ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಸಹಾಯಧನ ಮಂಜೂರು ಮಾಡಲು ಲಂಚ: ಕಾರ್ಮಿಕ ಇನ್‌ಸ್ಪೆಕ್ಟರ್‌ ಎಸಿಬಿ ಬಲೆಗೆ

Last Updated 28 ಜನವರಿ 2021, 14:48 IST
ಅಕ್ಷರ ಗಾತ್ರ

ಚಾಮರಾಜನಗರ: ಮದುವೆ ಸಹಾಯಧನ ಮಂಜೂರು ಮಾಡಲು ಅರ್ಜಿದಾರರಿಂದ ₹3,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ಇನ್‌ಸ್ಪೆಕ್ಟರ್‌ ಗೀತಾ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್‌ ಆಪರೇಟರ್‌ ಮಾಲತಿ ಅವರು ಗುರುವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ‌‌

ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾಗಿದ್ದ ರಾಮಸಮುದ್ರದ ಅಂಬೇಡ್ಕರ್‌ ಬಡಾವಣೆ ನಿವಾಸಿ ಚೇತನ್‌ ಸಿ. ಅವರು ಮದುವೆ ಸಹಾಯಧನಕ್ಕಾಗಿ 2020ರ ಡಿಸೆಂಬರ್‌ 12ರಂದು ಆನ್‌ಲೈನ್‌ ಮೂಲಕ ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ‌

ಜಿಲ್ಲಾಡಳಿತ ಭವನದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿರುವ ಮಾಲತಿ ಅವರು ಇದೇ 21ರಂದು ಚೇತನ್‌ ಅವರಿಗೆ ಕರೆ ಮಾಡಿ ಮದುವೆ ಸಹಾಯಧನದ ಅರ್ಜಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರುವಂತೆ ತಿಳಿಸಿದ್ದರು. ಅದರಂತೆ ಚೇತನ್‌ ಅವರು ಬುಧವಾರ (ಜ.28) ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮಾಲತಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮಾಲತಿ ಅವರು ಹಿರಿಯ ಲೇಬರ್‌ ಇನ್‌ಸ್ಪೆಕ್ಟರ್‌ ಗೀತಾ ಅವರನ್ನು ಪರಿಚಯಿಸಿದ್ದರು. ಈ ಸಂದರ್ಭದಲ್ಲಿ ಹಣ ಮಂಜೂರು ಮಾಡಲು ₹3,000 ಹಣಕ್ಕೆ ಇಬ್ಬರೂ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಚೇತನ್‌ ಅವರು ಎಸಿಬಿಗೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಮಾಲತಿ ಅವರು ಚೇತನ್‌ ಅವರಿಂದ ಲಂಚ ಪಡೆಯುತ್ತಿದ್ದಾಗ ಬಂಧಿಸಿದ್ದಾರೆ. ಗೀತಾ ಅವರನ್ನೂ ಬಂಧಿಸಿದ್ದಾರೆ. ₹3000 ನಗದನ್ನು ವಶ ಪಡಿಸಿಕೊಂಡಿದ್ದಾರೆ.

ಎಸಿಬಿ ಡಿವೈಎಸ್‌ಪಿ ಸದಾನಂದ ಎ ತಿಪ್ಪಣ್ಣವರ್‌, ಇನ್‌ಸ್ಪೆಕ್ಟರ್‌ಗಳಾದ ಕಿರಣ್‌ಕುಮಾರ್‌, ದೀಪಕ್‌ ಎಲ್‌. ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT