ಬುಧವಾರ, ಆಗಸ್ಟ್ 4, 2021
20 °C
ದ್ವಿತೀಯ ಪಿಯು ಫಲಿತಾಂಶ: ಕೃಷಿಕರ ಪುತ್ರಿಯರು, ಉದ್ಯಮಿಯ ಪುತ್ರಿಯ ಸಾಧನೆ

ಕವಿತಾ, ಚಂದನಾ, ಶಾಲಿನಿ ಚಾಮರಾಜನಗರ ಜಿಲ್ಲೆಗೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಗುಂಡ್ಲುಪೇಟೆ/ಕೊಳ್ಳೇಗಾಲ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಾಮರಾಜನಗರದ ಕವಿತಾ ಶಂಕರ್ ಕೆ., ಗುಂಡ್ಲುಪೇಟೆಯ ಚಂದನಾ ಆರ್‌ ಹಾಗೂ ಕೊಳ್ಳೇಗಾಲದ ವಿ. ಶಾಲಿನಿ ಅವರು ಕ್ರಮವಾಗಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. 

ಚಾಮರಾಜನಗರದ ಕುಮಾರ್‌ ರವಿಶಂಕರ್‌ ಹಾಗೂ ನಾಗರತ್ನಮ್ಮ ದಂಪತಿ ಮಗಳು, ಜೆಎಸ್‌ಎಸ್‌ ಮಹಿಳಾ ಪಿಯು ಕಾಲೇಜಿನ ಕವಿತಾ ಶಂಕರ್‌‌ ಅವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 586 ಅಂಕ ಗಳಿಸಿ (ಶೇ 97.66) ಜಿಲ್ಲೆಗೆ ಮೊದಲಿಗರೆನಿಸಿಕೊಂಡಿದ್ದಾರೆ. 

ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ರಾಜು ಹಾಗೂ ಸುಧಾರಾಣಿ ದಂಪತಿ ಮಗಳು, ಗುಂಡ್ಲು‍ಪೇಟೆ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಆರ್‌.ಚಂದನಾ ಅವರು ವಾಣಿಜ್ಯ ವಿಭಾಗದಲ್ಲಿ 600ಕ್ಕೆ 584 ಅಂಕ ಗಳಿಸಿ (ಶೇ 97.33) ಜಿಲ್ಲೆಯಲ್ಲೇ ಮೊದಲ ಸ್ಥಾನ ಗಳಿಸಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದ ವೀರಭದ್ರಸ್ವಾಮಿ ಹಾಗೂ ಜ್ಯೋತಿ ದಂಪತಿಯ ಪುತ್ರಿ, ಕೊಳ್ಳೇಗಾಲದ ಎಸ್‌ವಿಕೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿ.ಶಾಲಿನಿ ಅವರು ಕಲಾ ವಿಭಾಗದಲ್ಲಿ 600ಕ್ಕೆ 573 ಅಂಕ ಪಡೆದು (ಶೇ 95.50) ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. 

ಚಂದನಾ ಮತ್ತು ಶಾಲಿನಿ ಅವರು ರೈತರ ಮಕ್ಕಳು, ಇಬ್ಬರೂ ಟ್ಯೂಷನ್‌ಗೆ ಹೋಗಿಲ್ಲ. ಶ್ರಮವಹಿಸಿ, ಓದಿ ಉತ್ತಮ ಅಂಕಗಳನ್ನು ಪಡೆದು ಕೀರ್ತಿಗಳಿಸಿದ್ದಾರೆ. ಕವಿತಾ ಅವರು ಟ್ಯೂಷನ್‌ಗೂ ಹೋಗಿದ್ದಾರೆ. 

‘ಇಷ್ಟು ಅಂಕಗಳು ಬರಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಹೆಚ್ಚು ಅಧ್ಯಯನ ನಡೆಸುತ್ತಿದ್ದೆ. ಶ್ರಮ ವಹಿಸಿದರೆ ಖಂಡಿತ ಉತ್ತಮ ಅಂಕಗಳು ಸಿಗಬಹುದು ಎಂಬ ವಿಶ್ವಾಸ ಇತ್ತು. ಪೋಷಕರು ಹಾಗೂ ಕಾಲೇಜಿನ ಬೋಧಕರು ಕೂಡ ಪ್ರೋತ್ಸಾಹ ನೀಡಿದ್ದಾರೆ’ ಎಂದು ಕವಿತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಾನು ಟ್ಯೂಷನ್‌ಗೆ ಹೋಗಿಲ್ಲ. ಚೆನ್ನಾಗಿ ಓದಿಕೊಂಡಿದ್ದೆ. ಹಾಗಾಗಿ, ಹೆಚ್ಚಿನ ಅಂಕ ಬರುವ ನಿರೀಕ್ಷೆ ಇತ್ತು. ಪ್ರಾಂಶುಪಾಲರು ಸೇರಿದಂತೆ ಕಾಲೇಜಿನಲ್ಲಿ ಎಲ್ಲರೂ ಸಹಕಾರ ನೀಡಿದರು’ ಎಂದು ಚಂದನಾ ಪ್ರತಿಕ್ರಿಯಿಸಿದರು. 

ಶಾಲಿನಿ ಅವರ ಮನೆಯಲ್ಲಿ ಮೊಬೈಲ್‌ ಫೋನ್‌, ದೂರವಾಣಿ ಇಲ್ಲದೇ ಇದ್ದುದರಿಂದ ನೇರವಾಗಿ ಸಂಪರ್ಕಕ್ಕೆ ಸಿಗಲಿಲ್ಲ. ಆದರೆ, ಶಾಲೆಯ ಪ್ರಾಂಶುಪಾಲರು ಆಕೆಯೊಂದಿಗೆ ಮಾತನಾಡಿದ್ದಾರೆ. 

‘ತಂದೆ ತಾಯಿಯ ಪ್ರೋತ್ಸಾಹ, ಕಾಲೇಜಿನಲ್ಲಿ ಉಪನ್ಯಾಸಕರ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಪ್ರತ್ಯೇಕ ಟ್ಯೂಷನ್‌ ಪಡೆದಿಲ್ಲ. ಅಂದಂದಿನ ಪಾಠವನ್ನು ಅದೇ ದಿನ ಅಭ್ಯಾಸ ಮಾಡುತ್ತಿದ್ದೆ’ ಎಂದು ಶಾಲಿನಿ ಹೇಳಿದ್ದಾರೆ. 

ತಮ್ಮ ಮಕ್ಕಳ ಸಾಧನೆಗೆ ಪೋಷಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. 

–––

ಪರಿಶ್ರಮಕ್ಕೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಮುಂದೆ ಏನು ಮಾಡಬೇಕು ಎಂದು ಯೋಚಿಸಿಲ್ಲ. ಸರ್ಕಾರಿ ನೌಕರಿ ಪಡೆಯುವ ಆಸೆ ಇದೆ
ಕವಿತಾ ಶಂಕರ್‌. ಕೆ

–––

ನಾನು ಟ್ಯೂಷನ್‌ ಪಡೆದಿಲ್ಲ. ಆದರೆ, ಚೆನ್ನಾಗಿ ಓದುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮ, ಶಾಲೆಯಲ್ಲಿ ಉಪನ್ಯಾಸಕರು ಪ್ರೋತ್ಸಾಹ ನೀಡಿದ್ದಾರೆ
ಚಂದನಾ ಆರ್‌.

––

ನನ್ನ ಈ ಸಾಧನೆಗೆ ತಂದೆ, ತಾಯಿಯೇ ಸ್ಫೂರ್ತಿ, ಉನ್ನತ ಶಿಕ್ಷಣ ಪಡೆದು ಐಎಎಸ್‌ ಮಾಡುವ ಕನಸು ಇದೆ
ಶಾಲಿನಿ ವಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.