ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

33ರ ಅಂಧ ಮಹಿಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರ್‌

9ನೇ ತರಗತಿಯಲ್ಲಿ ದೃಷ್ಟಿ ಕಳೆದುಕೊಂಡ ಗೌರಮ್ಮ, ಎನ್‌ಜಿಒ ಎನ್‌ಎಬಿ ನೆರವು
Last Updated 1 ಜುಲೈ 2020, 16:25 IST
ಅಕ್ಷರ ಗಾತ್ರ

ಚಾಮರಾಜನಗರ: ಅರ್ಧದಲ್ಲೇ ಬಿಟ್ಟದ್ದ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಬೇಕು ಎಂದು ಪಣತೊಟ್ಟಿರುವ ಈ ಮಹಿಳೆಯ ಕನಸಿಗೆ ದೃಷ್ಟಿದೋಷ ಅಡ್ಡಿಯಾಗಿಲ್ಲ.

ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಲೇಬೇಕು ಎಂಬ ಉದ್ದೇಶದಿಂದ ಸಹಾಯಕರ ಒಬ್ಬರ ನೆರವಿನಿಂದ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯುತ್ತಿದ್ದಾರೆ ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿಯ ನಿವಾಸಿ 33 ವರ್ಷದ ಗೌರಮ್ಮ.

ಗೌರಮ್ಮ ಅವರ ತಂದೆ ತಾಯಿಗೆ ನಾಲ್ವರು ಹೆಣ್ಣುಮಕ್ಕಳು. ಕೊನೆಯವರು ಇವರು.ಒಂಬತ್ತನೇ ತರಗತಿವರೆಗೆ ಗೌರಮ್ಮ ಎಲ್ಲ ಮಕ್ಕಳಂತೆಯೇ ಇದ್ದರು. ಆದರೆ ಆ ವರ್ಷ ಕಣ್ಣಿನ ಸಮಸ್ಯೆ ಕಾಣಿಸಿಕೊಂಡು ದೃಷ್ಟಿ ಕಳೆದು ಹೋಯಿತು. ಎಸ್ಸೆಸ್ಸೆಲ್ಸಿ ಓದುವುದಕ್ಕೆ ಸಾಧ್ಯವಾಗಲಿಲ್ಲ. ಮನೆಯಲ್ಲೇ ಇರಬೇಕಾಯಿತು.

ಗುಂಡ್ಲುಪೇಟೆಯಲ್ಲಿರುವ ಅಂಧರಿಗಾಗಿ ರಾಷ್ಟ್ರೀಯ ಒಕ್ಕೂಟ (ಎನ್ಎಬಿ) ಎಂಬ ಸ್ವಯಂ ಸೇವಾ ಸಂಸ್ಥೆಯ ಕಣ್ಣಿಗೆ ಬೀಳುವ ಗೌರಮ್ಮ ಅವರ ಜೀವನ ನಂತರ ಬದಲಾಗಿ ಹೋಯಿತು.

ಗೌರಮ್ಮ ಅವರ ಚುರುಕುತನವನ್ನು ಕಂಡ ಸಂಸ್ಥೆಯ ಯೋಜನಾ ಸಂಯೋಜಕ ಅಧಿಕಾರಿ ಕೆ. ರಮೇಶ್‌ ಅವರು, ಬ್ರೈಲ್‌ ಲಿಪಿ ತರಬೇತಿ ಪಡೆಯುವ ಮಾಹಿತಿ ಕೊಟ್ಟರು. 2010ರಲ್ಲಿ ಅವರು ಬೆಂಗಳೂರಿಗೆ ತೆರಳಿ ಎರಡು ತಿಂಗಳ ಚಲನವಲನ (ಮೊಬಿಲಿಟಿ) ತರಬೇತಿ, ನಂತರ ಆರು ತಿಂಗಳು ಪುನಶ್ಚೇತನ ತರಬೇತಿ ಪಡೆದರು. ಇದೇ ಅವಧಿಯಲ್ಲಿ ಬ್ರೈಲ್‌ ಲಿಪಿಯನ್ನೂ ಕಲಿತರು.

ಕುಟುಂಬಕ್ಕೆ ಆಧಾರ:‘ನಾನು ಕೂಡ ಜೀವನದಲ್ಲಿ ಏನಾದರೂ ಸಾಧಿಸಬಲ್ಲೆ ಎಂಬ ಧೈರ್ಯ ತರಬೇತಿ ಪಡೆದ ನಂತರ ಬಂತು. ಎಂಟು ತಿಂಗಳು ತರಬೇತಿ ಪಡೆದೆ. ಆ ಬಳಿಕ ಗಾರ್ಮೆಂಟ್ಸ್‌ನಲ್ಲಿ ಕೆಲಸ ಸಿಕ್ಕಿತು. ಒಂಬತ್ತು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಗೌರಮ್ಮ ಅವರು ತಾವು ಸಾಗಿ ಬಂದ ಹಾದಿಯನ್ನು ‘ಪ್ರಜಾವಾಣಿ’ ಮುಂದೆ ಬಿಚ್ಚಿಟ್ಟರು.

‘ಕಣ್ಣಿಲ್ಲದಿದ್ದರೂ ಶಿಕ್ಷಣ ಪಡೆದ ಹಲವರನ್ನು ನೋಡಿದ್ದೇನೆ. ಕೆಲಸದಲ್ಲಿ ಇರುವವರನ್ನೂ ಬೆಂಗಳೂರಿನಲ್ಲಿ ಕಂಡಿದ್ದೇನೆ. ನಾನೂ ಯಾಕೆ ಓದಬಾರದು? ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾಕೆ ಬರೆಯಬಾರದು ಎಂದು ಯೋಚನೆ ಮಾಡಿದೆ. ರಮೇಶ್‌ ಸರ್‌ ಅವರನ್ನು ಸಂಪರ್ಕಿಸಿ ಅಭಿಪ್ರಾಯ ಕೇಳಿದೆ. ‘ಧಾರಾಳವಾಗಿ ಬರೆಯಬಹುದು, ಇದುವರೆಗೆ ಯಾಕೆ ಪರೀಕ್ಷೆ ಬರೆದಿಲ್ಲ’ ಎಂದು ಅವರು ಕೇಳಿದರು. ಈ ವರ್ಷ ಪರೀಕ್ಷೆಗೆ ಕಟ್ಟಿದೆ’ ಎಂದು ಅವರು ವಿವರಿಸಿದರು.

ಬೆಂಗಳೂರಿನ ಯಶವಂತಪುರದ ಗೌತಮನಗರದಲ್ಲಿರುವ ಗಾರ್ಮೆಂಟ್ಸ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಗೌರಮ್ಮ, ಈ ವರ್ಷ ಅಧಿಕಾರಿಗಳಿಗೆ ಮನವಿ ಮಾಡಿ ಪರೀಕ್ಷೆ ಬರೆಯುವುದಕ್ಕಾಗಿ ಹೆಚ್ಚಿನ ರಜೆ ಕೇಳಿ ಬಂದಿದ್ದಾರೆ.

ಗೌರಮ್ಮ ಅವರ ಮೂವರು ಅಕ್ಕಂದಿರಿಗೆ ಮದುವೆಯಾಗಿದೆ. ಇವರು ತಂದೆ ತಾಯಿಯೊಂದಿಗೆ ಇದ್ದಾರೆ. ಇವರ ಸಂಪಾದನೆಯಲ್ಲೇ ಕುಟುಂಬದ ನಿರ್ವಹಣೆ ನಡೆಯುತ್ತಿದೆ.

‘ದೃಷ್ಟಿ ಇಲ್ಲ ಎಂಬ ಬೇಜಾರು ನನಗೆ ಇಲ್ಲ. ಈ ಕಾರಣದಿಂದಾಗಿಯೇ ನಾನು ತಂದೆ ತಾಯಿಯೊಂದಿಗೆ ಇದ್ದೇನೆ. ದುಡಿದು ಕುಟುಂಬಕ್ಕೆ ಆಧಾರವಾಗಿದ್ದೇನೆ’ ಎಂದು ಗೌರಮ್ಮ ಹೆಮ್ಮೆ ಪಟ್ಟರು.

‘ಧೈರ್ಯ ಬಂದಿದೆ, ಶಿಕ್ಷಣ ಮುಂದುವರಿಸುವೆ’

‘ಶಿಕ್ಷಣ ಪಡೆಯಲು ಎಲ್ಲರಿಗೂ ಅವಕಾಶ ಇದೆ. ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಬೇಕು ಎಂಬ ಆಸೆ ಇತ್ತು. ಆದರೆ, ಹಿಂದೆ ಅದು ನೆರವೇರಿರಲಿಲ್ಲ. ಈಗ ಪ್ರಯತ್ನ ಪಡುತ್ತಿದ್ದೇನೆ.ನಾಲ್ಕು ಪರೀಕ್ಷೆಗಳನ್ನು ಬರೆದಿದ್ದೇನೆ. ಈಗ ಇನ್ನಷ್ಟು ಪರೀಕ್ಷೆ ಎದುರಿಸುವ ಧೈರ್ಯ ನನಗೆ ಬಂದಿದೆ. ತೇರ್ಗಡೆಯಾಗುವ ವಿಶ್ವಾಸ ಇದೆ. ಮುಂದೆಯೂ ಶಿಕ್ಷಣ ಮುಂದುವರಿಸಬೇಕು ಎಂಬ ಆಸೆ ಇದೆ. ಉದ್ಯೋಗದೊಂದಿಗೆ ಅದನ್ನೂ ಮುಂದುವರಿಸುತ್ತೇನೆ’ ಎಂದು ಗೌರಮ್ಮ ಹೇಳಿದರು.

‘ಜೀವನವೇ ಬದಲಾಗಿದೆ’

ಗೌರಮ್ಮ ಅವರ ಸಾಧನೆ‌ಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎನ್‌ಎಬಿಯ ಯೋಜನಾ ಸಂಯೋಜಕ ರಮೇಶ್‌ ಅವರು, ‘ನಮ್ಮ ಸಂಸ್ಥೆ 18 ವರ್ಷಗಳಿಂದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದೆ. ಗೌರಮ್ಮ ಅವರು ಮೈಕ್ರೊ ಕಾರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. 10ನೇ ತರಗತಿ ಬರುವ ಹೊತ್ತಿಗೆ ದೃಷ್ಟಿ ಪೂರ್ಣವಾಗಿ ಕಳೆದುಕೊಂಡಿದ್ದರು. ಏಳು ವರ್ಷಗಳಿಂದ ಮನೆಯಲ್ಲೇ ಇದ್ದರು. ನಾವು ಮನೆ ಮನೆ ಸಮೀಕ್ಷೆ ಮಾಡುವಾಗ ಇವರು ಸಿಕ್ಕಿದರು. ಅವರೊಂದಿಗೆ ಮಾತನಾಡಿ, ಆವರ ಆಸಕ್ತಿಯ ವಿಚಾರಗಳನ್ನು ತಿಳಿದ ನಂತರ ಬೆಂಗಳೂರಿಗೆ ತರಬೇತಿಗೆ ಕಳುಹಿಸಲು ನಿರ್ಧರಿಸಿದೆವು. ಕೆಲಸವನ್ನೂ ಕೊಡಿಸಿದ್ದೇವೆ. ಈಗ ಆಕೆಯ ಜೀವನವೇ ಬದಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT