ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಶಿಕ್ಷಣ ಸಂಸ್ಥೆಗೆ ಜಮೀನು ನೀಡದ್ದಕ್ಕೆ ಆರೋಪ’

ಪುಟ್ಟರಂಗಶೆಟ್ಟಿ ವಿರುದ್ಧ ಆರೋಪ; ಶಾಸಕ ಎ.ಆರ್‌.ಕೆ ವಿರುದ್ಧ : ನಂಜುಂಡಸ್ವಾಮಿ ವಾಗ್ದಾಳಿ
Published 17 ಫೆಬ್ರುವರಿ 2024, 8:16 IST
Last Updated 17 ಫೆಬ್ರುವರಿ 2024, 8:16 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹಾಸ್ಟೆಲ್‌ ಭೂಮಿ ಪರಭಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಮುಂಭಾಗ ಇತ್ತೀಚೆಗೆ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧವಾಗಿ ಮಾತನಾಡಿರುವುದಕ್ಕೆ ಸಂಘದ ಅಧ್ಯಕ್ಷ ಎಸ್‌.ನಂಜುಂಡಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು ಶಾಸಕ ಕೃಷ್ಣಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಅಂದು ಭಾಷಣ ಮಾಡುವ ಸಂದರ್ಭದಲ್ಲಿ ಕೃಷ್ಣಮೂರ್ತಿಯವರು ನಮ್ಮ ಕ್ಷೇತ್ರದ ಶಾಸಕರನ್ನು ಏಕ ವಚನದಲ್ಲಿ ಬೈದಿದ್ದಾರೆ. ಹಿರಿಯ ನಾಯಕರ ಮಗನಾಗಿರುವ ಅವರಿಗೆ ಇದು ಶೋಭೆ ತರುವಂತಹದ್ದಲ್ಲ. ಜಾತಿ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದೂ ಹೇಳಿದ್ದಾರೆ. ನಾವು ಹಾಸ್ಟೆಲ್ ವಿಚಾರವಾಗಿ ಪುಟ್ಟರಂಗಶೆಟ್ಟಿಯವರ ಸಹಾಯ ಕೇಳಿಲ್ಲ. ಅವರು ಈ ಬಗ್ಗೆ ಮಾತನಾಡಿಯೂ ಇಲ್ಲ. ಅವುಗಳು ಕೃಷ್ಣಮೂರ್ತಿಯವರ ಯೋಗ್ಯತೆಗೆ ತಕ್ಕುದಾದ ಮಾತುಗಳಲ್ಲ’ ಎಂದು ಟೀಕಿಸಿದರು.

‘ಹೇಳುತ್ತಿದ್ದರೆ ನಾವೂ ಹೇಳಬಹುದು. ಆದರೆ ಆ ಕೆಲಸ ನಾವು ಮಾಡುವುದಿಲ್ಲ. ನಮಗೆ ಅದು ಬೇಕಾಗಿಯೂ ಇಲ್ಲ. ಕೃಷ್ಣಮೂರ್ತಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿ ನೀಡಬೇಕು ಎಂದು ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇವೆ’ ಎಂದು ನಂಜುಂಡಸ್ವಾಮಿ ಹೇಳಿದರು.

‘ಹಾಸ್ಟೆಲ್‌ ವಿಚಾರವಾಗಿ ಏನಾದರೂ ಅನುಮಾನ ಇದ್ದರೆ, ಕೃಷ್ಣಮೂರ್ತಿಯವರು ನೇರವಾಗಿ ನಮ್ಮ ಬಳಿ ಕೇಳಬಹುದಿತ್ತು. ಆದರೆ, ಅವರು ಕೇಳಿಲ್ಲ’ ಎಂದರು.

‘ಅವರು ನಡೆಸುತ್ತಿರುವ ಶ್ರೀರಾಮ ಚಂದ್ರ ವಿದ್ಯಾಸಂಸ್ಥೆಯು ಸಂಘಕ್ಕೆ ಸೇರಿದ 1.04 ಗುಂಟೆ ಜಮೀನಿನಲ್ಲಿದೆ. ಕಳೆದ ವರ್ಷದ ಜುಲೈ 12ರಂದು ಈ ಜಮೀನನ್ನು ಸಂಸ್ಥೆಗೆ ನೀಡುವಂತೆ ಆಡಳಿತ ಮಂಡಳಿ ಮನವಿ ಮಾಡಿತ್ತು. ಈ ಪ್ರಸ್ತಾವವನ್ನು ಸಂಘದ ನಿರ್ದೇಶಕರ ಸಭೆಯಲ್ಲಿ ಮಂಡಿಸಲಾಗಿತ್ತು. ಆಸ್ತಿ ಕೊಡಬಾರದು ಎಂಬ ನಿರ್ಧಾರಕ್ಕೆ ಸಂಘ ಬಂದಿತ್ತು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣಮೂರ್ತಿ ಈ ಆರೋಪಗಳನ್ನು ಮಾಡಿದ್ದಾರೆ’ ಎಂದು ನಂಜುಂಡಸ್ವಾಮಿ ದೂರಿದರು.

‘ಕ್ರಯವಾಗಿರುವ ಜಮೀನನ್ನು ಖಾತೆ ಮಾಡಿಕೊಡುವಂತೆ ಸಲ್ಲಿಸಿರುವ ಅರ್ಜಿಯನ್ನು ತಹಶೀಲ್ದಾರರು ತಿರಸ್ಕರಿಸಿದ್ದಾರೆ. ಹಾಗಿದ್ದರೂ, ಇವರೆಲ್ಲರೂ ಹಾಸ್ಟೆಲ್‌ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ’ ಎಂದು ನಂಜುಂಡಸ್ವಾಮಿ ಹೇಳಿದರು.

ತಹಶೀಲ್ದಾರ್‌ ವರ್ಗಾವಣೆಗೆ ಪುಟ್ಟರಂಗಶೆಟ್ಟಿ ಪ್ರಯತ್ನಿಸಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಂಘದ ಖಜಾಂಚಿ ಸಿ.ಕೆ.ರವಿಕುಮಾರ್‌, ‘ಅವರು ಪತ್ರ ಬರೆದಿರುವುದಕ್ಕೂ ಹಾಸ್ಟೆಲ್‌ ವಿಚಾರಕ್ಕೂ ಸಂಬಂಧವಿಲ್ಲ. ಕೃಷ್ಣಮೂರ್ತಿಯವರು ಕೊಳ್ಳೇಗಾಲದಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡಿಲ್ಲವೇ’ ಎಂದು ಪ್ರಶ್ನಿಸಿದರು.

ಸಂಘದ ಕಾರ್ಯದರ್ಶಿ ರಾಜಗೋಪಾಲ್‌, ನಿರ್ದೇಶಕರಾದ ಜ್ಯೋತಿಗೌಡನಪುರ ವೆಂಕಟೇಶ್‌, ಆಲೂರು ಮಲ್ಲಣ್ಣ, ಅಮಚವಾಡಿ ಕಾಂತರಾಜು, ರಾಮಸಮುದ್ರ ನಾಗರಾಜು ಇದ್ದರು.

‘ಅಧ್ಯಕ್ಷರಾಗುವ ಆಸೆ’ ಪ್ರತಿಭಟನಾ ಸಭೆಯಲ್ಲಿ ಕೃಷ್ಣಮೂರ್ತಿಯವರು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಬೇಕು ಎಂಬ ಕೂಗು ಬಂದಿರುವ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು ‘ಅವರಿಗೆ ಅಧ್ಯಕ್ಷರಾಗಬೇಕು ಎಂದಿದೆ. ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿದ್ದಾಗ ಪ್ರೊ.ಮಲ್ಲಿಕಾರ್ಜುನಪ್ಪ ಅವರನ್ನು ಕೃಷ್ಣಮೂರ್ತಿ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಸಚಿವರ ಮೇಲೆ ಕಣ್ಣಿಟ್ಟು ಪುಟ್ಟರಂಗಶೆಟ್ಟಿಯವರನ್ನು ಸೋಲಿಸಲು ಯತ್ನಿಸಿದ್ದರು. ಎಲ್ಲವೂ ನಮಗೆ ಗೊತ್ತಿದೆ’ ಎಂದು ನಂಜುಂಡಸ್ವಾಮಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT