ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕ್ರಯ ರದ್ದು, ಕ್ರಿಮಿನಲ್‌ ಪ್ರಕರಣಕ್ಕೆ ಶಿಫಾರಸು

Published 23 ಮಾರ್ಚ್ 2024, 6:47 IST
Last Updated 23 ಮಾರ್ಚ್ 2024, 6:47 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘವು ನಿರ್ವಹಿಸುತ್ತಿರುವ ಆದಿ ಕರ್ನಾಟಕ ಹಾಸ್ಟೆಲ್‌ಗೆ ಸೇರಿರುವ ಭೂಮಿಯವನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವುದು ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಯು ನಡೆಸಿರುವ ತನಿಖೆಯಿಂದ ದೃಢಪಟ್ಟಿದೆ. 

ಸಮಿತಿಯು ‌ಫೆ.28ರಂದು ಜಿಲ್ಲಾಧಿಕಾರಿಯವರಿಗೆ ತನಿಖಾ ವರದಿ ಸಲ್ಲಿಸಿದ್ದು, ಹಾಸ್ಟೆಲ್‌ ಜಾಗ ಮತ್ತು ಸಂಘದ ವ್ಯವಹಾರಗಳಿಗೆ ಸಂಬಂಧಿಸಿದಂತೆ ವರದಿಯಲ್ಲಿ ಐದು ಶಿಫಾರಸುಗಳನ್ನು ಮಾಡಿದೆ. ವರದಿಯ ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

‘ಹಾಸ್ಟೆಲ್‌ಗೆ ಸೇರಿದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಹಕ್ಕು ಬದಲಾವಣೆ ಮಾಡಿರುವುದು ಕಂಡು ಬಂದಿದ್ದು, ಹಕ್ಕು ಬದಲಾವಣೆ ಮಾಡಿದವರು ಮತ್ತು ಹಕ್ಕು ಬದಲಾವಣೆ ಪಡೆದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ಹೂಡಿ ಕಾನೂನು ಕ್ರಮ ಕೈಗೊಳ್ಳುವುದು ಸೂಕ್ತ’ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ. 

‘ಸರ್ವೆ ನಂಬರ್‌ 295/4ಸಿ, 295/4ಡಿ, 295/4ಎಫ್‌ ಹಿಸ್ಸಾಗಳಲ್ಲಿ ಅಕ್ರಮವಾಗಿ ಕ್ರಯ ಮಾಡಿರುವುದು ಕಂಡು ಬಂದಿದೆ. ಈ ಹಿಸ್ಸಾಗಳ ಮೇಲೆ ನಡೆದಿರುವ ಎಲ್ಲ ಕ್ರಯದ ವಹಿವಾಟುಗಳುಗಳನ್ನು ರದ್ದು ಪಡಿಸಿ, ಅಸಿಂಧುಗೊಳಿಸಬೇಕು’ ಎಂದೂ ವರದಿ ಶಿಫಾರಸು ಮಾಡಿದೆ.

‘1952–53ರಲ್ಲೇ ಹಾಸ್ಟೆಲ್‌ಗಾಗಿ ಭೂಸ್ವಾಧೀನ ಆಗಿದೆ. ಫಸಲು ಪಹಣಿಯ ಷರಾ ಕಾಲಂನಲ್ಲಿ ‘ಎ.ಕೆ. ಜನರಲ್‌ ಹಾಸ್ಟೆಲ್‌’ ಎಂಬ ಉಲ್ಲೇಖ ಇದೆ. 1968ರಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಹಾಸ್ಟೆಲ್‌ ನಿರ್ಮಿಸಲಾಗಿದೆ. ಹಾಸ್ಟೆಲ್‌ ಇರುವ ಜಾಗದಲ್ಲೇ ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘ ಇದೆ. ಆದರೆ, ಹಾಸ್ಟೆಲ್‌ ಜಾಗವನ್ನು ಸಂಘಕ್ಕೆ ಸರ್ಕಾರದಿಂದ ಹಸ್ತಾಂತರ ಮಾಡಿರುವ ಬಗ್ಗೆ ದಾಖಲೆಗಳು ಇಲ್ಲ. ಸಂಘವು ಸೂಕ್ತ ದಾಖಲೆಗಳನ್ನು ಹಾಜರು ಪಡಿಸುವವರೆಗೆ ಈ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸುವುದು ಸೂಕ್ತ’ ಎಂದು ಸಮಿತಿ ಹೇಳಿದೆ. 

‘1961–62ನೇ ಸಾಲಿನ ಫಸಲು ಪಹಣಿಯ ಷರಾ ಕಾಲಂನಲ್ಲಿ ಎ.ಕೆ.ಜನರಲ್‌ ಹಾಸ್ಟೆಲ್‌ ಎಂದು ನಮೂದಾಗಿರುವಂತೆ ಪ್ರಸ್ತುತ ಗಣಕೀಕೃತ ಪಹಣಿ ಕಾಲಂ 11ರಲ್ಲಿ ಎ.ಕೆ.ಜನರಲ್‌ ಹಾಸ್ಟೆಲ್‌ ಎಂದು ಕೂಡಲೇ ನಮೂದು ಮಾಡಬೇಕು’ ಎಂದೂ ವರದಿ ಹೇಳಿದೆ. 

ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು: ‘ಸರ್ಕಾರಿ ಉದ್ದೇಶಕ್ಕೆ ಭೂ ಸ್ವಾಧೀನ ಆಗಿರುವ ಜಾಗದ ದಾಖಲೆಗಳನ್ನು ಪರಿಶೀಲನೆ ನಡೆಸದೇ ಹಾಗೂ ಜಾಗದ ಅನುಭವ ಪರಿಶೀಲಿಸದೇ ಸರ್ಕಾರಿ ಹಾಸ್ಟೆಲ್‌ ಇರುವ ಜಾಗವನ್ನು ಸರ್ಕಾರಿ ಆಕ್ಷೇಪಣೆ ಸಲ್ಲಿಸದೇ ಹಲವು ನೋಂದಣಿ ಕ್ರಯ ಪತ್ರದಂತೆ ಹಕ್ಕು ಬದಲಾವಣೆ ಖಾತೆ ಅಂಗೀಕರಿಸಲಾಗಿದ್ದು, ಇದರಲ್ಲಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂದು ಬಂದಿದ್ದು, ಸಂಬಂಧ ಪಟ್ಟವರ ವಿರುದ್ಧ ವಿಚಾರಣೆ ನಡೆಸಿ ಕ್ರಮವಹಿಸಬೇಕು’ ಎಂದು ಶಿಫಾರಸಿನಲ್ಲಿ ಸಮಿತಿ ಹೇಳಿದೆ.

ಪ್ರಕರಣ ದಾಖಲು ಸೂಚನೆ: ಈ ಮಧ್ಯೆ, ಶಿಫಾರಸಿನ ಆಧಾರದಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಯವರು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಕ್ರಮ ಪರಭಾರೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ವರದಿಯಲ್ಲಿ ಹೇಳಲಾಗಿದೆ. ನಮ್ಮ ಅವಧಿಯಲ್ಲಿ ಭೂಮಿ ಪರಭಾರೆಯಾಗಿಲ್ಲ
ಎಸ್‌.ನಂಜುಂಡಸ್ವಾಮಿ ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ
ಎಸಿ ಸಮಿತಿಯ ವರದಿ ಬಂದಿದೆ. ವರದಿಯಲ್ಲಿರುವ ಶಿಫಾರಸುಗಳ ಆಧಾರದಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
- ಸಿ.ಟಿ.ಶಿಲ್ಪಾ ನಾಗ್‌ ಜಿಲ್ಲಾಧಿಕಾರಿ
ನಾವು ಮಾಡಿರುವ ಆರೋಪವನ್ನು ವರದಿ ಎತ್ತಿ ಹಿಡಿದಿದ್ದು ಶಿಫಾರಸಿನಂತೆ ಜಿಲ್ಲಾಧಿಕಾರಿಯವರು ತಕ್ಷಣ ಕ್ರಮ ಕೈಗೊಳ್ಳಬೇಕು
- ಶಿವಕುಮಾರ್‌ ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯ

ಆಡಳಿತ ಅಧಿಕಾರಿ ನೇಮಿಸಲು ಸಲಹೆ

ಸಂಘದ ಹಣಕಾಸಿನ ವ್ಯವಹಾರದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.  ‘ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯವರು ಹಣಕಾಸಿನ ಬಗ್ಗೆ ಆಕ್ಷೇಪಣೆ ಮಾಡಿದೆ. ಸಂಘದ ಆಸ್ತಿಯಿಂದ ಹಾಗೂ ವಾಣಿಜ್ಯ ಕಟ್ಟಡಗಳ ಜೊತೆಗೆ ಸಂಘದ ಸುಪರ್ದಿಯಲ್ಲಿರುವ ಬೂದಿತಿಟ್ಟು ಮತ್ತು ಗ್ರಾಮದಲ್ಲಿ ಇರುವ ಆಸ್ತಿಗಳಿಂದ ಬಂದಿರುವ ಆದಾಯ ಹಾಗೂ ಅದನ್ನು ಸಂಘವು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹಕಾರ ಸಂಘಗಳ ಉಪ ವ್ಯವಸ್ಥಾಪಕರಿಗೆ ಸಂಘ ನೀಡಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ. 

‘ಸಂಘದ ಆಡಳಿತದ ಮಂಡಳಿಯು ಹಣಕಾಸಿನ ದಾಖಲೆಗಳನ್ನು ನೀಡದೆ ತನಿಖೆಗೆ ಅಸಹಕಾರ ತೋರಿದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯಿಂದ ಅಥವಾ ಸರ್ಕಾರದ ಇನ್ಯಾವುದೇ ಲೆಕ್ಕಾಧಿಕಾರಿಗಳಿಂದ ಸಂಘದ ಸಂಪೂರ್ಣ ಲೆಕ್ಕ ತಪಾಸಣೆಯನ್ನು ತುರ್ತಾಗಿ ಮಾಡಿಸಬೇಕು. ಸಂಘವು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೂ ಸಂಘದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸರ್ಕಾರದ ಜಿಲ್ಲಾ ಹಂತದ ಒಬ್ಬ ಅಧಿಕಾರಿಯನ್ನು ಆಡಳಿತ ಅಧಿಕಾರಿಯನ್ನಾಗಿ ನೇಮಿಸುವುದು ಸೂಕ್ತ’ ಎಂದು ಎಸಿ ನೇತೃತ್ವದ ಸಮಿತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT