ಭಾನುವಾರ, ನವೆಂಬರ್ 29, 2020
19 °C
ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಸಂಪಾದನೆ ಇಲ್ಲದೇ ಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳು

ಚಾಮರಾಜನಗರ ಜಿಲ್ಲೆಯ 1,817 ನೇಕಾರರಿಗೆ ‘ಸಮ್ಮಾನ’

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ತಡೆಗೆ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ 1,817 ಮಂದಿ ನೇಕಾರರಿಗೆ ‘ನೇಕಾರ ಸಮ್ಮಾನ್‌’ ಯೋಜನೆ ಅಡಿಯಲ್ಲಿ ಸಹಾಯ ಧನ ಲಭಿಸಿದೆ. 

ತಲಾ ₹2,000ದಂತೆ 1,817 ನೇಕಾರರ ಬ್ಯಾಂಕ್‌ ಖಾತೆಗಳಿಗೆ ಒಟ್ಟು ₹36.34 ಲಕ್ಷ ಜಮೆ ಆಗಿದೆ. ಉಳಿದವರಿಗೂ ಶೀಘ್ರವಾಗಿ ಬರಲಿದೆ ಎಂದು ಹೇಳುತ್ತಾರೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳು. 

ಲಾಕ್‌ಡೌನ್‌ನಿಂದ ಅರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದ ಕೈಮಗ್ಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೇಕಾರರು ಮತ್ತು ಕೈಮಗ್ಗ ಪೂರ್ವ ಚಟುವಟಿಕೆಗಳಲ್ಲಿ ನಿರತರಾದವರಿಗೆ ಒಮ್ಮೆಗೆ ₹2,000 ಪರಿಹಾರ ಧನ ನೀಡುವ, ‘ನೇಕಾರ ಸಮ್ಮಾನ್‌’ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಘೋಷಿಸಿದ್ದರು. ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು.

ಇಲಾಖೆಯು 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯಲ್ಲಿ ನೋಂದಣಿ ಮಾಡಿಕೊಂಡಿರುವ ಕೈಮಗ್ಗ ನೇಕಾರರಿಂದ ಜುಲೈ ತಿಂಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು. 

ಜಿಲ್ಲೆಯಲ್ಲಿ 2,272 ಮಂದಿ ನೇಕಾರರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪರಿಹಾರ ಧನಕ್ಕಾಗಿ 1,911 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1,817 ಮಂದಿಯ ಖಾತೆಗೆ ₹2,000 ಜಮೆ ಆಗಿದೆ. 

‘1,911 ಅರ್ಜಿಗಳಲ್ಲಿ ಆಧಾರ್‌, ಬ್ಯಾಂಕ್‌ ಖಾತೆ ಸಮಸ್ಯೆಗಳಿಂದ 11 ಅರ್ಜಿಗಳು ತಿರಸ್ಕೃತವಾಗಿತ್ತು, ಅರ್ಜಿದಾರರ ಪೈಕಿ ಐವರು ಮೃತಪಟ್ಟಿದ್ದರು. ಉಳಿದ ಅರ್ಜಿಗಳು ಅಂಗೀಕಾರವಾಗಿದ್ದು, ಶೀಘ್ರದಲ್ಲಿ ಆ ನೇಕಾರರ ಖಾತೆಗೂ ಪರಿಹಾರ ಧನ ಜಮೆ ಆಗಲಿದೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಎ.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ನೇಕಾರರಲ್ಲಿ 360ಕ್ಕೂ ಹೆಚ್ಚು ಮಂದಿ ಜಿಲ್ಲೆಯಲ್ಲಿ ಇಲ್ಲ. ತಮಿಳುನಾಡಿನ ಸತ್ಯಮಂಗಲ ಹಾಗೂ ಇತರ ಕಡೆಗಳಲ್ಲಿ ವಾಸವಿದ್ದಾರೆ. ಹಾಗಾಗಿ ಅವರು ಪರಿಹಾರಕ್ಕಾಗಿ ಅವರು ಅರ್ಜಿ ಸಲ್ಲಿಸಿಲ್ಲ’ ಎಂದು ಅವರು ಮಾಹಿತಿ ನೀಡಿದರು. 

ಸಂಕಷ್ಟ ಅನುಭವಿಸಿದ್ದ ನೇಕಾರರು

ಜಿಲ್ಲೆಯಲ್ಲಿ 468 ಕುಟುಂಬಗಳು ನೇಕಾರಿಕೆಯನ್ನು ನಂಬಿಕೊಂಡಿವೆ. ಕೊಳ್ಳೇಗಾಲ, ಹನೂರು ಭಾಗಗಳಲ್ಲಿ ಕೈಮಗ್ಗ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಬಹುತೇಕ ನೇಕಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ತಮಿಳುನಾಡನ್ನೇ ನಂಬಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ಎರಡು ತಿಂಗಳಿಗೂ ಹೆಚ್ಚು ಕಾಲ ನೇಕಾರರಿಗೆ ಸಂಪಾದನೆ ಇರಲಿಲ್ಲ. ಅಂತರರಾಜ್ಯ ಗಡಿಗಳು ಬಂದ್‌ ಆಗಿದ್ದರಿಂದ ಹಾಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ಇದ್ದುದರಿಂದ ತಯಾರಿಸಿದ್ದ ಸೀರೆಗಳು ಮಾರಾಟವಾಗಿರಲಿಲ್ಲ. ಇದರಿಂದ ತೊಂದರೆಗೆ ಸಿಲುಕಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು