೊಂದಿಗೆ ಚರ್ಚಿಸಿ, ವಾಸ್ತವಾಂಶ ತಿಳಿಸಿದರು. ಬಳಿಕ ಧರಣಿ ಸ್ಥಗಿತಗೊಂಡಿತು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !