ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಪಿಯು ಪರೀಕ್ಷೆಗೆ ಹಾಜರಾದ 6,272 ಮಕ್ಕಳು

ಚಾಮರಾಜನಗರ: ಪಿಯುಸಿ ಇಂಗ್ಲಿಷ್‌ ಪರೀಕ್ಷೆ, ಸರಾಗ, ಮುನ್ನೆಚ್ಚರಿಕೆ ಕ್ರಮಗಳ ಪಾಲನೆ
Last Updated 18 ಜೂನ್ 2020, 15:22 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಕಾರಣಕ್ಕೆ ಮುಂದೂಡಲಾಗಿದ್ದ 2019–20ನೇ ಸಾಲಿನ ದ್ವಿತೀಯ ಪಿಯುಸಿ ಇಂಗ್ಲಿಷ್‌ ವಿಷಯದ ಪರೀಕ್ಷೆ ಗುರುವಾರ ಜಿಲ್ಲೆಯಾದ್ಯಂತ ಯಾವುದೇ ಅಡೆಗಳಿಲ್ಲದೆ ನಡೆಯಿತು.

ಜಿಲ್ಲೆಯಲ್ಲಿ 16 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 6,540 (ಮೊದಲು 6,535 ಎಂದು ಹೇಳಲಾಗಿತ್ತು, ಇಲಾಖೆ ಕಳುಹಿಸಿದ್ದ ಪಟ್ಟಿಯಲ್ಲಿ ಮತ್ತೆ ಐದು ಹೆಚ್ಚು ವಿದ್ಯಾರ್ಥಿಗಳಿದ್ದರು) ವಿದ್ಯಾರ್ಥಿಗಳ ಪೈಕಿ, 6,272 ಮಂದಿ ಪರೀಕ್ಷೆ ಬರೆದಿದ್ದಾರೆ. 268 ಮಂದಿ ಗೈರಾಗಿದ್ದಾರೆ. ಇವರಲ್ಲಿ ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಲಾಕ್‌ಡೌನ್ ಅವಧಿಯಲ್ಲಿ ಹೊರ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಏಳು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಹಿಂದಿನ ಆರು ಪರೀಕ್ಷೆಗಳನ್ನು ಹೊರ ಜಿಲ್ಲೆಗಳಲ್ಲಿ ಬರೆದು, ಕೊನೆಯ ಪರೀಕ್ಷಾ ಕೇಂದ್ರವನ್ನು ಜಿಲ್ಲೆಗೆ ಬದಲಾಯಿಸಿಕೊಂಡಿದ್ದ 240 ವಿದ್ಯಾರ್ಥಿಗಳ ಪೈಕಿ ನಾಲ್ವರು ಗೈರಾಗಿದ್ದಾರೆ.

ಬಸ್‌ ಸಿಗದೆ ಅಥವಾ ಸಂಚಾರಕ್ಕೆ ವಾಹನಗಳು ಇಲ್ಲ ಎಂಬ ಕಾರಣಕ್ಕೆ ಯಾರೂ ಗೈರಾಗಿಲ್ಲ ಎಂದು ಕೃಷ್ಣಮೂರ್ತಿ ಅವರು ಸ್ಪಷ್ಟಪಡಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮ: ಎಲ್ಲ 16 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ವಿದ್ಯಾರ್ಥಿಗಳು ಎರಡು ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಎಲ್ಲ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಯಿತು. ಉಚಿತವಾಗಿ ಮಾಸ್ಕ್‌ ಅನ್ನೂ ವಿತರಿಸಲಾಯಿತು. ಸ್ಯಾನಿಟೈಸರ್‌ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಂತರ ಕಾಪಾಡಿಕೊಳ್ಳುವ ಯತ್ನವೂ ನಡೆಯಿತು. ಆದರೆ, ಕೆಲವು ಸಂದರ್ಭದಲ್ಲಿ ವಿದ್ಯಾರ್ಥಿಗಳು ಇದನ್ನು ಪೂರ್ಣವಾಗಿ ಪಾಲಿಸಲಿಲ್ಲ.

‘ಶೀತ, ನೆಗಡಿ, ಕೆಮ್ಮು, ಜ್ವರದ ರೋಗ ಲಕ್ಷಣ ಇರುವ ಒಬ್ಬನೇ ಒಬ್ಬ ವಿದ್ಯಾರ್ಥಿ ಇರಲಿಲ್ಲ.ಪರೀಕ್ಷೆ ಸುಲಲಿತವಾಗಿ ನಡೆದಿದೆ. ಯಾವುದೇ ಗೊಂದಲ ಉಂಟಾಗಿಲ್ಲ’ ಎಂದು ಡಿ.ಎಸ್‌.ಕೃಷ್ಣಮೂರ್ತಿ ಅವರು ತಿಳಿಸಿದರು.

ಧೈರ್ಯ ತುಂಬಿದ ಜಿಲ್ಲಾಧಿಕಾರಿ

ಗುರುವಾರ ಬೆಳಿಗ್ಗೆ ಪರೀಕ್ಷೆ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಅವರೊಂದಿಗೆ ಚಾಮರಾಜನಗರ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಬಾಲಕರ ಕಾಲೇಜು ಹಾಗೂ ಜೆಎಸ್‌ಎಸ್‌ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು.

ಕೋವಿಡ್‌–19 ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ, ಸ್ಯಾನಿಟೈಸರ್‌ ಬಳಸುವಂತೆ ಹಾಗೂ ಸುರಕ್ಷಿತ ಅಂತರ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಕೋವಿಡ್‌–19 ಹಾವಳಿ ನಡೆಯುತ್ತಿರುವ ಪರೀಕ್ಷೆ ಎಂಬ ಭಯ ಬೇಡ, ಎಂದಿನಂತೆ ಬರೆಯಿರಿ ಎಂದು ಕಿವಿ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT