ಶನಿವಾರ, ಜುಲೈ 24, 2021
21 °C
ದೃಢಪಟ್ಟ ಪ್ರಕರಣಗಳ ಸಂಖ್ಯೆ 145ಕ್ಕೆ, ಒಟ್ಟು ಗುಣಮುಖರಾದವರು 49 ಮಂದಿ

ಚಾಮರಾಜನಗರದಲ್ಲಿ 18 ಜನ ಗುಣಮುಖ, 13 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 13 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 145ಕ್ಕೆ ಏರಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ, ಶುಕ್ರವಾರ ಏಳು ವರ್ಷದ ಬಾಲಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಕಾರು ಚಾಲಕ ಸೇರಿದಂತೆ 18 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದುವರೆಗೆ 49 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 96 ಸಕ್ರಿಯ ಪ್ರಕರಣಗಳಿದ್ದು, ರೋಗಿಗಳಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಶುಕ್ರವಾರ ದೃಢಪಟ್ಟ 13 ಪ್ರಕರಣಗಳಲ್ಲಿ 12 ಮಂದಿಯ ಪರೀಕ್ಷೆಯನ್ನು ಜಿಲ್ಲೆಯ ಪ್ರಯೋಗಾಲಯದಲ್ಲೇ ನಡೆಸಲಾಗಿದ್ದು, ಇನ್ನೊಬ್ಬರ ಪರೀಕ್ಷೆ ಮೈಸೂರಿನಲ್ಲಿ ನಡೆದಿತ್ತು. 13 ಕೂಡ ಹೊಸ ಪ್ರಕರಣಗಳೇ. ಸೋಂಕಿತರ ಪಟ್ಟಿಯಲ್ಲಿ 25 ವರ್ಷದ ಗರ್ಭಿಣಿ ಹಾಗೂ 70 ವರ್ಷದ ವೃದ್ಧರೊಬ್ಬರು ಇದ್ದಾರೆ. 

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಆರು, ಚಾಮರಾಜನಗರ ತಾಲ್ಲೂಕಿನಲ್ಲಿ ನಾಲ್ಕು, ಕೊಳ್ಳೇಗಾಲದಲ್ಲಿ ಎರಡು ಹಾಗೂ ಯಳಂದೂರಿನಲ್ಲಿ ಒಂದು ಪ್ರಕರಣ ವರದಿಯಾಗಿದೆ. 

ಗುಂಡ್ಲುಪೇಟೆಯ ಕುನಗಹಳ್ಳಿಯ 24 ವರ್ಷದ ಯುವಕನಲ್ಲಿ ಸೋಂಕು ಕಂಡು ಬಂದಿದೆ. ಇವರು ಮಂಗಳೂರಿಗೆ ಹೋಗಿ ಬಂದಿದ್ದಾರೆ. ಕೋವಿಡ್‌ಗೆ ತುತ್ತಾದ 70 ವರ್ಷದ ವೃದ್ಧ ತೆರಕಣಾಂಬಿಯವರು. ಇವರಿಗೆ ಸೋಂಕು ಹೇಗೆ ತಗುಲಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಗುಂಟ್ಲುಪೇಟೆ ಪಟ್ಟಣದ ಸಂತೇಮಾಳದ ನಿವಾಸಿ, ‌ಕೆಮ್ಮು, ನೆಗಡಿ, ಜ್ವರದ ರೋಗ ಲಕ್ಷಣ ಹೊಂದಿದ್ದ (ಐಎಲ್‌ಐ) 50 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಐಎಲ್‌ಐ ರೋಗ ಲಕ್ಷಣ ಹೊಂದಿದ್ದ ಗುಂಡ್ಲುಪೇಟೆ ಪಟ್ಟಣದ 29 ವರ್ಷದ ಮಹಿಳೆ, ಶೆಟ್ಟರಹುಂಡಿಯ 42 ವರ್ಷದ ಮಹಿಳೆಯಲ್ಲೂ ಸೋಂಕು ಪತ್ತೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಮಂಗಲ ಗ್ರಾಮದ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದ ಮುಬಾರಕ್‌ ಮೊಹಲ್ಲದ 38 ವರ್ಷದ ಪುರುಷ ಕೋವಿಡ್‌–19 ತುತ್ತಾಗಿದ್ದು, ಮೂಲ ಇನ್ನೂ ತಿಳಿದುಬಂದಿಲ್ಲ. ಚೆನ್ನೀಪುರದಮೋಳೆಯ ಐಎಲ್‌ಐ ಲಕ್ಷಣ ಹೊಂದಿದ್ದ 42 ವರ್ಷದ ಪುರುಷ ಹಾಗೂ 31 ವರ್ಷದ ಮಹಿಳೆಯಲ್ಲೂ ಸೋಂಕು ದೃಢಪಟ್ಟಿದೆ. 

ಕೊಳ್ಳೇಗಾಲ ನಗರದ ಬೀರನ ಬೀದಿಯ 31 ವರ್ಷದ ಮಹಿಳೆ, ಗರಡಿ ರಸ್ತೆಯ 43 ವರ್ಷದ ಮಹಿಳೆ ಕೋವಿಡ್‌–19ಗೆ ತುತ್ತಾಗಿದ್ದು, ಇಬ್ಬರಿಗೂ ಸೋಂಕು ಹೇಗೆ ತಗುಲಿತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಬೆಂಗಳೂರಿನಿಂದ ಬಂದಿದ್ದ ಯಳಂದೂರು ತಾಲ್ಲೂಕಿನ 24 ವರ್ಷದ ಮಹಿಳೆ ಕೋವಿಡ್‌ಗೆ ತುತ್ತಾಗಿದ್ದಾರೆ. 

ಗುಣಮುಖರಾದವರಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ 14 ಮಂದಿ, ಚಾಮರಾಜನಗರ ತಾಲ್ಲೂಕಿನ ಮೂವರು ಹಾಗೂ ಬೆಂಗಳೂರಿನ ಗೊರಗುಂಟೆಪಾಳ್ಯದ ಒಬ್ಬರು ಇದ್ದಾರೆ. 

ಸೋಂಕು ಮುಕ್ತರಾಗಿ ಮನೆಗೆ ತೆರಳಿದವರಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬರಗಿಯ ಏಳು ವರ್ಷದ ಬಾಲಕ ಅತ್ಯಂತ ಕಿರಿಯವನಾಗಿದ್ದರೆ, ಚಾಮರಾಜನಗರ ತಾಲ್ಲೂಕಿನ ನಾಗಳ್ಳಿಯ 57 ವರ್ಷದ ಪುರುಷ ಹಿರಿಯ ವ್ಯಕ್ತಿ. 

ತಾಲೂಕಿನ 14 ಮಂದಿ, ಚಾಮರಾಜನಗರ ಪಟ್ಟಣ ಮತ್ತು ತಾಲ್ಲೂಕಿನ 3 ಮಂದಿ ಹಾಗೂ ಬೆಂಗಳೂರಿನ ಗೊರಗುಂಟೆಪಾಳ್ಯದ ಒಬ್ಬರು ಇದ್ದಾರೆ.

10 ಸಾವಿರ ದಾಟಿದ ಪರೀಕ್ಷೆ

ಈ ಮಧ್ಯೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಕೋವಿಡ್‌–19 ಪರೀಕ್ಷೆಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. 

ಇದುವರೆಗೆ ಜಿಲ್ಲೆಯಲ್ಲಿ 10,346 ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 10,199 ಮಂದಿಯ ವರದಿ ನೆಗೆಟಿವ್‌ ಬಂದಿದೆ. ಶುಕ್ರವಾರ 449 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. 

ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳ ಪೈಕಿ ಇನ್ನೂ 1,654 ಮಂದಿಯ ವರದಿ ಬರಬೇಕಿದೆ.

1,589 ಮಂದಿ ಮೇಲೆ ನಿಗಾ: ಜಿಲ್ಲೆಯಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 762 ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 827 ಮಂದಿ ಸೇರಿದಂತೆ 1589 ಮಂದಿಯನ್ನು ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು