ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | ರೇಖಾ ಸಾವು ಪ್ರಕರಣ: ಇನ್ನೂ ಸಿಗದ ಆರೋಪಿಗಳು

 ಅವಿನ್ ಪ್ರಕಾಶ್ ವಿ.
Published 14 ಜನವರಿ 2024, 7:21 IST
Last Updated 14 ಜನವರಿ 2024, 7:21 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ಆದರ್ಶ ನಗರ ಬಡಾವಣೆ ನಿವಾಸಿ ರೇಖಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟು ತಿಂಗಳಾಗುತ್ತಾ ಬಂದರೂ, ಇಬ್ಬರು ಆರೋಪಿಗಳು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. 

ವಿಶೇಷ ತಂಡ ರಚಿಸಿದ್ದು, ಆರೋಪಿಗಳಾದ ಸೆಸ್ಕ್‌ ನೌಕರ ನಾಗೇಂದ್ರ ಹಾಗೂ ಪೊಲೀಸ್‌ ಜೀಪು ಚಾಲಕ ಶಂಕರ್‌ ಅವರಿಗೆ ಬಲೆ ಬೀಸಿದರೂ ಅವರು ಪತ್ತೆಯಾಗಿಲ್ಲ. 

ರೇಖಾ ಶವ ಡಿ.16ರಂದು ಅವರು ವಾಸವಿದ್ದ ಮನೆಯಲ್ಲಿ ಕಂಡು ಬಂದಿತ್ತು. ಆಕೆಯ ಆರು ವರ್ಷದ ಮಗಳು ನಾಪತ್ತೆಯಾಗಿದ್ದಳು. ನಂತರ ಆಕೆ ಬಾಲ ಮಂದಿರದಲ್ಲಿ ಇರುವುದು ಪತ್ತೆಯಾಗಿತ್ತು. 

‘ರೇಖಾ ಜೊತೆ ಒಡನಾಟ ಇಟ್ಟುಕೊಂಡಿದ್ದ ನಾಗೇಂದ್ರ ಹಾಗೂ ಅವರ ಚಿಕ್ಕಪ್ಪ ಶಂಕರ್‌ ಸೇರಿಕೊಂಡು ಮಗಳನ್ನು ಕೊಲೆ ಮಾಡಿದ್ದಾರೆ’ ಎಂದು ರೇಖಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. 

ಮೃತದೇಹ ಕೊಳೆತಿದ್ದರಿಂದ ಮೂರು ದಿನಗಳ ಹಿಂದೆಯೇ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದರು. 

ದೂರು ದಾಖಲಾಗುತ್ತಲೇ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸ್‌ ಜೀಪಿನ ಚಾಲಕ ಶಂಕರ್‌ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಆದೇಶವನ್ನೂ ಹೊರಡಿಸಿದ್ದಾರೆ.  

ರೇಖಾ ಅವರು 10 ವರ್ಷಗಳ ಹಿಂದೆ ಮೈಸೂರಿನ ಸುನಿಲ್ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳು ಇದ್ದಳು. ಎರಡು ವರ್ಷಗಳ ಹಿಂದೆ ಸುನಿಲ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ರೇಖಾ ತಂದೆಯೊಂದಿಗೆ ವಾಸ ಇದ್ದರು. 

ರೇಖಾ ಸೆಸ್ಕ್ ನೌಕರ ನಾಗೇಂದ್ರ ಅವರನ್ನು ಪ್ರೀತಿಸುತ್ತಿದ್ದರು. ಅವರನ್ನು ಮದುವೆಯಾಗುತ್ತೇನೆ ಎಂದು ಪೋಷಕರ ಜೊತೆ ಹೇಳಿಕೊಂಡಿದ್ದರು. ಮೊದಲು ಮದುವೆಗೆ ಒಪ್ಪಿದ್ದ ನಾಗೇಂದ್ರ, ನಂತರ ನಿರಾಕರಿಸಿದ್ದರು. ಬಳಿಕ ನಾಗೇಂದ್ರ ಅವರೇ ಕೊಳ್ಳೇಗಾಲದಲ್ಲಿ ಮನೆ ಮಾಡಿ ಕೊಟ್ಟಿದ್ದರು. ಮನೆಗೆ ಬಂದು ಹೋಗುತ್ತಿದ್ದರು. 

‘ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಈ ಜಗಳವೇ ಸಾವಿಗೆ ಕಾರಣ’ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. 

‘ಆದರೆ, ಸಾವು ಯಾವ ರೀತಿ ಆಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಯಾವ ಭಾಗದಲ್ಲೂ ಗಾಯಗಳಾಗಿರುವುದು ಕಂಡು ಬಂದಿಲ್ಲ. ಶವದ ಕುತ್ತಿಗೆ ಭಾಗ ಕೊಳೆತಿರುವುದರಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆಯೇ ಅಥವಾ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆಯೇ ಎಂಬ ಸಂಗತಿಯೂ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿಲ್ಲ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪ್ರಕರಣದ ಪ್ರಮುಖ ಆರೋಪಿ ನಾಗೇಂದ್ರ ಸಿಕ್ಕಿದರೆ ಎಲ್ಲವೂ ಗೊತ್ತಾಗಲಿದೆ. ಅವರನ್ನು ಬಂಧಿಸದೆ, ಎರಡನೇ ಆರೋಪಿಯನ್ನು ಬಂಧಿಸಿದರೆ ಹೆಚ್ಚು ಪ್ರಯೋಜನವಾಗದು’ ಎಂದು ಮೂಲಗಳು ತಿಳಿಸಿವೆ. 

28 ದಿನಗಳಿಂದ ಓಡಾಟ: ಪರಾರಿಯಾಗಿರುವ ನಾಗೇಂದ್ರ ಅವರು ನಿರಂತರವಾಗಿ ಸಂಚರಿಸುತ್ತಿದ್ದಾರೆ. ಹೊರ ಜಿಲ್ಲೆಗಳು, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮಹಾರಾಷ್ಟ್ರದಲ್ಲೆಲ್ಲಾ ಸುತ್ತಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇತ್ತೀಚೆಗೆ ನಂಜನಗೂಡಿಗೆ ಬಂದಿರುವುದನ್ನೂ ತನಿಖಾಧಿಕಾರಿಗಳು ಖಚಿತ ಪಡಿಸಿಕೊಂಡಿದ್ದಾರೆ. ಅಲ್ಲಿಗೆ ಬಂದು ಬೇರೆಯವರ ಮೊಬೈಲ್‌ನಿಂದ ಕರೆ ಮಾಡಿದ್ದರು ಎಂಬುದೂ ಗೊತ್ತಾಗಿದೆ. 

ಪೊಲೀಸರು ನಾಗೇಂದ್ರ ಮತ್ತು ಶಂಕರ್‌ ಅವರ ಮನೆಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. 

ಸೋಮೇಗೌಡ
ಸೋಮೇಗೌಡ
ಸೋಮೇಗೌಡ
ಸೋಮೇಗೌಡ
ಮನೆಯವರೊಂದಿಗೆ ಆರೋಪಿಗಳ ನಿರಂತರ ಸಂಪರ್ಕ ಆರೋಪಿ ಹೊರ ರಾಜ್ಯದೆಲ್ಲೆಡೆ ಅಡ್ಡಾಡುತ್ತಿರುವ ಮಾಹಿತಿ ಇದೆ ವಿಶೇಷ ತಂಡಗಳ ಕೈಗೂ ಸಿಗದ ಆರೋಪಿಗಳು
ಮೂರು ತಂಡಗಳನ್ನು ರಚನೆ ಮಾಡಲಾಗಿದ್ದು ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು
ಸೋಮೇಗೌಡ ಡಿವೈಎಸ್‌ಪಿ
ತನಿಖೆ ಸರಿಯಾದ ದಾರಿಯಲ್ಲಿದೆ. ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದೇವೆ. ಕೆಲವೇ ದಿನಗಳಲ್ಲಿ ಬಂಧಿಸಲಿದ್ದೇವೆ
ಪದ್ಮಿನಿ ಸಾಹು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
‘ತಪ್ಪು ಮಾಡಿದ್ದರೆ ಕಾನೂನಿನಂತೆ ಕ್ರಮ’
ಪ್ರಕರಣದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿ‌ಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ನಮ್ಮ ಸಿಬ್ಬಂದಿ ಮೇಲೆಯೂ ಆರೋಪ ಕೇಳಿ ಬಂದಿದ್ದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಸಾವಿನಲ್ಲಿ ಅವರ ಪಾತ್ರ ಇದೆಯೇ ಇಲ್ಲವೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧವೂ ಕಾನೂನಿನಂತೆ ಕ್ರಮ ವಹಿಸಲಾಗುವುದು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT