ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಗೆ ಸೋಂಕು, ಯಳಂದೂರು ಆಸ್ಪತ್ರೆ ಸೀಲ್‌ಡೌನ್‌

ಜಿಲ್ಲೆಯಲ್ಲಿ ಮತ್ತೆ 12 ಜನರಿಗೆ ಸೋಂಕು, ಕೋವಿಡ್‌–19 ಪ್ರಕರಣಗಳ ಸಂಖ್ಯೆ 132ಕ್ಕೆ
Last Updated 9 ಜುಲೈ 2020, 14:56 IST
ಅಕ್ಷರ ಗಾತ್ರ

ಚಾಮರಾಜನಗರ: ಯಳಂದೂರು ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದ ತಂತ್ರಜ್ಞ, ಚಾಮರಾಜನಗರದ 23 ವರ್ಷದ ಗರ್ಭಿಣಿ ಸೇರಿದಂತೆ 12 ಮಂದಿ ಕೋವಿಡ್‌–19 ತುತ್ತಾಗಿರುವುದು ಗುರುವಾರ ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಕೋವಿಡ್‌–19 ಪ್ರಕರಣಗಳ ಸಂಖ್ಯೆ 132ಕ್ಕೆ ಏರಿದೆ. 101 ಸಕ್ರಿಯ ಪ್ರಕರಣಗಳಿವೆ.

ಬುಧವಾರ ಜಿಲ್ಲೆಯಲ್ಲಿ ಪರೀಕ್ಷಾ ವರದಿ ಬಾರದೇ ಇದ್ದುದರಿಂದ ಯಾವುದೇ ಪ್ರಕರಣ ವರದಿಯಾಗಿರಲಿಲ್ಲ. ಗುರುವಾರ 952 ಗಂಟಲ ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, ಈ ಪೈಕಿ 11 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಇನ್ನೊಬ್ಬ ವ್ಯಕ್ತಿಗೆ ಮೈಸೂರಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. 12 ಮಂದಿಯನ್ನೂ ನಗರದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ವರದಿಯಾದ ಪ್ರಕರಣಗಳ ಪೈಕಿಕೊಳ್ಳೇಗಾಲ ತಾಲ್ಲೂಕಿನ ನಾಲ್ಕು, ಯಳಂದೂರಿನ ನಾಲ್ಕು, ಗುಂಡ್ಲುಪೇಟೆಯಲ್ಲಿ ಮೂರು ಹಾಗೂ ಚಾಮರಾಜನಗರದ ಒಂದು ಪ್ರಕರಣಗಳು ಸೇರಿವೆ.

ಚಾಮರಾಜನಗರದಲ್ಲಿ ರೆಹಮತ್‌ ನಗರದ 23 ವರ್ಷದ ಗರ್ಭಿಣಿಗೆ ಸೋಂಕು ತಗುಲಿದೆ. ಇವರ ಪತಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದಾರೆ. ಕೊಳ್ಳೇಗಾಲದ ನಾಲ್ಕು ಪ್ರಕರಣಗಳು ಮಂಜುನಾಥ ನಗರದಲ್ಲಿ ವರದಿಯಾಗಿದೆ. ಎಲ್ಲರೂ ರೋಗಿ ಸಂಖ್ಯೆ 18,560ರ ಸಂಪರ್ಕಿತರು. 14 ವರ್ಷದ ಬಾಲಕನೂ ಸಂಪರ್ಕಿತರಲ್ಲಿದ್ದಾನೆ.

ಯಳಂದೂರಿನ ಪೈಕಿ ಇಬ್ಬರು ಆಶ್ರಯ ಬಡಾವಣೆಯವರು. ಇವರು ರೋಗಿ ಸಂಖ್ಯೆ 18,552ರ ಸಂಪರ್ಕಿತರು. ಸೋಂಕು ದೃಢಪಟ್ಟ ಇಬ್ಬರಲ್ಲಿ ಒಬ್ಬಾಕೆ ಎಂಟು ವರ್ಷದ ಬಾಲಕಿ. ತಾಲ್ಲೂಕಿನಲ್ಲಿ ಸೋಂಕು ದೃಢಪಟ್ಟ ಮತ್ತೊಬ್ಬರು ಯರಗಂಬಳ್ಳಿಯ 35 ವರ್ಷದ ಮಹಿಳೆ. ಅವರು ಬೆಂಗಳೂರಿಗೆ ಹೋಗಿ ಬಂದಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಕುರುಬಗೇರಿ ಬೀದಿಯ 27 ವರ್ಷ ಮಹಿಳೆ ಸೋಂಕಿಗೆ ತುತ್ತಾಗಿದ್ದಾರೆ. ಇವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ 70 ವರ್ಷದ ಮಹಿಳೆಯೂ ಸೋಂಕಿತರ ಪಟ್ಟಿಯಲ್ಲಿದ್ದಾರೆ. ಮನೆಯಲ್ಲೇ ಇರುವ ಇವರಿಗೆ ಸೋಂಕು ಹೇಗೆ ತಗುಲಿತು ಎಂಬುದು ಗೊತ್ತಾಗಿಲ್ಲ. ಕಾರು ಚಾಲಕನ ಪತ್ನಿಯಾಗಿರುವ ಗುಂಡ್ಲುಪೇಟೆ ತಾಲ್ಲೂಕಿನ ಸುಣ್ಣದಕೇರಿಯ 33 ವರ್ಷ ಮಹಿಳೆಯೂ ಕೋವಿಡ್‌ಗೆ ತುತ್ತಾಗಿದ್ದಾರೆ.

ಸರ್ಕಾರಿ ಆಸ್ಪತ್ರೆ ಸೀಲ್‌ಡೌನ್‌

ಯಳಂದೂರು:ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಾಲಯದ ತಂತ್ರಜ್ಞರೊಬ್ಬರಿಗೆ ಸೋಂಕು ದೃಢಪಡುತ್ತಿದ್ದಂತೆಯೇ ಆಸ್ಪತ್ರೆಯನ್ನು ಸೀಲ್‌‌ಡೌನ್‌ ಮಾಡಲಾಗಿದೆ.

40 ವರ್ಷದ ಇವರು ಆಸ್ಪತ್ರೆಗೆ ಬಂದವರ ಗಂಟಲು ದ್ರವ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಮೂರು ದಿನಗಳಿಂದ ರಜೆಯಲ್ಲಿ ಇದ್ದರು ಎನ್ನಲಾಗಿದೆ. ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್‌–19 ಇರುವುದು ಖಚಿತ ಪಟ್ಟಿದೆ.

ಆಸ್ಪತ್ರೆಯ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ, ಪ್ರವೇಶ ದ್ವಾರವನ್ನು ಸೀಲ್‌ಡೌನ್‌ ಮಾಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸಾಮಾನ್ಯ ತಪಾಸಣೆಗೆ ಬಂದಿದ್ದ ಗ್ರಾಮೀಣ ಜನರು ಆಸ್ಪತ್ರೆಯಿಂದ ತೆರಳಿದರು.

ಸಂಪರ್ಕಿತರ ಪತ್ತೆ: ತ್ವರಿತಕ್ಕೆ ಸೂಚನೆ

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾದ ಕೂಡಲೇ ಸೋಂಕಿತರ ಸಂಪರ್ಕಕ್ಕೆ ಬರಬಹುದಾದ ಎಲ್ಲ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ತ್ವರಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನೋಡಲ್ ಅಧಿಕಾರಿಗಳೊಂದಿಗೆ ಝೂಮ್‌ ಆ್ಯಪ್‌ ಮೂಲಕ ಸಭೆ ನಡೆಸಿದ ಅವರು, ‘ಸೋಂಕಿತರನ್ನು ಆಸ್ವತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ನಂತರವು ಸೋಂಕಿತರಿಂದ ಅವರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಮಾಹಿತಿಯನ್ನು ಆಸ್ಪತ್ರೆಯಲ್ಲಿಯೇ ಸಂಗ್ರಹಿಸಬೇಕು. ಸಂಚಾರದ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು. ಇದರಿಂದ ಸೋಂಕಿತರ ಸಂಪರ್ಕಿತರನ್ನು ಪರೀಕ್ಷೆ ನಡೆಸಿ ಇನ್ನಷ್ಟು ಜನರಿಗೆ ಸೋಂಕು ವ್ಯಾಪಿಸುವುದನ್ನು ಕೂಡಲೆ ತಡೆಯಬಹುದು’ ಎಂದರು.

‘ಜಿಲ್ಲೆಯಲ್ಲಿ ಗುರುತಿಸಲಾಗಿರುವ ಕಂಟೈನ್‌ಮೆಂಟ್ ವಲಯಗಳಲ್ಲಿ ಜನರ ಅಗತ್ಯ ಸೌಕರ್ಯಗಳಿಗೆ ವಿಶೇಷ ಗಮನ ನೀಡಬೇಕು. ಈ ಪ್ರದೇಶದಲ್ಲಿರುವ ಜನರಿಗೆ ತೊಂದರೆಗಳು ಕಂಡುಬರದ ಹಾಗೆ ನೋಡಿಕೊಳ್ಳಬೇಕು. ದಿನನಿತ್ಯದ ಅಗತ್ಯ ವಸ್ತುಗಳು ಸರಿಯಾದ ಸಮಯಕ್ಕೆ ತಲುಪಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಉಪವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ಇತರೆ ನೋಡೆಲ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT