ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

73ನೇ ಸ್ವಾತಂತ್ರ್ಯ ದಿನ; ದೇಶಭಕ್ತಿಯ ಸಿಂಚನ

ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದ ಆಚರಣೆ, ಶಾಲಾ ಕಾಲೇಜುಗಳಲ್ಲಿ ದೇಶಾಭಿಮಾನದ ಲೋಕದ ಅನಾವರಣ
Last Updated 15 ಆಗಸ್ಟ್ 2019, 14:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ 73ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತುವಿವಿಧ ಸಂಘಟನೆಗಳ ಕಚೇರಿಗಳಲ್ಲಿ ತ್ರಿವರ್ಣಧ್ವಜವನ್ನು ಹಾರಿಸಲಾಯಿತು.

ಜಿಲ್ಲಾ ಕೇಂದ್ರದ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಪ್ರಧಾನ ಕಾರ್ಯಕ್ರಮ ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ, ದೇಶಾಭಿಮಾನ ಹಾಗೂ ದೇಶಭಕ್ತಿಯ ಅನಾವರಣಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸೈನಿಕರ ಧೈರ್ಯ, ಕೆಚ್ಚುಗಳನ್ನು ಪ್ರದರ್ಶಿಸುವ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಕೊಂಡಾಡುವ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದ ಮಕ್ಕಳು, ಸ್ವಾತಂತ್ರ್ಯದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಜಿಲ್ಲಾಧಿಕಾರಿ ಧ್ವಜಾರೋಹಣ: ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ಜೀಪಿನಲ್ಲಿ ಕ್ರೀಡಾಂಗಣದಲ್ಲಿ ಸಾಗಿ ಗೌರವ ವಂದನೆ ಸ್ವೀಕರಿಸಿದರು.

ಪೊಲೀಸ್‌ ಸಿಬ್ಬಂದಿ, ಅರಣ್ಯ ಇಲಾಖೆ, ಗೃಹರಕ್ಷಕ ದಳದ ಸಿಬ್ಬಂದಿ, ಪೊಲೀಸ್‌ ಬ್ಯಾಂಡ್‌ ತಂಡ, ಚಾಮರಾಜನಗರದ ವಿವಿಧ ಶಾಲೆಗಳ ಎನ್‌ಸಿಸಿ, ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ತಂಡಗಳು ಹಾಗೂ ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು.

ದೇಶಾಭಿಮಾನದ ಲೋಕ ಅನಾವರಣ: ವೇದಿಕೆ ಕಾರ್ಯಕ್ರಮದ ನಂತರ ನಗರದ ಐದು ಶಾಲೆಗಳ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶಪ್ರೇಮದ ಹೊಸ ಲೋಕವನ್ನೇ ಅನಾವರಣಗೊಳಿಸಿದವು. ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ರೂಪಕಗಳು ಸ್ವಾತಂತ್ರ್ಯದ ಸಂಭ್ರಮವನ್ನು ಇಮ್ಮಡಿಗೊಳಿಸುವುದರ ಜೊತೆಗೆ, ಕ್ರೀಡಾಂಗಣದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ದೇಶಾಭಿಮಾನದ ಸಾಗರದಲ್ಲಿ ತೇಲುವಂತೆ ಮಾಡಿದವು.

ಸೇಂಟ್‌ ಜೋಸೆಫ್‌ ಶಾಲೆಯ 300 ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಸ್ವತಂತ್ರ ಭಾರತವಿದು’, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ 250 ವಿದ್ಯಾರ್ಥಿಗಳಿಂದ ಮೂಡಿ ಬಂದ ‘ಮಾ ತುಝೇ ಸಲಾಂ’, ಕಾರ್ಗಿಲ್‌ ವಿಜಯೋತ್ಸವವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೇಂಟ್‌ ಪೌಲ್‌ ಪ್ರೌಢಶಾಲೆಯ 300 ಮಕ್ಕಳು ಪ್ರದರ್ಶಿಸಿದ ‘ನಮೋ ನಮೋ ಭಾರತ ಮಾತೆ ನೃತ್ಯ ರೂಪಕ’, ಸೇವಾ‌ ಭಾರತಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ 250 ಮಕ್ಕಳು ಜೊತೆಯಾಗಿ ಹೆಜ್ಜೆಹಾಕಿದ ‘ಹಬ್ಬ ಹಬ್ಬ’ ಮತ್ತು ಈ ವರ್ಷಾರಂಭದಲ್ಲಿ ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಭಯೋತ್ಪಾದಕರ ದಾಳಿ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಆಧಾರವಾಗಿಟ್ಟುಕೊಂಡು ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆಯ 250 ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಜೈ ಜವಾನ್‌, ಜೈ ಕಿಸಾನ್‌’ ನೃತ್ಯ ರೂಪಕಗಳು ಮನಸೂರೆಗೊಂಡವು.

ದೇಶಭಕ್ತಿಯ ಗೀತೆಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದರೆ, ಜನರ ಚಪ್ಪಾಳೆಗಳು ಕ್ರೀಡಾಂಗಣದ ಸುತ್ತಲೂ ಅನುರಣಿಸಿದವು.

ಬಹುಮಾನ: ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದರೆ, ಸೇಂಟ್‌ ಜೋಸೆಫ್‌ ಶಾಲೆಯ ಮಕ್ಕಳು ಎರಡನೇ ಹಾಗೂ ಸೇಂಟ್‌ ಪೌಲ್‌ ಪ್ರೌಢಶಾಲೆಯ ಮಕ್ಕಳು ಮೂರನೇ ಸ್ಥಾನ ಗಳಿಸಿದರು.

ಸೇಂಟ್‌ ಪೌಲ್‌ ಪ್ರೌಢ ಶಾಲೆಯ ಮಕ್ಕಳು ಪ್ರದರ್ಶನ ನೀಡುತ್ತಿದ್ದಾಗ ಆ ಶಾಲೆಯ ಕಲಾ ಶಿಕ್ಷಕ ರಾಜೇಂದ್ರ ಹಾಗೂ ತಂಡ ರಚಿಸಿದ ಕಾರ್ಗಿಲ್‌ ವಿಜಯೋತ್ಸವದ ಕಲಾಕೃತಿ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಸನ್ಮಾನ: ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಸವಯ್ಯ ಕಾಗಲವಾಡಿ ಮತ್ತು ಕರಿನಂಜನಪುರದ ತೋಟದಪ್ಪ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ತಾಲ್ಲೂಕು ಪ‍ಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ, ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಚಾಮರಾಜನಗರ ವೃತ್ತದ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್‌ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

‘ಆಂತರಿಕ, ದುಷ್ಟ ಶಕ್ತಿ ಮೆಟ್ಟಿ ನಿಲ್ಲೋಣ’

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ‘ಹಲವು ವರ್ಷಗಳ ಕಾಲ ಪ್ರಾಣದ ಹಂಗು ತೊರೆದು ತಮ್ಮ ಸರ್ವಸ್ವವನ್ನೂ ನಾಡಿಗೆ ಸಮರ್ಪಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರರ ದಿವ್ಯ ಚೇತನಗಳ ಶ್ರಮ ವ್ಯರ್ಥವಾಗದ ಹಾಗೆ ನಾವು ಇಂದು ಒಗ್ಗಟ್ಟಿನಿಂದ ಬದುಕಬೇಕಾಗಿದೆ’ ಎಂದು ಹೇಳಿದರು.

‘ಆಂತರಿಕ ಹಾಗೂ ಬಾಗ್ಯ ದುಷ್ಟ ಶಕ್ತಿಗಳು ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿವೆ. ಅವುಗಳನ್ನು ಮೆಟ್ಟಿ ನಿಲ್ಲಲು ಹೋರಾಟ ರೂಪಿಸಬೇಕಾಗಿದೆ. ದೇಶದ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತವಾದಾಗ ಮಾತ್ರ ಇಂತಹ ಶಕ್ತಿಗಳನ್ನು ಹೊಡೆದೋಡಿಸಬಹುದು’ ಎಂದು ಅವರು ಪ್ರತಿಪಾದಿಸಿದರು.

‘ಎಲ್ಲ ಕ್ಷೇತ್ರಗಳಲ್ಲೂ ಇರುವ ವೈವಿಧ್ಯಮಯ ಅವಕಾಶಗಳನ್ನು ಬಳಸಿಕೊಳ್ಳೋಣ. ಜೊತೆ ಜೊತೆಗೆ ರಾಷ್ಟ್ರೀಯ ಏಕತೆಯನ್ನೂ ‘ಭಾರತೀಯ ಭಾವೈಕ್ಯತೆಯನ್ನೂ ಸಾಧಿಸಲು ವಿಶೇಷ ಗಮನ ನೀಡುವುದರ ಜೊತೆಗೆ ಪ್ರಯತ್ನವನ್ನೂ ನಡೆಸೋಣ’ ಎಂದು ಅವರು ಕರೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಹೋರಾಟಗಾರರನ್ನು ಅವರು ಇದೇ ಸಂದರ್ಭದಲ್ಲಿ ನೆನೆದರು. ಚಾಮರಾಜನಗರವು ಪ್ರತ್ಯೇಕ ಜಿಲ್ಲೆಯಾಗಿ 22 ವರ್ಷಗಳು ಆಗಿರುವುದನ್ನೂ ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು. 1997ರ ಆಗಸ್ಟ್‌ 15ರಂದು ಚಾಮರಾಜನಗರವು ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿತ್ತು.

ಎಸ್ಸೆಸ್ಸೆಲ್ಸಿ ಸಾಧಕರಿಗೆ ಲ್ಯಾಪ್‌ಟ್ಯಾಪ್‌ ವಿತರಣೆ

ಕಳೆದ ವರ್ಷದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆಗಳ ಆರು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಜಿಲ್ಲಾ ಮಟ್ಟದಲ್ಲಿ ಹೆಚ್ಚು ಅಂಕ ಪಡೆದ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಂ ಎಂ (592 ಅಂಕ), ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಸರ್ಕಾರಿ ಪ್ರೌಢಶಾಲೆಯ ಮನುತಾ ರಾಣಿ ಪಿ. (589 ಅಂಕ) ಮತ್ತು ಹನೂರು ತಾಲ್ಲೂಕಿನ ರಾಮಪುರ ಸರ್ಕಾರಿ ಪ್ರೌಢಶಾಲೆಯ ಚೇತನ್‌ ಅರಸ್‌ ಎಸ್‌ (581 ಅಂಕ) ಅವರಿಗೆ ಗಣ್ಯರು ಲ್ಯಾಪ್‌ಟಾಪ್‌ ವಿತರಿಸಿದರು.

ಅದೇ ರೀತಿ ಚಾಮರಾಜನಗರ ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ಬಿಸಿಲವಾಡಿ ಸರ್ಕಾರಿ ಪ್ರೌಢ ಶಾಲೆಯ ಸಿದ್ದಮಲ್ಲು (577 ಅಂಕ), ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಸೌಮ್ಯ ಪ್ರಿಯಾ ಎಸ್‌ (574 ಅಂಕ) ಮತ್ತುಬದನಗುಪ್ಪೆಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಪವಿತ್ರ ಎಸ್‌ (574 ಅಂಕ) ಅವರಿಗೂ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT