ಶ್ರಾವಣದಲ್ಲೂ ‘ಇಂದಿರಾ’ಗೆ ಮತ್ತೊಮ್ಮೆ ವಿಘ್ನ..!

7

ಶ್ರಾವಣದಲ್ಲೂ ‘ಇಂದಿರಾ’ಗೆ ಮತ್ತೊಮ್ಮೆ ವಿಘ್ನ..!

Published:
Updated:
Deccan Herald

ವಿಜಯಪುರ:  ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ತಮ್ಮ ಈ ಹಿಂದಿನ ಆಡಳಿತದಲ್ಲಿ ರಾಜ್ಯದಾದ್ಯಂತ ಅನುಷ್ಠಾನಗೊಳಿಸಿದ್ದ ‘ಇಂದಿರಾ ಕ್ಯಾಂಟೀನ್‌’ ಜಿಲ್ಲೆಯ ವ್ಯಾಪ್ತಿಯಲ್ಲಿ ಇಂದಿಗೂ ಕಾರ್ಯಾಚರಣೆ ಆರಂಭಿಸಿಲ್ಲ. ಇದು ಕಾರ್ಮಿಕರು, ಬಡವರ ತೀವ್ರ ಅಸಮಾಧಾನಕ್ಕೆ ಕಾರಣೀಭೂತವಾಗಿದೆ.

ವಿಧಾನಸಭಾ ಚುನಾವಣೆಯ ಪೂರ್ವದಲ್ಲೇ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕ್ಯಾಂಟೀನ್‌ನ ಕಟ್ಟಡಗಳು ಸಿದ್ಧಗೊಂಡಿದ್ದರೂ; ಇಂದಿನವರೆಗೂ ಚಾಲನೆ ಪಡೆದಿಲ್ಲ. ಅಧಿಕಾರಿ ಸಮೂಹದ ಉದಾಸೀನ ಮನೋಭಾವದಿಂದಲೇ ಉದ್ಘಾಟನೆ ವಿಳಂಬವಾಗಿದೆ ಎಂಬ ಆರೋಪ ಅಸಂಘಟಿತ ಕೃಷಿ ಕೂಲಿ ಕಾರ್ಮಿಕ ವಲಯದಲ್ಲಿ ವ್ಯಾಪಕವಾಗಿದೆ.

ಚುನಾವಣೆ ತಯಾರಿಯಲ್ಲಿ ಜನಪ್ರತಿನಿಧಿಗಳು ತಲ್ಲೀನರಾದರು. ಅಧಿಕಾರಿ ಸಮೂಹ ಸಹ ಕೇಳುವವರು ಇಲ್ಲದಿದ್ದರಿಂದ ನಿರ್ಲಕ್ಷ್ಯ ಮಾಡಿತು. ಈ ವೇಳೆಗೆ ವಿಧಾನಸಭಾ ಚುನಾವಣೆ ಘೋಷಣೆಯಾಯ್ತ. ಚುನಾವಣೆ ಪ್ರಕ್ರಿಯೆ ಮುಗಿಯುವುದರೊಳಗಾಗಿ ಕ್ಯಾಂಟೀನ್‌ಗೆ ಸಂಬಂಧಿಸಿದ ಎಲ್ಲಾ ಕಾರ್ಯ ಪೂರ್ಣಗೊಂಡರು, ಸರ್ಕಾರ ರಚನೆಯ ಕಸರತ್ತು ಅಡ್ಡಿಯಾಯ್ತು.

ಸರ್ಕಾರ ರಚನೆಯಾದ ಬಳಿಕ ಉಸ್ತುವಾರಿ ಸಚಿವರಿಗಾಗಿ ಅಧಿಕಾರಿ ಸಮೂಹ ಕಾದು ಕುಳಿತಿತು. ಉಸ್ತುವಾರಿ ನೇಮಕದ ನಂತರ ದಿನ ನಿಗದಿಪಡಿಸಿಕೊಂಡಿದ್ದರೂ; ಇದೀಗ ಮತ್ತೊಮ್ಮೆ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತೊಮ್ಮೆ ಉದ್ಘಾಟನೆ ಮುಂದೂಡಲ್ಪಟ್ಟಿದೆ. ಇದರಿಂದ ನಮ್ಮ ಜೇಬಿಗೆ ನಿತ್ಯವೂ ಹೊರೆ ಬೀಳುತ್ತಿದೆ ಎನ್ನುತ್ತಾರೆ ಸುರೇಶ ರಾಠೋಡ, ಸತ್‌ಕಾರಾಂ ಹೊಂಗೇರೆ.

ಮತ್ತೊಮ್ಮೆ ಅಡ್ಡಿಯಾದ ಚುನಾವಣಾ ನೀತಿ ಸಂಹಿತೆ * 8 ಇಂದಿರಾ ಕ್ಯಾಂಟೀನ್‌ ವಿಜಯಪುರ ಜಿಲ್ಲೆಯಲ್ಲಿ * 4 ಕ್ಯಾಂಟೀನ್‌ ವಿಜಯಪುರ ನಗರ ವ್ಯಾಪ್ತಿಯಲ್ಲಿ * 5000 ಚದರಡಿ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣ * ಉಪ್ಪಿಟ್ಟು, ಅವಲಕ್ಕಿಯ ಉಪಾಹಾರ * ರೊಟ್ಟಿ–ಚಪಾತಿಯ ಊಟ * ಅನ್ನ–ಸಾಂಬಾರು, ಪಲ್ಲ್ಯೆಯೂ ಉಂಟು

ವಿಜಯಪುರದ ಎಲ್ಲೆಲ್ಲಿ ಇಂದಿರಾ ಕ್ಯಾಂಟೀನ್‌ ?

ಗೋದಾವರಿ ಹೋಟೆಲ್‌ ಮುಂಭಾಗದ ಎನ್‌ಇಕೆಆರ್‌ಟಿಸಿ ಡಿಪೋ ಪಕ್ಕ, ಬಂಜಾರಾ ಕ್ರಾಸ್‌ನಲ್ಲಿನ ಐಟಿಐ ಕಾಲೇಜು ಆವರಣ, ಎಪಿಎಂಸಿ ಮಾರುಕಟ್ಟೆ ಬಳಿ, ಮಹಾನಗರ ಪಾಲಿಕೆಯ ಜಲನಗರ ಕಚೇರಿ ಬಳಿ ಇಂದಿರಾ ಕ್ಯಾಂಟೀನ್‌ನ ಕಟ್ಟಡ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದ್ದು, ಸೇವೆಗೆ ಸಿದ್ಧವಾಗಿವೆ.

ವಿಜಯಪುರ ನಗರದಲ್ಲಿ ಆ 15ರಂದು 4 ಇಂದಿರಾ ಕ್ಯಾಂಟೀನ್‌ ಉದ್ಘಾಟನೆಗೆ ಸಕಲ ಸಿದ್ಧತೆ ನಡೆದಿತ್ತು. ಎಲ್ಲವೂ ಪೂರ್ಣಗೊಂಡಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಇದೀಗ ಮತ್ತೊಮ್ಮೆ ಉದ್ಘಾಟನೆ ಮುಂದೂಡಲಾಗಿದೆ. ನೀತಿ ಸಂಹಿತೆ ಮುಗಿದ ತಕ್ಷಣವೇ ಕ್ಯಾಂಟೀನ್‌ಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ಕೊಡಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾಶೆಟ್ಟಿ ತಿಳಿಸಿದರು.

ನಗರದ ನಾಲ್ಕು ದಿಕ್ಕಿನಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಗೊಂಡಿವೆ. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದ ಮೇಲೆ ಇವುಗಳನ್ನು ಆರಂಭಿಸುವ ಉಮೇದು ಕಾಣದಾಗಿದೆ. ಸದಾ ಒಂದಿಲ್ಲೊಂದು ನೆಪದಲ್ಲಿ ಉದ್ಘಾಟನೆ ಮುಂದೂಡುತ್ತಿದ್ದಾರೆ. ಕೂಲಿ ಕಾರ್ಮಿಕರ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ ಎಂಬ ಅಸಮಾಧಾನ ಪಾಂಡು ರಾಠೋಡ ಅವರದ್ದು.

ಕೈಯಲ್ಲಿ ಕೆಲಸವಿಲ್ಲ. ಜೇಬಲ್ಲಿ ಕಾಸಿಲ್ಲ. ಹೊರಗೆ ಊಟ ಸಸ್ತಾ ಸಿಗಲ್ಲ. ಊರಿಂದ ಬರೋವಾಗ ಬುತ್ತಿ ತರಲು ಕೆಲವೊಮ್ಮೆ ಆಗಲ್ಲ. ಅಂಥ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ಕಾಸಲ್ಲಿ ಹೊಟ್ಟೆ ತುಂಬಾ ತಿನ್ನಬಹುದು. ಎಂದೂ ಚಾಲೂ ಆಗ್ತಾವೇ ಎಂಬುದನ್ನು ಆ ದೇವರೇ ಬಲ್ಲ ಎನ್ನುತ್ತಾರೆ ಪ್ರಕಾಶ ಗಿಡ್ಡೇದ.

₹ 56 ಒಬ್ಬರ ಒಂದು ದಿನದ ಊಟ, ಉಪಾಹಾರದ ವೆಚ್ಚ

ವ್ಯಕ್ತಿಯೊಬ್ಬರು ₹ 25 ಪಾವತಿಸಿದರೆ ಒಂದು ದಿನ ಬೆಳಿಗ್ಗೆ ನಾಷ್ಟಾ, ಮಧ್ಯಾಹ್ನ, ರಾತ್ರಿ ಊಟ ಮಾಡಬಹುದು

₹ 31 ಸ್ಥಳೀಯ ಸಂಸ್ಥೆಗಳೇ ಭರಿಸುವ ಮೊತ್ತ

ಆ 15ರ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರಿಂದ ಉದ್ಘಾಟನೆಯಾಗಬೇಕಿದ್ದ ವಿಜಯಪುರದ ನಾಲ್ಕು ಇಂದಿರಾ ಕ್ಯಾಂಟೀನ್‌ಗೆ ಇದೀಗ ಮತ್ತೊಮ್ಮೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !