ಬುಧವಾರ, ಜನವರಿ 22, 2020
26 °C
ವಿಜಯಾ ಬ್ಯಾಂಕ್‌ ಮ್ಯಾನೇಜರ್‌ ಬಂಧನ ಪ್ರಕರಣ: ಪಡೆದಿದ್ದು ಲಂಚ ಅಲ್ಲ, ನ್ಯಾಯಾಲಯ ಶುಲ್ಕ?

ವಿಜಯಾ ಬ್ಯಾಂಕ್ ಮ್ಯಾನೇಜರ್ ಬಂಧನ: ಎಸಿಬಿ ವಿಶ್ವಾಸಾರ್ಹತೆ ಮೇಲೆ ಅನುಮಾನ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಡಿಸೆಂಬರ್‌ 19ರಂದು ನಗರದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತಾಲ್ಲೂಕಿನ ಆಲೂರು ಗ್ರಾಮದ ವಿಜಯಾ ಬ್ಯಾಂಕ್‌ಗೆ (ಈಗ ಬ್ಯಾಂಕ್‌ ಆಫ್‌ ಬರೋಡಾ) ದಿಢೀರ್‌ ಭೇಟಿ ನೀಡಿ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಮ್ಯಾನೇಜರ್‌ ಅವರನ್ನು ಬಂಧಿಸಿರುವ ಪ್ರಕರಣ ಬ್ಯಾಂಕಿಂಗ್‌ ವಲಯ ಹಾಗೂ ಪೊಲೀಸ್‌ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಮೇಲೆ ರಾಜ್ಯದ ತನಿಖಾ ದಳವೊಂದು ದಾಳಿ ನಡೆಸಿ ಸಿಬ್ಬಂದಿಯನ್ನು ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿರುವುದರ ಜೊತೆಗೆ, ಮ್ಯಾನೇಜರ್‌ ಬಂಧನಕ್ಕೆ ಪೊಲೀಸರು ನೀಡಿರುವ ಕಾರಣದ ಬಗ್ಗೆಯೂ ಚರ್ಚೆಯಾಗುತ್ತಿದೆ.

ಮ್ಯಾನೇಜರ್‌ ಪ್ರವೀಣ್‌ ಚಂದರ್‌ ಅವರು ಸಾಲದ ತೀರುವಳಿ ಪತ್ರ ನೀಡಲು ₹13 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಸಿದ್ದಪ್ಪಾಜಿ ಎಂಬುವರು ನೀಡಿದ್ದ ದೂರಿನ ಆಧಾರದಲ್ಲಿ ದಾಳಿ ಮಾಡಿದ್ದಾಗಿಯೂ ತಿಳಿಸಿದ್ದರು. ಮ್ಯಾನೇಜರ್‌ ಪಡೆದಿದ್ದು ಲಂಚ ಅಲ್ಲ; ನ್ಯಾಯಾಲಯದ ಶುಲ್ಕ ಹಾಗೂ ಕಾನೂನು ವೆಚ್ಚಗಳ ಹಣ ಎಂಬುದು ಬ್ಯಾಂಕ್‌ ಸಿಬ್ಬಂದಿ ವಾದ.

ಡಿಸೆಂಬರ್‌ 19ರಂದು ಬ್ಯಾಂಕ್‌ನ ಮ್ಯಾನೇಜರ್‌ ಅವರ ಕೊಠಡಿಯಲ್ಲಿ ನಡೆದ ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, 9.08 ನಿಮಿಷಗಳ ವಿಡಿಯೊ ತುಣುಕೊಂದು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಸಿದ್ದಪ್ಪಾಜಿ ಅವರು ಹಣ ನೀಡಿದ ನಂತರ ಮ್ಯಾನೇಜರ್‌ ಅವರು ಚಲನ್‌ ಬರೆಯುತ್ತಿರುವುದು ಅದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ನಂತರ, ಕಚೇರಿ ಸಿಬ್ಬಂದಿಯನ್ನು ಕರೆದು, ಪಾಸ್‌ ಪುಸ್ತಕ, ಹಣ ಹಾಗೂ ಚಲನ್‌ ಕೊಟ್ಟು ಕೌಂಟರ್‌ನಲ್ಲಿ ನೀಡುವಂತೆ ಸೂಚಿಸುವ ದೃಶ್ಯವೂ ಅದರಲ್ಲಿದೆ. ಸಿಬ್ಬಂದಿ ಹಣವನ್ನು ಹೊರಗೆ ತೆಗೆದುಕೊಂಡ ಹೋದ ನಂತರ ಸಿದ್ದಪ್ಪಾಜಿ ಅವರು ಕೂಡ ಹೊರಗೆ ಹೋಗಿ ಸ್ವಲ್ಪ ಹೊತ್ತಿನ ನಂತರ ಎಸಿಬಿ ಅಧಿಕಾರಿಗಳೊಂದಿಗೆ ವಾಪಸ್‌ ಬರುವ ದೃಶ್ಯವೂ ವಿಡಿಯೊದಲ್ಲಿದೆ. 

ಚಲನ್‌ ಬರೆದಿದ್ದು ಯಾಕೆ?

‘2011ರಲ್ಲಿ ಸಿದ್ದಪ್ಪಾಜಿ ಅವರ ತಾಯಿ ತುಳಸಮ್ಮ ಅವರು ₹54 ಸಾವಿರ ಸಾಲ ತೆಗೆದುಕೊಂಡಿದ್ದರು. ಸಾಲ ಮರುಪಾವತಿಸದೇ ಇದ್ದುದರಿಂದ ಬ್ಯಾಂಕ್‌ನವರು ಕೋರ್ಟ್‌ ಮೆಟ್ಟಿಲೇರಿದ್ದರು. ರಾಜ್ಯ ಸರ್ಕಾರ ಇತ್ತೀಚೆಗೆ ಸಾಲಮನ್ನಾ ಮಾಡಿದಾಗ ಇವರ ಸಾಲವೂ ಮನ್ನಾ ಆಗಿತ್ತು. ಆದರೆ, ನ್ಯಾಯಾಲಯದ ಶುಲ್ಕ ಹಾಗೂ ಕಾನೂನು ವೆಚ್ಚ ₹15 ಸಾವಿರ ಆಗಿತ್ತು. ಸಾಲದ ತೀರುವಳಿ ಪತ್ರಕ್ಕಾಗಿ ಸಿದ್ದಪ್ಪಾಜಿ ಅವರು ಬ್ಯಾಂಕ್‌ಗೆ ಬಂದಿದ್ದಾಗ ಮ್ಯಾನೇಜರ್, ಪ್ರಕರಣದ ವೆಚ್ಚ ಪಾವತಿಸಬೇಕು ಎಂದು ಹೇಳಿದ್ದಾರೆ. ಆಗ ತಮ್ಮಲ್ಲಿದ್ದ ₹2,000 ಹಣ ಕೊಟ್ಟಿದ್ದ ಸಿದ್ದಪ್ಪಾಜಿ, ಉಳಿದ ಮೊತ್ತವನ್ನು ನೀಡುವುದಾಗಿ ಹೇಳಿ ಹೋಗಿದ್ದಾರೆ. ಡಿ.19ರಂದು ಬಂದು ₹13 ಸಾವಿರ ಕೊಟ್ಟಿದ್ದಾರೆ. ಈ ಮೊತ್ತಕ್ಕೆ ಪ್ರವೀಣ್‌ ಅವರು ಚಲನ್‌ ಬರೆದಿದ್ದಾರೆ’ ಎಂದು ಬ್ಯಾಂಕ್‌ನ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಬ್ಯಾಂಕ್‌ನಲ್ಲೂ ವಿಚಕ್ಷಣ ದಳ ಇದೆ. ಅವರು ಸಿಬ್ಬಂದಿ ಮೇಲೆ ನಿಗಾ ಇಟ್ಟಿರುತ್ತಾರೆ. ತನ್ನ ಕೊಠಡಿಯಲ್ಲೇ ಸಿಸಿಟಿವಿ ಕ್ಯಾಮೆರಾ ಇದೆ ಎಂಬುದು ಗೊತ್ತಿದ್ದೂ ಯಾವ ಸಿಬ್ಬಂದಿ ಲಂಚ ಪಡೆಯುವುದಕ್ಕೆ ಸಾಧ್ಯ’ ಎಂಬುದು ಬ್ಯಾಂಕ್‌ ಅಧಿಕಾರಿಗಳ ಪ್ರಶ್ನೆ.

ಎಸಿಬಿ ದಾಳಿ ಮಾಡಬಹುದೇ?

ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳು ಕೇಂದ್ರ ಸ್ವಾಮ್ಯದ ಬ್ಯಾಂಕ್‌ಗಳ ಮೇಲೆ ದಾಳಿ ನಡೆಸುವಂತಿಲ್ಲ ಎಂಬುದು ಬ್ಯಾಂಕ್‌ ಅಧಿಕಾರಿಗಳ ವಾದ.

ಕೇಂದ್ರದ ಅನುಮತಿ ಪಡೆದು ದಾಳಿ ನಡೆಸುವುದಕ್ಕೆ ಅವಕಾಶವಿದೆ ಎಂದು ಎಸಿಬಿ ಅಧಿಕಾರಿಗಳು ಹೇಳುತ್ತಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಎಸಿಬಿ ಮೈಸೂರು ವಿಭಾಗದ ಎಸ್‌ಪಿ ರಶ್ಮಿ ಕೆ.ಜೆ, ‘ಈ ಬಗ್ಗೆ ಸಿಬಿಐ ಜೊತೆ ಚರ್ಚಿಸಿದ್ದೇವೆ. ನಂತರವಷ್ಟೇ ದಾಳಿ ನಡೆಸಲಾಗಿದೆ’ ಎಂದು ಹೇಳಿದರು. 

‘ಜನರು ದೂರು ಕೊಟ್ಟರೆ ನಾವು ಆ ಬಗ್ಗೆ ಕ್ರಮ ಕೈಗೊಳ್ಳಲೇಬೇಕು. ಸುಮ್ಮನಿರಲು ಆಗುವುದಿಲ್ಲ’ ಎಂದು ತಿಳಿಸಿದರು.

***

ಸಾರ್ವಜನಿಕರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಬ್ಯಾಂಕ್‌ ಮೇಲೆ ದಾಳಿ ನಡೆಸಿ ಕ್ರಮ ಕೈಗೊಂಡಿದ್ದೇವೆ. ತನಿಖೆ ನಂತರ ನಿಜಾಂಶ ತಿಳಿಯಲಿದೆ.
-ರಶ್ಮಿ ಕೆ.ಜೆ, ಎಸಿಬಿ ಎಸ್‌ಪಿ, ಮೈಸೂರು

***

ನಮ್ಮ ಮ್ಯಾನೇಜರ್‌ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದ ವಿಚಾರವಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದಷ್ಟೇ ಹೇಳಬಲ್ಲೆ.
-ಸತ್ಯನಾರಾಯಣ ನಾಯಕ್‌, ಡಿಜಿಎಂ, ಬ್ಯಾಂಕ್‌ ಆಫ್‌ ಬರೋಡಾ, ಮೈಸೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು