ಸೋಮವಾರ, ಆಗಸ್ಟ್ 8, 2022
21 °C
ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಸಚಿವ ಬಿ.ಸಿ.ಪಾಟೀಲ್‌, ರೈತರೊಂದಿಗೆ ಸಂವಾದ, ಸಮಸ್ಯೆಗಳ ಆಲಿಕೆ

ಗುಂಡ್ಲುಪೇಟೆ ಬರಗಿಯಲ್ಲಿ ಮೈದಳೆದ ಕೃಷಿ ಲೋಕ

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ತಾಲ್ಲೂಕಿನ ಬರಗಿಯಲ್ಲಿ ಹಮ್ಮಿಕೊಂಡಿದ್ದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಕೃಷಿ ಲೋಕವೇ ಮೈದಳೆಯಿತು. ಕೃಷಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಇಡೀ ದಿನ ಸಂವಾದ, ಕೃಷಿ ಚಟುವಟಿಕೆಗಳು ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಭಾಗಿಯಾಗಿ ರೈತರೊಂದಿಗೆ ಆತ್ಮೀಯವಾಗಿ ಬೆರೆತರು. ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಸ್ಥಳೀಯ ಸದಸ್ಯ ಬರಗಿ ಚೆನ್ನಪ್ಪ ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೇರಿದಂತೆ ಎಲ್ಲ ಅಧಿಕಾರಿಗಳು ಸಚಿವರಿಗೆ ಜೊತೆಯಾದರು. 

ಬರಗಿ ಹಾಗೂ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ತಾಲ್ಲೂಕಿನ ನೂರಾರು ರೈತರು ಕೂಡ ಭಾಗವಹಿಸಿ, ಇಡೀ ಕಾರ್ಯಕ್ರಮಕ್ಕೆ ಮೆರುಗು ತಂದರು. 

ಮಜ್ಜಿಗೆ ಕಡೆದರು, ಉಳುಮೆ ಮಾಡಿದರು: ಮುಂಟೀಪುರ ಗ್ರಾಮದ ರೈತ ಮಾಡ್ರಹಳ್ಳಿ ರಾಜಶೇಖರ್ ಅವರ ಜಮೀನು ಸಮಗ್ರ ಕೃಷಿ ಚಟುವಟಿಕೆಗಳಿಗೆ ವೇದಿಕೆಯಾಯಿತು. 

ಮಾಡ್ರಹಳ್ಳಿ ಬಳಿ ಸಚಿವರನ್ನು ಸಾಂಪ್ರದಾಯಿಕವಾಗಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ಮಹದೇಶ್ವರ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಆ ಬಳಿಕ ರಾಜಶೇಖರ್‌ ಅವರ ಜಮೀನಿನಲ್ಲಿ ಬಿ.ಸಿ.ಪಾಟೀಲ ಅವರು ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು.  

ಆರಂಭದಲ್ಲಿ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿದರು. ನಂತರ ಮಜ್ಜಿಗೆ ಕಡೆದು ಕಿರುನಗೆ ಬೀರಿದರು. ಟೊಮೆಟೊ ಕೊಯ್ದರು, ಈರುಳ್ಳಿ ‌ಕಿತ್ತರು. ಕಳೆಗಳಿಗೆ ಔಷಧ ಸಿಂಪಡಿಸಿದರು. ಕೃಷಿ ಹೊಂಡಗಳಿಗೆ ಮೀನುಮರಿಗಳನ್ನು ಬಿಟ್ಟು ಸಂಭ್ರಮಿಸಿದರು. 

ರಾಜಶೇಖರ್‌ ಅವರು ತಮ್ಮ ಜಮೀನಿನಲ್ಲಿ ಅನುಸರಿಸಿರುವ ಕೃಷಿ ವಿಧಾನಗಳು ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಬಿ.ಸಿ.ಪಾಟೀಲ ಅವರು ತಿಳಿದುಕೊಂಡರು. ಅಲ್ಲೇ ಇದ್ದ ರೈತ ಮಹಿಳೆಯರೊಂದಿಗೆ ಸಮಾಲೋಚನೆ ನಡೆಸಿದರು. 

ಸಚಿವರು ಸ್ವತಃ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿದರು. ನೆರೆದಿದ್ದ ನೂರಾರು ರೈತರು ಕರತಾಡನ ಮಾಡಿ ಸಂಭ್ರಮಿಸಿದರು.  

ಬಳಿಕ ಮುಂಟೀಪುರ ಗ್ರಾಮದ ಗಣಪತಿ ದೇವಸ್ಥಾನದ ಅವರಣದಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. 

ನಂತರ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅಲಂಕೃತ ಎತ್ತಿನ ಗಾಡಿಯಲ್ಲಿ ಸಚಿವರು ಬರಗಿ ಗ್ರಾಮದಿಂದ ವೇದಿಕೆ ಕಾರ್ಯಕ್ರಮದ ಸ್ಥಳದವರೆಗೆ ಆಗಮಿಸಿದರು. ನೂರಾರು ರೈತರು, ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ವೇದಿಕೆಯ ಮುಂಭಾಗ ವಿವಿಧ ಧಾನ್ಯಗಳನ್ನು ಬಳಸಿ ರಚಿಸಿದ್ದ ರಂಗೋಲಿ ಎಲ್ಲರ ಗಮನ ಸೆಳೆಯಿತು.

ಅಂತರ ಮಾಯ: ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಸಚಿವರನ್ನು ನೋಡಲು ಮುಗಿ ಬಿದ್ದರು. ಯುವಕರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಕೋವಿಡ್‌–19 ನಿಯಮಗಳನ್ನು ಬಹುತೇಕ ಎಲ್ಲರೂ ಗಾಳಿಗೆ ತೂರಿದ್ದರು, ವೈಯಕ್ತಿಕ ಅಂತರ ಎಲ್ಲೂ ಕಂಡು ಬರಲೇ ಇಲ್ಲ. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಜಮೀನು ಮಾಲೀಕ ಮಾಡ್ರಹಳ್ಳಿ ರಾಜಶೇಖರ್, ಜಂಟಿ ಕೃಷಿ ನಿರ್ದೆಶಕಿ ಚಂದ್ರಕಲಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣವರ್‌ ಇದ್ದರು. 

ಗಮನ ಸೆಳೆದ ಕೃಷಿ ವಸ್ತು ಪ್ರದರ್ಶನ

ವಸ್ತು ಪ್ರದರ್ಶನ ಹಾಗೂ ಕೃಷಿಗೆ ಸಂಬಂಧಿಸಿದ ವಿವಿಧ ಮಳಿಗೆಗಳು ಕೂಡ ಕಾರ್ಯಕ್ರಮದಲ್ಲಿ ಗಮನ ಸೆಳೆದವು. 

ಕೃಷಿ ಉಪಕರಣಗಳು, ಬಿತ್ತನೆ ಬೀಜಗಳು, ಪಶು ಪಾಲನೆಯ ಇಲಾಖೆಯ ಮಾಹಿತಿ, ಸಿರಿಧಾನ್ಯಗಳ ಮಾಹಿತಿ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಸಾವಯವ ಹೈನುಗಾರಿಕೆ, ಪೋಷಕಾಂಶ ವ್ಯರ್ಥವಾಗದಂತಹ ಉತ್ಕೃಷ್ಟ ಜೈವಿಕ ಗೊಬ್ಬರದ ಮಾಹಿತಿ ವಸ್ತು ಪ್ರದರ್ಶನದಲ್ಲಿ ರೈತರಿಗೆ ದೊರೆಯಿತು.

ರೈತರು ಮತ್ತು ಸಾರ್ವಜನಿಕರು ಬಿಸಲಿನ ಝಳವನ್ನು ಲೆಕ್ಕಿಸದೆ ವಸ್ತುಪ್ರದರ್ಶನಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ವಸ್ತು ಪ್ರದರ್ಶನದ ಸಿಬ್ಬಂದಿ ಮಾಹಿತಿ ನೀಡಿದರು.

ಪಶು ಸಂಗೋಪನೆ ಇಲಾಖೆಯ ಹಂದಿ, ಕೋಳಿ ಹೈನುಗಾರಿಕೆ ಮಾಹಿತಿ, ರೇಷ್ಮೆ ಇಲಾಖೆ, ಸಾಮಾಜಿಕ ಅರಣ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ತೋಟಗಾರಿಕೆಯ ಮಳಿಗೆಗಳು ಇದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು