ಕೊಳ್ಳೇಗಾಲ: ಇಲ್ಲಿನ ಮುಡಿಗುಂಡದ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯರಿಬ್ಬರು ಪಕ್ಕದ ಮನೆಯ ವ್ಯಕ್ತಿಯೊಬ್ಬರನ್ನು ಕಲ್ಲು ಹಾಗೂ ಇಟ್ಟಿಗೆಗಳಿಂದ ಹೊಡೆದು ಹತ್ಯೆ ಮಾಡಿದ್ದು, ಈ ಸಂಬಂಧ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಡಾವಣೆಯ ನಿವಾಸಿ ಚಂದ್ರಮ್ಮ, ಆಕೆಯ ಪುತ್ರಿ ಪ್ರೀತಿ ಆರೋಪಿಗಳು. ಪಕ್ಕದ ಮನೆಯ ಮಹದೇವಸ್ವಾಮಿ (40) ಮೃತಪಟ್ಟ ವ್ಯಕ್ತಿ.
ಮಹದೇವಸ್ವಾಮಿ ಹಾಗೂ ಚಂದ್ರಮ್ಮ ಅಕ್ಕಪಕ್ಕದ ಮನೆಯವರು. ಕ್ಷುಲ್ಲಕ ಕಾರಣಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸೋಮವಾರ ಸಂಜೆ ಚಂದ್ರಮ್ಮ ಅವರು ಹೊರಗಡೆ ಹೋಗಲು ಮನೆಗೆ ಆಟೋ ರಿಕ್ಷಾವನ್ನು ಕರೆದಿದ್ದಾರೆ. ಆ ವೇಳೆ ಮನೆಯ ಕಡೆಗೆ ಹೋಗುತ್ತಿದ್ದ ಆಟೊವನ್ನು ತಡೆದು ನಿಲ್ಲಿಸಿದ ಮಹದೇವಸ್ವಾಮಿ, ‘ಎಲ್ಲಿಗೆ ಹೋಗುತ್ತಿದ್ದೀಯಾ? ಇದು ಏನು ರಾಷ್ಟ್ರೀಯ ಹೆದ್ದಾರಿಯೋ ಅಥವಾ ರಾಜ್ಯ ಹೆದ್ದಾರಿಯೋ? ಇದು ಬಡಾವಣೆಯ ಸಣ್ಣ ರಸ್ತೆ. ಇಲ್ಲಿ ಆಟೊಗಳಿಗೆ ಪ್ರವೇಶವಿಲ್ಲ. ಈಗಾಗಲೇ ಈ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ’ ಎಂದು ಆಟೊ ಚಾಲಕನನ್ನು ಮಹದೇವಸ್ವಾಮಿ ತಡೆದರು.
ಇದನ್ನು ಗಮನಿಸಿದ ಚಂದ್ರಮ್ಮ ಹಾಗೂ ಆಕೆಯ ಪುತ್ರಿ ಪ್ರೀತಿ ಮಹದೇವಸ್ವಾಮಿ ಅವರ ಮೇಲೆ ಜಗಳವಾಡಿದರು. ‘ಇದು ಏನು ನಿಮ್ಮ ಅಪ್ಪನ ಮನೆಯ ರಸ್ತೆಯಾ? ಇದು ಸರ್ಕಾರಿ ರಸ್ತೆ. ಆಟೊ ಬಂದರೆ ತಪ್ಪೇನು’ ಎಂದು ಪ್ರಶ್ನಿಸಿದರು.
ಇದರಿಂದ ಕೋಪಗೊಂಡು ಜಗಳ ತಾರಕಕ್ಕೆ ಏರಿ ಪ್ರೀತಿ ಹಾಗೂ ಚಂದ್ರಮ್ಮ ಅವರು ಮಹದೇವಸ್ವಾಮಿ ಅವರ ಎದೆಗೆ ಇಟ್ಟಿಗೆ ಹಾಗೂ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದರು. ಈ ವೇಳೆ ಮಹದೇವಸ್ವಾಮಿ ಕುಸಿದು ರಸ್ತೆಯಲ್ಲಿ ಬಿದ್ದಿದ್ದಾರೆ.
ಬಳಿಕ ಮಹದೇವಸ್ವಾಮಿ ಅವರನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಮಹದೇವಸ್ವಾಮಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಆರೋಪಿಗಳ ಬಂಧನ
ಮಹದೇವಸ್ವಾಮಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಚಂದ್ರಮ್ಮ ಆಕೆಯ ಪುತ್ರಿ ಪ್ರೀತಿ ಮಧ್ಯರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದರು. ವಿಷಯ ತಿಳಿದ ತಕ್ಷಣ ಪಿಎಸ್ಐ ವರ್ಷಾ ಅವರು ಮಿಂಚಿನ ಕಾರ್ಯಾಚರಣೆ ನಡೆಸಿ ಕೇವಲ ಒಂದು ಗಂಟೆಯಲ್ಲೇ ಈ ಇಬ್ಬರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಪಿಎಸ್ಐ ವರ್ಷ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ವೇಳೆ ಚಂದ್ರಮ್ಮ ಅವರ ತಾಯಿ ಮನೆಯಲ್ಲೇ ಇದ್ದ 87 ವರ್ಷದ ವೃದ್ಧೆಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.